Advertisement

ಪರೇಶ್‌ ಕೊಲೆ ಪ್ರಕರಣ: ಎನ್‌ಐಎಗೆ ಒಪ್ಪಿಸಲು ಆಗ್ರಹ

06:25 AM Dec 10, 2017 | |

ಬೆಂಗಳೂರು: ಹೊನ್ನಾವರದಲ್ಲಿ ನಡೆದಿರುವ ಮೊಗವೀರ ಸಮುದಾಯದ ಪರೇಶ್‌ ಮೇಸ್ತಾ ಹತ್ಯೆ ಪ್ರಕರಣದ ಉನ್ನತ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದ ಮೂಲಕವೇ ಮಾಡಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

Advertisement

ಪರೇಶ್‌ ಮೇಸ್ತಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದರಲ್ಲಿ ಪ್ಯಾಫ‌ುಲರ್‌ ಫ್ರಂಟ್‌ ಆಪ್‌ ಇಂಡಿಯಾ(ಪಿಎಫ್ಐ) ಸಂಘಟನೆಯ ಕಾರ್ಯಕರ್ತರ ಕೈವಾಡ ಇದೆ. ಮುಖದ ಮೇಲೆ ಕಾದ ಎಣ್ಣೆ ಸುರಿದು ವಿಕಾರಗೊಳಿಸಲಾಗಿದೆ. ಕೈ ಮೇಲೆ ಇದ್ದ ಜೈ ಶ್ರೀರಾಮ್‌ ಹಚ್ಚೆಯನ್ನು ಕೆತ್ತಿ ವಿರೂಪಗೊಳಿಸಿದ್ದಾರೆ. ಹಿಂಸಿಸಿ, ಕ್ರೂರ ರೀತಿಯಲ್ಲಿ ಕೊಂದಿದ್ದಾರೆ. ಇದರ ತನಿಖೆಯನ್ನು ಕೂಡಲೇ ಎನ್‌ಐಎಗೆ ಒಪ್ಪಿಸಬೇಕು ಎಂದು ಶನಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಹೊನ್ನಾವರದಲ್ಲಿ ಕೋಮುಗಲಭೆ ನಡೆಯುವ ಸಂಭವ ಇದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಡಿ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದರು. ಹೊನ್ನಾವರ ಮಾರ್ಗವಾಗಿ ಶಿರಸಿಗೆ ಹೋಗಿದ್ದಾರೆ. ಡಿ.6ರಂದೇ ಪರೇಶ್‌ ಮೇಸ್ತಾನ ಕೊಲೆ ನಡೆದಿತ್ತು. ಮುಖ್ಯಮಂತ್ರಿಗಳ ಪ್ರವಾಸದ ನಿಮಿತ್ತ ಇದನ್ನು ಬಹಿರಂಗ ಪಡಿಸಿಲ್ಲ. ಇದೊಂದು ವ್ಯವಸ್ಥಿತ ಕೊಲೆ, ಸರ್ಕಾರದ ಷಡ್ಯಂತರವೂ ಇದೆ ಎಂದು ಆರೋಪಿಸಿದರು.

ನಾನೂ ಹಿಂದು ಎಂದು ಹೇಳಿಕೆ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದು ದೇವಸ್ಥಾನದ ಮೇಲಿನ ದಾಳಿ ಹಾಗೂ ಹಿಂದು ಯುವಕರ ಹತ್ಯೆಯ ಬಗ್ಗೆ ಪ್ರತಿಕ್ರಿಯೇ ನೀಡುತ್ತಿಲ್ಲ ಏಕೇ?, ಚುನಾವಣೆ ಗೆಲ್ಲಲು ಇನ್ನೆಷ್ಟು ಬಲಿ ಬೇಕು? ಬಿಜೆಪಿ ನಾಯಕರಿಗೆ, ಹಿಂದು ಸಂಘಟನೆಯ ಕಾರ್ಯಕರ್ತರಿಗೆ ಜೀವಭಯ ಉಂಟಾಗಿದೆ. ಮನೆಯಿಂದ ಹೊರಗೆ ಹೋದವರು ವಾಪಾಸ್‌ ಆಗುತ್ತಾರೆಂಬ ಗ್ಯಾರೆಂಟಿ ಇಲ್ಲದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಿಎಫ್ಐ-ಐಸಿಸ್‌ ನಂಟು:
ಕರ್ನಾಟಕದ ಪಿಎಫ್ಐ ಸದಸ್ಯರಿಗೆ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ ನಂಟಿದೆ. ಪಿಎಫ್ಐ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆ ಸಂಘಟನೆಗೆ ಅರಮನೆ ಮೈದಾನದಲ್ಲಿ ಹಾಗೂ ಮಂಗಳೂರಿನ ಸೂಕ್ಷ್ಮ ಪ್ರದೇಶದಲ್ಲಿ ಸಮಾವೇಶ ಮಾಡಲು ಅವಕಾಶ ನೀಡಿದ್ದಾರೆ.

Advertisement

ಸಮಾವೇಶದಲ್ಲಿ ದೇಶದ ವಿರುದ್ಧ, ಹಿಂದುಗಳ ವಿರುದ್ಧ ಭಾಷಣ ಮಾಡಿದರೂ ಯಾವುದೇ ಕ್ರಮ ಆಗಿಲ್ಲ. ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ರಾಜ್ಯ ಸರ್ಕಾರವೇ ಅವರಿಗೆ ಕುಮ್ಮಕ್ಕು ನೀಡುತ್ತಿದೆ. ಶರತ್‌ ಮಡಿವಾಳ ಮತ್ತು ರುದ್ರೇಶ್‌ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಸಂಘಟನೆಯ ಕೈವಾಡ ಇರುವುದು ಸಾಬೀತಾಗಿದೆ. ಪರೇಶ್‌ ಮೇಸ್ತಾ ಕೊಲೆಯಲ್ಲೂ ಅವರ ಕೈವಾಡ ಇದೆ. ಹೀಗಾಗಿಯೇ ಅಷ್ಟೊಂದು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂದು ದೂರಿದರು.

ಪೊಲೀಸ್‌ ವ್ಯವಸ್ಥೆ ನಿಯಂತ್ರಣ:
ರಾಜ್ಯ ಪೊಲೀಸರು ಅತ್ಯಂತ ಪ್ರತಿಭಾವಂತರು ಹಾಗೂ ಬುದ್ಧಿಶಾಲಿಗಳಾಗಿದ್ದಾರೆ. ಯಾವುದೇ ಪ್ರಕರಣವನ್ನು ಬೇಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಸ್ವತಂತ್ರ್ಯವಾಗಿ ಸೇವೆ ಸಲ್ಲಿಸಲು ಬಿಡುತ್ತಿಲ್ಲ. ಕೆಂಪಯ್ಯನವರ ಮೂಲಕ ಪೊಲೀಸ್‌ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿದ್ದಾರೆ. ಆಯಕಟ್ಟಿನ ಜಾಗದಲ್ಲಿ ತಮಗೆ ಬೇಕಾದ ಅಧಿಕಾರಿಗಳ ನೇಮಕ ಮಾಡುತ್ತಿದ್ದಾರೆ. ಲೋಕಾಯುಕ್ತದಂತೆ ಮಾನವ ಹಕ್ಕುಗಳ ರಕ್ಷಣಾ ಆಯೋಗವನ್ನು ಹಲ್ಲಿಲ್ಲದ ಹಾವಿನಂತೆ ಮಾಡಿದ್ದಾರೆ. ಅರಾಜಕತೆ ಮತ್ತು ತುಘಲಕ್‌ ದರ್ಬಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೃಹ ಸಚಿವ ರಾಮಲಿಂಗಾರೆಡ್ಡಿಯವರು ಪಿಎಫ್ಐ ಪರವಾಗಿ ಮಾತನಾಡುತ್ತಾರೆ. ಗೃಹ ಇಲಾಖೆಗೆ ರಾಮಲಿಂಗಾರೆಡ್ಡಿ ಬೇಡವೇ ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಪಿಎಫ್ಐ ಮುಖವಾಣಿಯಾಗಿರುವ ಎಸ್‌ಡಿಪಿಐ ಹಾಗೂ ಎಂಐಎಂ ಪಕ್ಷದ ಜತೆ ಮಾತುಕತೆ ನಡೆಸುತ್ತಿದ್ದಾರೆ.
-ಶೋಭಾ ಕರಂದ್ಲಾಜೆ, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next