ಶಿರಸಿ: ಸರಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲದಲ್ಲಿ ಇಲ್ಲಿನ ಸರಕಾರಿ ಮಾರಿಕಾಂಬಾ ಪ್ರೌಢ ಶಾಲೆಯ ನೋಟಿಸ್ ಬೋರ್ಡಗೆ ಹಾಕಲಾದ ಮಕ್ಕಳ ಪ್ರವೇಶ ಆಯ್ಕೆ ಆಯ್ಕೆ ಪಟ್ಟಿ ನೋಡಲು ಪಾಲಕರು ಮುಗಿಬಿದ್ದ ಘಟನೆ ನಡೆದಿದೆ.
ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ, ನೂರೂವತ್ತು ವರ್ಷ ಇತಿಹಾಸದ ಮಾರಿಕಾಂಬಾ ಪ್ರೌಢಶಾಲೆ ಇದಾಗಿದೆ. ಪ್ರತೀ ವರ್ಷ 450 ಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು, ಪ್ರಸಕ್ತ ವರ್ಷ 1476 ಮಕ್ಕಳು ಓದುತ್ತಿದ್ದಾರೆ. ಶೈಕ್ಷಣಿಕ ಜೊತೆ, ಕ್ರೀಡೆ, ಸಾಂಸ್ಕೃತಿಕವಾಗಿಯೂ ಮುಂದಿರುವ ಪ್ರೌಢ ಶಾಲೆಗೆ ಬಂದು 750 ಕ್ಕೂ ಹೆಚ್ಚು ಪಾಲಕರು ಪ್ರಸಕ್ತ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಫಾರಂ ಒಯ್ದಿದ್ದರು. ಕಳೆದ ಎಪ್ರಿಲ್ 8 ಹಾಗೂ 10 ರಂದು ಅರ್ಜಿ ಕೊಡಲಾಗಿತ್ತು.
ಶಾಲಾ ಆಡಳಿತ ಮಂಡಳಿಯು ಎಂಟನೇ ವರ್ಗ ಪ್ರವೇಶ ಬಯಸಿದವರಲ್ಲಿ 378, ಒಂಬತ್ತನೇ ವರ್ಗಕ್ಕೆ 150 ಸೇರಿ 528 ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿ ಪಟ್ಟಿ ಪ್ರಕಟಿಸಿತ್ತು. ತಮ್ಮ ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿ ಪಾಲಕರು ತುರುಸಿನಲ್ಲಿ ನೋಟಿಸ್ ಬೋರ್ಡ್ ವೀಕ್ಷಿಸಿದರು.
ಇನ್ನು ಎರಡನೇ ಪಟ್ಟಿ ಕೂಡ ಪ್ರಸಕ್ತ ಪ್ರವೇಶ ಗಮನಿಸಿ ಉಳಿದವರಿಗೆ ಅವಕಾಶ ಕೊಡಲಾಗುತ್ತದೆ ಎಂದು ಶಾಲಾ ಪ್ರಭಾರ ಉಪ ಪ್ರಾಚಾರ್ಯ ಆರ್.ವಿ.ನಾಯ್ಕ ತಿಳಿಸಿದ್ದಾರೆ.
ಸರಕಾರಿ ಶಾಲೆಗೆ ಪ್ರವೇಶ ಬಯಸಿ ಶಿರಸಿ, ಯಲ್ಲಾಪುರ, ಮುಂಡಗೋಡ, ಸಿದ್ದಾಪುರ ಮಾತ್ರವಲ್ಲ, ಹಾವೇರಿ, ಶಿರಾಳ ಕೊಪ್ಪ, ಸೊರಬ, ಸಾಗರ ಭಾಗದಿಂದಲೂ ಮಕ್ಕಳು ಅರ್ಜಿ ಹಾಕಿದ್ದು ವಿಶೇಷವಾಗಿದೆ.