ಬೆಳ್ತಂಗಡಿ: ಬೋಧಕರ ಪ್ರಯತ್ನದ ಜತೆಗೆ ಪಾಲಕರ ಸಹಕಾರವಿದ್ದಾಗ ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಸುಲಭ ಸಾಧ್ಯವಾಗುತ್ತದೆ ಎಂದು ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ| ಕೆ. ಎಸ್. ಮೋಹನ್ ನಾರಾಯಣ ಹೇಳಿದರು.
ಎಸ್‌ಡಿಎಂ ಕಾಲೇಜಿನ ಸಮ್ಯಗರ್ಶನ ಸಭಾಂಗಣದಲ್ಲಿ ಶನಿವಾರ ನಡೆದ ಶಿಕ್ಷಕ ಮತ್ತು ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ನಾವು ಒಳ್ಳೆಯ ಬದಲಾವಣೆಗಳನ್ನು ಕಾಣಬೇಕಾದರೆ ಶಿಕ್ಷಕರು ಮಾತ್ರವಲ್ಲದೇ ಪಾಲಕರ ಪಾಲು ಬಹುಮುಖ್ಯ. ಪಾಲಕರು ಪೂರಕ ವಾತಾವರಣ ನಿರ್ಮಿಸಬೇಕು. ತಮ್ಮ ನಿಲುವನ್ನು ವಿದ್ಯಾರ್ಥಿಗಳ ಮೇಲೆ ಹೇರದೆ, ಅವರ ಭಾವನೆಗಳಿಗೆ ಸ್ಪಂದಿಸಬೇಕು. ಇದಕ್ಕೆ ಪಾಲಕರ ಸಹಕಾರ ಬಹಳ ಅಗತ್ಯ ಎಂದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ. ಹಲವು ಕೌಶಲಾಧಾರಿತ ತರಬೇತಿಗಳನ್ನು ನೀಡಲಾಗುತ್ತಿದೆ. ಹೆತ್ತವರು ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ನಿರಂತರವಾಗಿ ಗಮನಿಸುತ್ತಿರಬೇಕು. ಬೋಧಕರ ಮೂಲಕ ವಿವರಗಳನ್ನು ಪಡೆದು ಅದಕ್ಕನುಗುಣವಾಗಿ ನಿಗಾ ವಹಿಸಬೇಕು. ಹಾಗಾದಾಗ ಮಾತ್ರ ವಿದ್ಯಾರ್ಥಿಯ ಸರ್ವತೋಮುಖ ಏಳಿಗೆ ಸಾಧ್ಯ ಎಂದರು.
ರಾಜಶೇಖರ್ ಹೆಬ್ಟಾರ್ ಮಾತನಾಡಿ ಕಾಲೇಜಿನ ಆಭಿವೃದ್ಧಿಗೆ ಎಲ್ಲಾ ಪಾಲಕರು ಸಹಕಾರವನ್ನು ನೀಡಬೇಕು ಎಂದರು.
ಹೆತ್ತವರು ಕಾಲೇಜಿನ ಅಭಿವೃದ್ಧಿಯ ಕುರಿತಾಗಿ ಪ್ರಾಂಶುಪಾಲರೊಂದಿಗೆ ಮಾತುಕತೆ ನಡೆಸಿದರು. ಶಿಕ್ಷಕ – ಹೆತ್ತವರ ಸಂಘದ ಅಧ್ಯಕ್ಷೆ ಆಶಾಕಿರಣ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ರಶ್ಮಿ ವಂದಿಸಿದರು. ವಾಣಿಜ್ಯ ವಿಭಾಗದ ಮಾಲಿನಿ ಕಾರ್ಯಕ್ರಮ ನಿರೂಪಿಸಿದರು.