Advertisement

ಅಂಬೇಡ್ಕರ್‌ ವಸತಿ ಶಾಲೆ ಸ್ಥಳಾಂತರ ಖಂಡಿಸಿ ಪೋಷಕರ ಪ್ರತಿಭಟನೆ

10:15 PM Oct 21, 2019 | Lakshmi GovindaRaju |

ಅರಕಲಗೂಡು: ಅಂಬೇಡ್ಕರ್‌ ವಸತಿ ಶಾಲೆಯ ಸ್ಥಳಾಂತರ ಖಂಡಿಸಿ ಪೋಷಕರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ಮಂದೆ ಸೋಮವಾರ ಧರಣಿ ನಡೆಸಿದರು. ಮಕ್ಕಳಿಗೆ ಮೂಲಭೂತ ಸೌಕರ್ಯ ನೀಡದಿದ್ದರೆ ಶಾಲಾ ವರ್ಗಾವಣೆ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿದರು.

Advertisement

ಮೊರಾರ್ಜಿ ಶಾಲೆಯಲ್ಲೇ ಅಂಬೇಡ್ಕರ್‌ ಶಾಲೆ: ಕಳೆದ ಮೂರು ವರ್ಷಗಳಿಂದ ಬರಗೂರು ಮೊರಾರ್ಜಿ ದೇಸಾಯ ವಸತಿ ಶಾಲೆಯಲ್ಲಿ ಅಂಬೇಡ್ಕರ್‌ ವಸತಿ ಶಾಲೆಯನ್ನು ನಡೆಸುತ್ತಿದ್ದು, ಈ ಶಾಲೆಯಲ್ಲಿ 6-8 ನೇ ತರಗತಿ ವರೆಗೆ 150 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಶಾಲೆಗೆ ಸ್ವಂತ ಕಟ್ಟಡ ವಿಲ್ಲದ ಕಾರಣ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಪೋಷಕರು ನಮ್ಮ ಶಾಲೆಯ ಮಕ್ಕಳಿಗೆ ಸ್ಥಳಾವಕಾಶಕ್ಕೆ ತೊಂದರೆಯಾಗುತ್ತಿರುವುದರಿಂದ ಈ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಸ್ಥಳ ಪಡೆದಿರುವ ಅಂಬೇಡ್ಕರ್‌ ವಸತಿ ಶಾಲೆ ಮತ್ತು ಇಂದಿರಾಗಾಂಧಿ ವಸತಿ ಶಾಲೆ ಸ್ಥಳಾಂತರಿಸಿಕೊಳ್ಳುವಂತೆ ಒತ್ತಾಯ ಹೇರಿದ್ದರು.

ಅಂಬೇಡ್ಕರ್‌, ಇಂದಿರಾ ಶಾಲೆ ಸ್ಥಳಾಂತರ: ಈ ಹಿನ್ನೆಲೆಯಲ್ಲಿ ಅಂಬೇಡ್ಕರ್‌ ವಸತಿ ಶಾಲೆಯನ್ನು ಅರಕಲಗೂಡು ಪಟ್ಟಣಕ್ಕೆ ಇಂದಿರಾಗಾಂಧಿ ವಸತಿ ಶಾಲೆಯನ್ನು ಕೆರಳಾಪುರಕ್ಕೆ ಸ್ಥಳಾಂತರಿಸಲಾಯಿತು. ದಸರಾ ರಜೆಯಲ್ಲಿದ್ದ ಮಕ್ಕಳು ಸೋಮವಾರ ಶಾಲೆಗೆ ಪೋಷಕರೊಂದಿಗೆ ಬಂದಾಗ ಶಾಲೆ ನಡೆಸಲು ಮುಂದಾದ ಕಟ್ಟಡವನ್ನು ಕಂಡು, ಪೋಷಕರು ಶೀತ ಪೀಡಿತ ಪ್ರದೇಶದಲ್ಲಿ ಶಾಲೆ ತೆರೆಯಲು ಮುಂದಾಗಿರುವುದು ಖಂಡನೀಯ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದೇ ಇರುವುದನ್ನ ಕಂಡು ಮುಖ್ಯ ಶಿಕ್ಷಕಿ ರೂಪರವರೊಂದಿಗೆ ವಾಗ್ವಾದಕ್ಕಿಳಿದರು.

ಸಮಾಧಾನ ಪಡಿಸಲು ಯತ್ನಿಸಿದ ಶಿಕ್ಷಕಿ: ಪೋಷಕರನ್ನು ಸಮಾಧಾನಗೊಳಿಸಲು ಮುಂದಾದ ಮುಖ್ಯ ಶಿಕ್ಷಕಿ ರೂಪಾ ಅವರು ತಾತ್ಕಾಲಿಕವಾಗಿ ಈ ಕಟ್ಟಡವನ್ನು ಬಳಸಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ದೊಡ್ಡಮಗ್ಗೆ ಕಾವೇರಿ ನೀರಾವರಿ ನಿಗಮದ ವಸತಿಗೃಹದ 3 ಎಕರೆ ಸ್ಥಳದಲ್ಲಿ ನೂತನ ಕಟ್ಟಡ ಪ್ರಾರಂಭಿಸಲಾಗುವುದು ಅಲ್ಲಿಯವರೆಗೆ ಸಹಕರಿಸಿ ಎಂದು ಮನವಿ ಮಾಡಿದರು. ಪೋಷಕರು ಸಮಧಾನಗೊಳ್ಳದೇ ಅವರ ಮನವಿಯನ್ನು ತಿರಸ್ಕರಿಸಿ ಸಮಾಜ ಕಲ್ಯಾಣ ಇಲಾಖಾ ಕಚೇರಿಗೆ ತೆರಳಿ ಘೋಷಣೆ ಕೂಗುತ್ತಾ ಈ ಕೂಡಲೇ ಶಾಲೆಯನ್ನ ಬರಗೂರು ಮೊರಾರ್ಜಿ ಶಾಲೆಯ ಸ್ಥಳಕ್ಕೆ ಸ್ಥಳಾಂತರಿಸಿ ಎಂದು ಆಗ್ರಹಿಸಿ ಪ್ರತಿಭಟಿಸಿದರು.

ಮೂಲ ಸೌಕರ್ಯವಿಲ್ಲದೇ ತೊಂದರೆ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಶಾಲೆಯನ್ನ ಸ್ಥಳಾಂತರ ಮಾಡಿದ್ದರೆ ಯಾವುದೇ ಗೊಂದಲಗಳಾಗುತ್ತಿರಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸ್ಥಳಾಂತರಿಸುವ ಆತುರದಲ್ಲಿ ಮೂಲಭೂತ ಸೌಕರ್ಯಗಳನ್ನ ಗಮನಿಸದೇ ಇಂತಹ ಅಚಾತುರ್ಯಕ್ಕೆ ಅವಕಾಶವಾಗಿದೆ.

Advertisement

ಮೂಲ ಸೌಕರ್ಯ ಕಲ್ಪಿಸಲು ಕ್ರಮ: ಈ ಬಗ್ಗೆ ಸುದ್ದಿಗಾರಗೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಹಾಸನ ಜಿಲ್ಲಾ ಉಪನಿರ್ದೇಶಕ ಶ್ರೀಧರ್‌, ಬರಗೂರು ಮೊರಾರ್ಜಿ ವಸತಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿರುವುದರಿಂದ ಶೈಕ್ಷಣಿಕರ ಚಟುವಟಿಕೆಗಳಿಗೆ ತೊಂದರೆಯಾಗುತ್ತಿತ್ತು. ಇದರ ಬಗ್ಗೆ ಶಾಸಕರ ಗಮನಕ್ಕೆ ತರುವ ಮೂಲಕ ತಾತ್ಕಾಲಿಕವಾಗಿ ಅರಕಲಗೂಡು ಪಟ್ಟಣಕ್ಕೆ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮೂಲ ಸೌಕರ್ಯವಿಲ್ಲವೆಂಬ ಕಾರಣಕ್ಕೆ ಪೋಷಕರು ಧರಣಿ ಮಾಡುತ್ತಿರುವ ವಿಷಯ ತಿಳಿಯಿತು. ಈ ವಿಷಯದ ಬಗ್ಗೆ ತಾಲೂಕು ಸಮಾಜ ಕಲ್ಯಾಣ ಇಲಾಖಾಧಿಕಾರಿಯೊಂದಿಗೆ ಸಮಾಲೋಚಿಸಿ, ಮೂಲ ಸೌಕರ್ಯ ಕಲ್ಪಿಸಲು ಯತ್ನಿಸುತ್ತೇವೆ. ಆ ಸ್ಥಳ ಮಕ್ಕಳಿಗೆ ತೊಂದರೆಯಾಗುವುದಾದರೆ, ಪುನಃ ಬರಗೂರು ಮೊರಾರ್ಜಿ ವಸತಿ ಶಾಲೆಗೆ ಸ್ಥಳಾಂತರಿಸುವ ಬಗ್ಗೆ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆಂದು ತಿಳಿಸಿದರು.

ಮೊರಾರ್ಜಿ ಶಾಲೆಯವರ ಒತ್ತಡಕ್ಕೆ ಮುಣಿದು ಖಾಸಗಿ ಕಟ್ಟಡವನ್ನ ಶಾಸಕರ ಗಮನಕ್ಕೆ ತಂದು ಸ್ಥಳಾಂತರಿಸಿದ್ದೇವೆ. ಆದರೆ ಇಂದು ಪೋಷಕರು ಇದನ್ನ ವಿರೋಧಿಸುತ್ತಿರುವುದರಿಂದ ಈ ಕೂಡಲೇ ಮಕ್ಕಳನ್ನ ಬರಗೂರು ಮೊರಾರ್ಜಿ ಶಾಲೆಗೆ ಪುನಃ ಸ್ಥಳಾಂತರಿಸಿ ಶಾಸಕರ ಸಮ್ಮುಖದಲ್ಲಿ ಪೋಷಕರ ಸಭೆಯನ್ನ ಕರೆದು ಚರ್ಚಿಸಿ ನಂತರ ಸ್ಥಳಾಂತರದ ಬಗ್ಗೆ ತಿರ್ಮಾನ ತೆಗೆದುಕೊಳ್ಳಲಾಗುವುದು.
-ಬಾಗೀರಥಿ ತಾಲೂಕು ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ

ಇಲಾಖೆಯವರು ಗುರುತಿಸಿರುವ ಕಟ್ಟಡ ಶೀತ ಪ್ರದೇಶವಾಗಿದ್ದು, ಮೂಲ ಸೌಕರ್ಯವಿಲ್ಲದ ಕಟ್ಟಡವಾಗಿದೆ. ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನ ಇಂತಹ ಕಟ್ಟಡದಲ್ಲಿ ಹೇಗೆ ಬಿಡುವುದು. ಇಲಾಖೆಯವರು ಬರಗೂರಿನಲ್ಲಿ ಕಟ್ಟಡ ವ್ಯವಸ್ಥೆ ಮಾತ್ರ ಮಾಡಿದ್ದರು. ಮಕ್ಕಳಿಗೆ ಹಾಸಿಗೆ, ಹೊದಿಕೆಯನ್ನು ಮನೆಯಿಂದಲೇ ನೀಡಿದ್ದೆವು. ಸಮವಸ್ತ್ರ ನೀಡಲು 1,200 ರೂ. ಪಡೆದಿದ್ದಾರೆ. ಇಷ್ಟೆಲ್ಲಾ ಸೌಲಭ್ಯಗಳನ್ನ ನಾವೇ ನೀಡಿದರೂ ಮತ್ತೆ ಮಕ್ಕಳನ್ನು ಯಾವುದೇ ಸೌಕರ್ಯಗಳಿಲ್ಲದ ಕಟ್ಟಡಕ್ಕೆ ಕರೆತಂದಿರುವುದು ಬೇಸರದ ಸಂಗತಿ. ಮೂಲ ಸೌಕರ್ಯ ಕಲ್ಪಿಸದಿದ್ದರೆ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತೇವೆ.
-ದಾಕ್ಷಾಯಣಿ, ಪೋಷಕರು

Advertisement

Udayavani is now on Telegram. Click here to join our channel and stay updated with the latest news.

Next