Advertisement

ಶಾಲೆಗೆ ಮಕ್ಕಳನ್ನು ಕಳುಹಿಸದಿದ್ರೆ ಪೋಷಕರಿಗೆ ಶಿಕ್ಷೆ

01:16 PM May 27, 2017 | Team Udayavani |

ಹುಣಸೂರು: ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಶಿಕ್ಷಣ ಇಲಾಖೆವತಿಯಿಂದ ನಗರದಲ್ಲಿ 2017-2018ನೇ ಸಾಲಿನ ವಿಶೇಷ ಶಾಲಾ ದಾಖಲಾತಿ ಆಂದೋಲನ ನಡೆಸಲಾಯಿತು. ಈ ವೇಳೆ ಮಾತನಾಡಿದ ಶಿಕ್ಷಣಾಧಿಕಾರಿ ಶಿವಣ್ಣ , ಹುಣಸೂರು ಕಾಡಂಚಿನ ಪ್ರದೇಶವಾಗಿದ್ದು ಕೊಡಗು, ಮಂಗಳೂರು ನಂತಹ ನಗರಗಳಿಗೆ ಪೋಷಕರು ಕೂಲಿಗೆ ಹೋಗುವುದರಿಂದ ಜೊತೆಗೆ ಮಕ್ಕಳನ್ನು ಕರೆದೊಯ್ಯುತ್ತಾರೆ.

Advertisement

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನೋಡಲ್‌ ಅಧಿಕಾರಿಗಳು ಸಹ ಉಸ್ತುವಾರಿ ವಹಿಸಿ ಇಂತಹ ಮಕ್ಕಳ ಪೋಷಕರನ್ನು ಮನವೊಲಿಸಿ ಮರಳಿ ಶಾಲೆಗೆ ಕರೆತರಬೇಕು. ಜೊತೆಗೆ 14 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದಲ್ಲಿ ಅಂತಹ ಪೋಷಕರಿಗೆ ಶಿಕ್ಷೆಯೂ ಕಾದಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕೆಂದು ಮನವಿ ಮಾಡಿದರು.

ತಾಲೂಕಿನಲ್ಲಿ 240 ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿದ್ದು, ಈಗಾಗಲೇ 180 ಮಕ್ಕಳನ್ನು ದಾಖಲಿಸಲಾಗಿದೆ. 2017ನೇ ಸಾಲಿನಲ್ಲಿ 27 ಮಕ್ಕಳನ್ನು ಪತ್ತೆ ಮಾಡಿ ಇವರಲ್ಲಿ 5 ಮಕ್ಕಳನ್ನು ನೋಂದಾಯಿಸಲಾಗಿದೆ ಎಂದು ತಿಳಿಸಿದರು.

ಸರಕಾರವು 2010ರಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೆ ತಂದಿದ್ದು, 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಗುಣಾತ್ಮಕ ಶಿಕ್ಷಣ ನೀಡುವುದು ಹಾಗೂ ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ಸಮಾಜದ ಮೇಲಿದೆ ಎಂದರು.

ಜಾಥಾಕ್ಕೆ ತಾಪಂ ಉಪಾಧ್ಯಕ್ಷ ಪ್ರೇಮಕುಮಾರ್‌ ಚಾಲನೆ ನೀಡಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಬೇಕಾದ ಪೂರಕ ವಾತಾವರಣ ನಿರ್ಮಿಸಿ ಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

Advertisement

ಸಿಡಿಪಿಒ ನವೀನ್‌ ಕುಮಾರ್‌ ಮಾತನಾಡಿ, ಶಾಲೆಯಿಂದ ಹೊರಗುಳಿದಿರುವ ಹಾಗೂ ಓದುವ ಸಮಯದಲ್ಲಿ ಹೋಟೆಲ್‌, ವರ್ಕ್‌ ಶಾಪ್‌, ಅಂಗಡಿ ಮತ್ತಿತರೆಡೆ ಕೆಲಸ ಮಾಡುವ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸುವ ಕೆಲಸ ಎಲ್ಲರಿಂದಾದಾಗ ಮಾತ್ರ ಮಕ್ಕಳಿಗೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಶಿವಕುಮಾರ್‌, ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನವೀರಪ್ಪ, ಬಿಆರ್‌ಸಿ ಮೊಗಣ್ಣ, ಸಂತೋಷ್‌ ಕುಮಾರ್‌, ತಾಲೂಕು ಜೇನುಕುರುಬರ ವಿಶೇಷ ಅಧಿಕಾರಿ ನಾರಾಯಣಗೌಡ, ಆರೋಗ್ಯ ಇಲಾಖೆಯ ರಾಜೇಶ್ವರಿ, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್‌, ಸಹಕಾರ ಸಂಘದ ಅಧ್ಯಕ್ಷ ಬಾಲರಾಜ್‌, ಬಿಆರ್‌ಪಿ ನಾಗರಾಜ್‌, ಶಿಕ್ಷಣ ಸಂಯೋಜಕ ಹೊನ್ನಾಚಾರ್‌, ಮಹದೇವ್‌, ಸಿಆರ್‌ಪಿ, ಬಿಆರ್‌ಪಿಗಳು ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next