ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಆಡಂಕುದ್ರು ಬಳಿ ಬಸ್ಸಿನಿಂದ ಎಸೆಯಲ್ಪಟ್ಟು ಗಂಭೀರ ಗಾಯಗಳೊಂದಿಗೆ ಒಂದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ವಿದ್ಯಾರ್ಥಿ ಮೆದುಳು ನಿಷ್ಕ್ರಿಯಗೊಂಡಿದ್ದು, ಬಾಲಕನ ಅಂಗಾಂಗ ದಾನಕ್ಕೆ ಮುಂದಾಗುವ ಮೂಲಕ ಹೆತ್ತವರು ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಇದನ್ನೂ ಓದಿ:ಉತ್ತರಪ್ರದೇಶ; ಮಸೀದಿಯಲ್ಲಿ ಮಕ್ಕಳ ಅಪಹರಣಕಾರರ ವದಂತಿ- ನಗರದಲ್ಲಿ ಉದ್ವಿಗ್ನತೆ
ಮಂಗಳೂರಿನ ಖಾಸಗಿ ಕಾಲೇಜಿನ ಪ್ರಥಮ ವರ್ಷ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ, ಉಳ್ಳಾಲ ಮಾಸ್ತಿಕಟ್ಟೆ ಬೈದೆರೆಪಾಲು ನಿವಾಸಿ ತ್ಯಾಗರಾಜ್ – ಮಮತಾ ಕರ್ಕೇರ ದಂಪತಿ ಪುತ್ರ ಯಶರಾಜ್ (16) ಮಿದುಳು ನಿಷ್ಕ್ರಿಯಗೊಂಡಿದೆ.
ಘಟನೆಯ ವಿವರ: ಸೆ.7 ರ ಬುಧವಾರ ಬೆಳಗ್ಗೆ ಯಶರಾಜ್ ಉಳ್ಳಾಲ , ಮಾಸ್ತಿಕಟ್ಟೆಯಿಂದ ಸಿಟಿ ಬಸ್ಸಲ್ಲಿ ಕಾಲೇಜಿಗೆ ಪಯಣಿಸುತ್ತಿದ್ದಾಗ ರಾ.ಹೆ. 66ರ ಅಡಂ ಕುದ್ರುವಿನಲ್ಲಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟಿದ್ದ. ತಲೆಗೆ ಗಂಭೀರ ಗಾಯಗೊಂಡಿದ್ದ ಯಶರಾಜ್ ಅನ್ನು ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ವಾರದಿಂದ ನಿರಂತರ ಚಿಕಿತ್ಸೆ ನೀಡುತ್ತಿದ್ದರೂ ಯಶರಾಜ್ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಂದು ಮಧ್ಯಾಹ್ನ ಮೆದುಳು ನಿಷ್ಕ್ರಿಯಗೊಂಡಿದ್ದು, ಹೆತ್ತವರು ಬಾಲಕನ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿ ಯಾಗಿದ್ದ ಯಶರಾಜ್ ಎಸ್ ಎಸ್ ಎಲ್ ಸಿಯಲ್ಲಿ ಅಗ್ರಸ್ಥಾನ ಪಡೆದು ಕಂಪ್ಯೂಟರ್ ವಿಜ್ಞಾನದಲ್ಲಿ ವ್ಯಾಸಂಗ ನಡೆಸುವ ಕನಸನ್ನು ಕಂಡಿದ್ದ.