Advertisement

ಪೋಷಕರು, ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಗೊಂದಲ

11:50 PM Feb 27, 2022 | Team Udayavani |

ಬೆಂಗಳೂರು: ಯುದ್ಧ ಪೀಡಿತ ಉಕ್ರೇನ್‌ನಿಂದ ಜೀವ ಉಳಿಸಿಕೊಳ್ಳಲು ತಾಯ್ನಾಡಿಗೆ ವಾಪಸ್‌ ಆಗಿರುವ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸವನ್ನು ಎಲ್ಲಿ ಮುಂದುವರಿಸಬೇಕು ಎನ್ನುವ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

Advertisement

ಕಳೆದ ನಾಲ್ಕು ದಿನಗಳಿಂದ ರಷ್ಯಾ ದಾಳಿಗೆ ಸಿಲುಕಿ ಉಕ್ರೇನ್‌ ರಾಷ್ಟ್ರ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಅಲ್ಲಿಗೆ ಎಂಬಿಬಿಎಸ್‌ ಸೇರಿ ಉನ್ನತ ಶಿಕ್ಷಣ ಕಲಿಯಲು ರಾಜ್ಯದಿಂದ ತೆರಳಿದ್ದ ವಿದ್ಯಾರ್ಥಿಗಳ ಪೋಷಕರು, ಮಕ್ಕಳು ಹೇಗಾದರೂ ಮಾಡಿ ವಾಪಸ್‌ ಮನೆ ಸೇರಿದರೆ ಸಾಕು, ಇಲ್ಲಿಯೇ ಏನಾದರೂ ಕಲಿಯಬಹುದೆಂಬ ಮನಸ್ಥಿತಿಗೆ ಬಂದಿದ್ದಾರೆ.

ಆದರೆ, ವಿದ್ಯಾರ್ಥಿಗಳು ಅಲ್ಲಿ ಕಡಿಮೆ ಖರ್ಚಿನಲ್ಲಿ ಎಂಬಿಬಿಎಸ್‌ನಂತಹ ಶಿಕ್ಷಣ ಗುಣಮಟ್ಟದಲ್ಲಿ ಸಿಗುವುದರಿಂದ ಯುದ್ಧ ಮುಗಿದ ಅನಂತರ ಮತ್ತೆ ಅಲ್ಲಿಗೆ ಹೋಗುವ ಹುಮ್ಮಸ್ಸಿನಲ್ಲಿದ್ದಾರೆ.

ಉಕ್ರೇನ್‌ ಶಾಂತವಾಗುತ್ತೆ, ಮತ್ತೆ ಅಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುತ್ತೇವೆ. ವಿದ್ಯಾಭ್ಯಾಸ ಹಾಗಿರಲಿ, ಜೀವ ಉಳಿದರೆ ಸಾಕು ಎಂದು ಪಶ್ಚಿಮ ಉಕ್ರೇನ್‌ ಪ್ರದೇಶದಿಂದ ಎದ್ದು ಬಿದ್ದು ತಾಯ್ನಾಡು ಸೇರಿದ ಬೆಂಗಳೂರಿನ ವಿದ್ಯಾರ್ಥಿನಿ ಸ್ವಾತಿ ಎಂಬ ವಿದ್ಯಾರ್ಥಿನಿಯ ಭರವಸೆಯ ಮಾತು. ಯುದ್ಧ ಪೀಡಿತ ದೇಶದಿಂದ ಮೊದಲ ಬ್ಯಾಚ್‌ನಲ್ಲಿ ರವಿವಾರವಷ್ಟೇ ಬೆಂಗಳೂರಿಗೆ ಬಂದಿಳಿದ ಅನಂತರ ಉದಯವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ವಿವಿ ಏನು ಹೇಳುತ್ತದೆ?
ಯುದ್ಧದ ಪರಿಸ್ಥಿತಿಯಲ್ಲಿ ಬುಕೊವಿನಿಯನ್‌ ಸ್ಟೇಟ್‌ ಮೆಡಿ ಕಲ್‌ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳೊಂದಿಗೆ ಇರುವುದಾಗಿ ಭರವಸೆ ನೀಡಿತ್ತು. ಹಾಸ್ಟೆಲ್‌ನಿಂದ ಹೊರಗಡೆ ಹೋಗಲು ಅವಕಾಶ ಇರಲಿಲ್ಲ. ಅನಾವಶ್ಯಕವಾಗಿ ಓಡಾಡು ವಂತಿರಲಿಲ್ಲ. ಆದರೆ, ಕೀವ್‌ ವಿಮಾನ ನಿಲ್ದಾಣ ಸ್ಥಗಿತಗೊಂಡು ಯುದ್ಧದ ಭೀಕರತೆ ಹೆಚ್ಚಳವಾದ ಅನಂತರ ತಮ್ಮ ದೇಶಗಳಿಗೆ ಹಿಂತಿರುಗಲು ಅನುಮತಿ ನೀಡಿದೆ ಎಂದು ತಿಳಿಸಿದರು.

Advertisement

ಮೊದಲ ಸೆಮಿಸ್ಟರ್‌ ನಂತರ ಮಾ.11ರ ವರೆಗೆ ರಜೆ ನೀಡಿದೆ. ನಂತರ ಮುಂದಿನ ಬೆಳವಣಿಗೆಗಳು ಹಾಗೂ ಪರಿಸ್ಥಿತಿ ತಿಳಿದು ಆನ್‌ಲೈನ್‌ ಮೂಲಕ 2ನೇ ಸೆಮಿಸ್ಟರ್‌ ಆರಂಭಿಸಲು ತಿಳಿಸಿದೆ ಎನ್ನುತ್ತಾರೆ.

ವಿದ್ಯಾರ್ಥಿಗಳ ಭವಿಷ್ಯ
ರಾಜ್ಯದ ನಿಲುವೇನು ?
ಉಕ್ರೇನ್‌ನಿಂದ ಭಾರತಕ್ಕೆ ವಾಪಸ್‌ ಆಗಿರುವ ವಿದ್ಯಾರ್ಥಿಗಳು ಭಾರತದಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಲು ಒಲವು ತೋರಿದರೆ, ಅವರಿಗೆ ಅವಕಾಶ ಮಾಡಿಕೊಡುವ ಕುರಿತಂತೆ ಕೇಂದ್ರ ಸರಕಾರವು ನಿರ್ಣಯ ಕೈಗೊಳ್ಳಬೇಕಿದೆ. ರಾಜ್ಯ ಸರಕಾರವು ನಿರ್ಧರಿಸಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಉಕ್ರೇನ್‌ನ ಯುದ್ಧ ಪೀಡಿತ ಪ್ರದೇಶದಿಂದ ವಾಪಸಾಗಿರುವ ಭಾಗಶಃ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸು ವ್ಯಾಸಂಗ ಮಾಡುತ್ತಿದ್ದಾರೆ. ದೇಶದಲ್ಲಿ ವೈದ್ಯಕೀಯ ಕೋರ್ಸ್‌ಗೆ ಅವಕಾಶ ಕಲ್ಪಿಸಲು ಸಾಧ್ಯ ವಾಗುವುದಿಲ್ಲ. ಬೇರೆ ಕೋರ್ಸ್‌ಗಳಿಗೆ ಹೋಗು ವುದಾಗಿ ತಿಳಿಸಿದರೂ ಪ್ರವೇಶ ಪರೀಕ್ಷೆ ನಡೆಸಬೇಕಾಗುತ್ತದೆ.

ಮತ್ತೆ ತೆರಳುತ್ತೇವೆ
ಯುದ್ಧದಿಂದ ಹತಾಶರಾಗಿರುವ ಉಕ್ರೇನ್‌ ಮತ್ತೆ ಮೊದಲಿನ ಸ್ಥಿತಿಗೆ ಬರಲಿದೆ. ಶಾಂತ ರೀತಿಯ ವಾತಾವರಣ ನಿರ್ಮಾಣವಾಗಲಿದೆ ಎಂಬ ನಂಬಿಕೆ ಇದೆ. ಜನದಟ್ಟಣೆ ಕಡಿಮೆ ಇದೆ, ಕೊರೊನಾ ವೇಳೆ ಉಕ್ರೇನ್‌ ಬೆಟರ್‌ ಅನ್ಸುತ್ತೆ, ಸೋಂಕು ಹರಡುವಿಕೆಯೂ ಕಡಿಮೆ, ಉತ್ತಮ ವಾತಾವರಣವಿದೆ, ಸುರಕ್ಷಿತ ಪ್ರದೇಶವಾಗಿದೆ. ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ದೊರೆಯುತ್ತದೆ. ಈ ಎಲ್ಲ ಕಾರಣಗಳಿಂದ ಭವಿಷ್ಯದ ದೃಷ್ಟಿಯಿಂದ ವಿದ್ಯಾಭ್ಯಾಸಕ್ಕಾಗಿ ಮತ್ತೆ ತೆರಳುತ್ತೇನೆಂದು ತಿಳಿಸಿದರು. ಭಾರತದಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಮಾಡಲು ಕೋಟ್ಯಂತರ ರೂ. ಬೇಕಾಗುತ್ತದೆ. ಉಕ್ರೇನ್‌ನಲ್ಲಿ 30ರಿಂದ 35 ಲಕ್ಷ ರೂ.ಗಳಲ್ಲಿ 6 ವರ್ಷಗಳ ವೈದ್ಯಕೀಯ ಕೋರ್ಸ್‌ ಮುಗಿಯುತ್ತದೆ. ಈ ಕಾರಣದಿಂದಲೇ ಹೆಚ್ಚಿನ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳುತ್ತಾರೆಂದು ಹೇಳಿದರು.

ಇಲ್ಲೇ ಬಿಇ ಮಾಡುವಂತೆ ಪೋಷಕರ ಒತ್ತಾಯ
ಮತ್ತೆ ಉಕ್ರೇನ್‌ಗೆ ಹೋಗಿ ವೈದ್ಯಕೀಯ ಕೋರ್ಸ್‌ ಮಾಡುವ ಬದಲು ಕರ್ನಾಟಕದಲ್ಲಿಯೇ ಎಂಜಿನಿಯರಿಂಗ್‌ ಮಾಡುವಂತೆ ಪೋಷಕರು ಸಲಹೆ ನೀಡಿದ್ದಾರೆ. ಮತ್ತೆ ಎಂಜಿನಿಯರಿಂಗ್‌ ಸೇರಿದರೆ ಹೇಗೆ ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಮೂಡಿದೆ. ಯುದ್ಧ ಎಷ್ಟು ದಿನಗಳವರೆಗೆ ಮುಂದುವರಿಯಲಿದೆ ಎನ್ನುವುದರ ಆಧಾರದಲ್ಲಿ ಬಹುತೇಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ನಿರ್ಧಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next