ದಾವಣಗೆರೆ: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವ ನವೀನ್ ಗ್ಯಾನಗೌಡರ ಶವವನ್ನು ದಾವಣಗೆರೆಯ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯಕ್ಕೆ ನೀಡಲು ಪೋಷಕರು ಒಪ್ಪಿದ್ದಾರೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಶನಿವಾರ ಕನ್ನಡ ಕುವೆಂಪು ಭವನದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಸಹಸ್ರ ಚಂದ್ರದರ್ಶನ ಅಭಿನಂದನೆ ಮತ್ತು ರಂಗ ವಿಸ್ತಾರ.. ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್‍ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಉಕ್ರೇನ್‌ನಲ್ಲಿ ಮೃತಪಟ್ಟಿರುವ ನವೀನ್ ತಂದೆ ಶೇಖರಗೌಡರು ತಮಗೆ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ. ಸೋಮವಾರ(ಮಾ.೨೧) ರಂದು ಚಳಗೇರಿಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದರು.
ನನ್ನ ಮಗನನ್ನು ಡಾಕ್ಟರ್ ಮಾಡಬೇಕು ಅಂದುಕೊಂಡಿದ್ದೆ. ಆದರೆ, ಅವನು ಡಾಕ್ಟರ್ ಆಗಲಿಲ್ಲ. ಹಾಗಾಗಿ ಮುಂದೆ ಡಾಕ್ಟರ್ ಆಗುವವರಿಗೆ ಅನುಕೂಲ ಆಗಲಿ ಎಂದ ನವೀನ್ ಶವವನ್ನು ಆಸ್ಪತ್ರೆಗೆ ದಾನವಾಗಿ ನೀಡಬೇಕು ಎಂದು ಶೇಖರಗೌಡ ತಮಗೆ ತಿಳಿಸಿದ್ದಾರೆ. ಮಗನನ್ನ ಕಳೆದುಕೊಂಡ ನೋವಿನಲ್ಲೂ ದೇಹವನ್ನ ದಾನ ಮಾಡುವಂತಹ ಶೇಖರಗೌಡರ ಆಲೋಚನೆಗೆ ಎಲ್ಲರ ಪರವಾಗಿ ತಾವು ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಬಗ್ಗೆ ನಮ್ಮ ಮಠದ ಅನೇಕ ವಿದ್ಯಾರ್ಥಿಗಳು, ಪೋಷಕರು ನಮ್ಮ ಗಮನಕ್ಕೆ ತಂದರು. ಓರ್ವ ವಿದ್ಯಾರ್ಥಿಯ ಮೊಬೈಲ್ ನಂಬರ್ ಪಡೆದು ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ವಿದೇಶಾಂಗ ಇಲಾಖೆಯಲ್ಲಿರುವ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಅವರ ಅಳಿಯ ಡಾ| ಶ್ರೀನಿವಾಸ್ ಅವರ ಮೂಲಕ ಉಕ್ರೇನ್ ಮತ್ತು ರಷ್ಯಾದ ವಿದೇಶಾಂಗ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ. ವಿದೇಶಾಂಗ ಇಲಾಖೆಯವರು ದಿನದ ೨೪ ಗಂಟೆಯೂ ಕೆಲಸ ಮಾಡಿದ್ದಾರೆ. ರಷ್ಯಾ ಭಾರತದೊಂದಿಗೆ ಹೊಂದಿರುವ ಹಳೆಯ ಸಂಬಂಧದ ಫಲವಾಗಿ ವೈದ್ಯಕೀಯ ವಿದ್ಯಾರ್ಥಿ ಗಳು ಸುರಕ್ಷಿತವಾಗಿ ಬರಲು ಸಾಧ್ಯವಾಯಿತು ಎಂದು ತಿಳಿಸಿದರು.
ಯುದ್ಧಪೀಡಿತ ಪ್ರದೇಶದಲ್ಲಿದ್ದ ಭಾರತೀಯರು ಭಾರತದ ತ್ರಿವರ್ಣ ಧ್ವಜ ಇಟ್ಟುಕೊಂಡಿದ್ದ ಕಾರಣಕ್ಕೆ ಯಾವುದೇ ಅಪಾಯ ಆಗಲಿಲ್ಲ. ಭಾರತೀಯರು ಮಾತ್ರವಲ್ಲ ಪಾಕಿಸ್ಥಾನ, ನೇಪಾಳದವರು ಸಹ ಭಾರತದ ತ್ರಿವರ್ಣ ಧ್ವಜ ಇಟ್ಟುಕೊಂಡು ಸುರಕ್ಷಿತವಾಗಿ ವಾಪಾಸ್ಸಾಗಿದ್ದಾರೆ. ತ್ರಿವರ್ಣ ಧ್ವಜಕ್ಕೆ ಅಂತಹ ಶಕ್ತಿ ಇದೆ ಎಂದು ಸ್ವಾಮೀಜಿ ಹೆಮ್ಮೆ ವ್ಯಕ್ತಪಡಿಸಿದರು.
ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರ ಸೋಮವಾರ, ಮಾ.21 ರಂದು ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.