ದೇವನಹಳ್ಳಿ: ಶಿಕ್ಷಣದಿಂದ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ. ಯಾವುದೇ ವಿದ್ಯಾರ್ಥಿ ಶೈಕ್ಷಣಿಕ ಕ್ಷೇತ್ರದಲ್ಲಿ ಮುನ್ನಡೆಯ ಬೇಕಾದರೆ ಪರಿಶ್ರಮ, ಗುರಿ, ಸಾಧನೆ ಮತ್ತು ಉತ್ತಮ ಕಲಿಕೆ ಮುಖ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಶ್ರೀಕಂಠ ತಿಳಿಸಿದರು.
ತಾಲೂಕಿನ ಅತ್ತಿಬೆಲೆ ಗ್ರಾಮದ ಅನಂತ ವಿದ್ಯಾನಿಕೇತನ ಶಾಲೆಯ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಶಿಕ್ಷಣಕ್ಕೆ ಪೋಷಕರು ಹೆಚ್ಚಿನ ಆದ್ಯತೆ ನೀಡಬೇಕು. ಆ ಮೂಲಕ ಅವರನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯಬೇಕು. ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಶಿಸ್ತು ಕಲಿಸಬೇಕು ಎಂದರು.
ದೇಶಕ್ಕೆ, ಸಮಾಜಕ್ಕೆ ಆಸ್ತಿಯಾಗಿ: ಸಮಾಜದಲ್ಲಿ ಮುಂದಿನ ಪೀಳಿಗೆ ಗುರುತಿಸುವ ರೀತಿಯಲ್ಲಿ ದೇಶಕ್ಕೆ, ಸಮಾಜಕ್ಕೆ ಆಸ್ತಿಯಾಗಿ ವಿದ್ಯಾರ್ಥಿಗಳು ಬೆಳೆಯಬೇಕಿದೆ. ಮಕ್ಕಳ ಬಗ್ಗೆ ಪೋಷಕರು ದೊಡ್ಡ ರೀತಿಯ ಕನಸನ್ನು ಇಟ್ಟುಕೊಂಡಿದ್ದು, ಎಷ್ಟೇ ಕಷ್ಟ ಬಂದರೂ ನಿಮ್ಮ ವಿದ್ಯಾಭ್ಯಾಸ ಮಾಡಿಸುವ ನಿಮ್ಮ ತಂದೆ, ತಾಯಿ ಋಣ ತೀರಿಸಲು ಜವಾಬ್ದಾರಿಯಿಂದ ಓದಬೇಕಾಗಿದೆ ಎಂದು ಹೇಳಿದರು.
ವಿದ್ಯಾಭ್ಯಾಸ ಎನ್ನುವುದು ತಪಸ್ಸಿದ್ದಂತೆ. ಓದುವ ಸಮಯದಲ್ಲಿ ನಿಮ್ಮ ಬುದ್ದಿಯನ್ನು ಬೇರೆಡೆಗೆ ವರ್ಗಾಯಿಸಲು ಬಿಡಬಾರದು. ಪೋಷಕರು ತಮ್ಮ ಮಕ್ಕಳನ್ನು ಇತರರ ಮಕ್ಕಳಿಗೆ ಹೋಲಿಸಿ ಮಾತನಾಡಬೇಡಿ. ತಾರತಮ್ಯ ಮಾಡಬೇಡಿ. ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಲು ಪ್ರೋತ್ಸಾಹ ನೀಡಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಒತ್ತು ನೀಡಿ: ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಂಘದ ಗೌರವಾಧ್ಯಕ್ಷ ಎಂ.ಸತೀಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾಡುವ ಮೂಲಕ ತಮ್ಮ ವಿದ್ಯಾಭ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ತಾಲೂಕು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಎಂ.ರಾಮಚಂದ್ರಗೌಡ ಮಾತನಾಡಿದರು. ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಉಪಾಧ್ಯಕ್ಷ ಡಿ.ಎಸ್ .ಧನಂಜಯ, ಕಾರ್ಯದರ್ಶಿ ಎ.ವಿ. ಕೆಂಪೇಗೌಡ, ಸಹ ಕಾರ್ಯದರ್ಶಿ ತ್ಯಾಗರಾಜ್, ಖಜಾಂಚಿ ಸೈಯದ್ ರಫಿಕ್ ಅಹಮದ್, ಅನಂತ ವಿದ್ಯಾನಿಕೇತನ ಪ್ರಾಂಶುಪಾಲೆ ಪದ್ಮಜ, ವಿಹಾನ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಪ್ರತಾಪ್ ಯಾದವ್, ವಿವಿಧ ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕರು ಇದ್ದರು.