Advertisement

ಪಠ್ಯ, ಸಮವಸ್ತ್ರ ಖರೀದಿಗೆ ಪಾಲಕರು ಸ್ವತಂತ್ರ

11:59 AM May 04, 2017 | Team Udayavani |

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್‌ಟಿಇ) ಖಾಸಗಿ ಶಾಲೆಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶಾಲಾಡಳಿತ ಮಂಡಳಿ ಪಠ್ಯಪುಸ್ತಕ, ನೋಟ್‌ಬುಕ್‌, ಸಮವಸ್ತ್ರ ಹಾಗೂ ಇತರೆ ಲೇಖನ ಸಾಮಗ್ರಿಗಳನ್ನು ನಿರ್ದಿಷ್ಟ
ಮಾರಾಟಗಾರರಿಂದ ಅಥವಾ ಶಾಲೆಯಿಂದಲೇ ಖರೀದಿಸಬೇಕು ಎಂದು ಮಕ್ಕಳ ಪಾಲಕರ ಮೇಲೆ ಒತ್ತಡ ಹೇರುವುದು ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Advertisement

ಆರ್‌ಟಿಇ ಅಡಿ ಖಾಸಗಿ ಶಾಲೆಗೆ ಸೇರಿದ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಲೇಖನ ಸಾಮಾಗ್ರಿ ಕುರಿತಂತೆ ನಿರ್ದಿಷ್ಟ ಮಾರಾಟಗಾರರಿಂದಲೇ ಪಡೆದುಕೊಳ್ಳಬೇಕು ಮತ್ತು ಶಾಲೆಯ ಗ್ರಂಥಾಲಯ ಬಳಕೆ, ಮಾಹಿತಿ ತಂತ್ರಜ್ಞಾನದ
ಸೌಲಭ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗೆ ಹಾಗೂ ಕ್ರೀಡಾ ಶುಲ್ಕ ವಿಧಿಸುತ್ತಿರುವ ಬಗ್ಗೆ ಖಾಸಗಿ ಶಾಲಾಡಳಿತ ಮಂಡಳಿ ವಿರುದ್ಧ ಅನೇಕ ಪಾಲಕರು ಶಿಕ್ಷಣ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.

ಈ ಎಲ್ಲಾ ದೂರನ್ನು ಸಮಗ್ರವಾಗಿ ಪರಿಶೀಲಿಸಿದ ಶಿಕ್ಷಣ ಇಲಾಖೆ, ತರಗತಿಗೆ ನಿಗದಿಪಡಿಸಿರುವ ಪಠ್ಯಪುಸ್ತಕ, ನೋಟ್‌ಬುಕ್‌, ಸಮಸವŒ ಮತ್ತು ಇತರೆ ಲೇಖನ ಸಾಮಗ್ರಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ಮಕ್ಕಳ ಪಾಲಕರು ಸ್ವತಂತ್ರರಾಗಿರುತ್ತಾರೆ. ಖಾಸಗಿ ಶಾಲೆಯಲ್ಲಿ ಸಾಮಾನ್ಯವಾಗಿ ದಾಖಲಾಗಿರುವ ಮಕ್ಕಳ ಪಾಲಕರಿಗೂ ಇದು ಅನ್ವಯಿಸುತ್ತದೆ. ಕರ್ನಾಟಕ ಪಠ್ಯಪುಸ್ತಕ ಸಂಘವು ಪ್ರಕಟಿಸುವ ಪಠ್ಯಗಳ ಸರಬರಾಜಿಗೆ ಇದು ಅನ್ವಯವಾಗುವುದಿಲ್ಲ
ಎಂದು ಇಲಾಖೆ ಹೇಳಿದೆ.

ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಶಾಲೆಯ ಆಡಳಿತ ಮಂಡಳಿ, ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಖರೀದಿಸಿ, ಅವುಗಳ ಮುಖಬೆಲೆಯಂತೆ ವಿದ್ಯಾರ್ಥಿಗಳಿಗೆ ಒದಗಿಸಬೇಕು. ಆರ್‌ಟಿಇ ಅಡಿ ದಾಖಲಾದ ವಿದ್ಯಾರ್ಥಿಗಳಿಗೆ 2017-18ರಿಂದ ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಉಚಿತವಾಗಿ ಪಠ್ಯಪುಸ್ತಕದ ವಿತರಣೆ
ಮಾಡಲಾಗುತ್ತದೆ. ಇದಕ್ಕಾಗಿ ಶಾಲಾಡಳಿತ ಮಂಡಳಿ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಸಂಗ್ರಹಿಸಬಾರದು ಎಂಬ ಖಡಕ್‌ ಸೂಚನೆ ನೀಡಿದೆ.

ರಾಜ್ಯ ಶಿಕ್ಷಣ ಕಾಯ್ದೆ-1983 ಸೆಕ್ಷನ್‌ 1(3)ರಡಿ ಇವರು (3ಎ) ಷರತ್ತಿನ ವ್ಯಾಪ್ತಿಗೆ ಒಳಪಟ್ಟ ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಪಠ್ಯಕ್ರಮ ಅನುಸರಿಸುತ್ತಿರುವ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತದೆ. ಸರ್ಕಾರದ ಅಧಿಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇದನ್ನು ಉಲ್ಲಂ ಸಿದ ಶಾಲಾಡಳಿತ ಮಂಡಳಿಯ
ಮಾನ್ಯತೆ ರದ್ದು ಮಾಡಲಾಗುತ್ತದೆ ಅಥವಾ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

Advertisement

10ರೊಳಗೆ ಶಾಲೆಗೆ ಮಕ್ಕಳನ್ನು ದಾಖಲಿಸಿ
ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 2017-18ನೇ ಸಾಲಿನಲ್ಲಿ ಖಾಸಗಿ ಶಾಲೆಗೆ ಆನ್‌ಲೈನ್‌ ಲಾಟರಿ ಮೂಲಕ ಸೀಟು ಪಡೆದ ಮಕ್ಕಳನ್ನು ಮೇ 10ರೊಳಗೆ ಸಂಬಂಧಪಟ್ಟ ಶಾಲೆಗೆ ದಾಖಲಿಸುವ ಜವಾಬ್ದಾರಿ
ಪಾಲಕರದ್ದಾಗಿದೆ. ಆರ್‌ಟಿಇ ಸೀಟು ಪಡೆದ ಮಕ್ಕಳ ಪಾಲಕರಿಗೆ, ಪ್ರವೇಶಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ
ಪ್ರತಿದಿನ ನಾಲ್ಕು ಬಾರಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಸ್‌ಎಂಎಸ್‌ ರವಾನಿಸಲಾಗಿದೆ. ಆಯ್ಕೆಯಾದ ಮಗುವಿನ ಪಾಲಕರು, ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್‌ಸೈಟ್‌ www.schooleducation.comಗೆ ಭೇಟಿ ನೀಡಿ, ಸೀಟು
ಆಯ್ಕೆಯಾದ ಅರ್ಜಿ ಸಂಖ್ಯೆಯನ್ನು ನಮೂದಿಸಿ, ಸೀಟು ಹಂಚಿಕೆಯಾದ ಪ್ರತಿಯ ಪ್ರಿಂಟ್‌ ತೆಗೆದುಕೊಳ್ಳಬೇಕು. ನಂತರ ಅದನ್ನು ಆರ್‌ಟಿಇ ಅರ್ಜಿಯೊಂದಿಗೆ ನೀಡಿದ ಆಧಾರ್‌ ಸಂಖ್ಯೆ ಸಮೇತವಾಗಿ ಸಂಬಂಧಪಟ್ಟ ಶಾಲೆಗೆ ಮೇ 10ರೊಳಗೆ ಮಗುವನ್ನು ಸೇರಿಸಬೇಕು. ಸೀಟು ಹಂಚಿಕೆಯಾಗುವ ಮೊದಲೇ ಮಕ್ಕಳ ಹಾಗೂ ಪಾಲಕರ ಎಲ್ಲಾ ದಾಖಲೆ ಗಳನ್ನು ಇಲಾಖೆ ಸಂಪೂರ್ಣವಾಗಿ ಪರಿಶೀಲಿಸಿ ರುವುದರಿಂದ ಯಾವುದೇ ಕಾರಣಕ್ಕೂ ಶಾಲೆ ಆಡಳಿತ ಮಂಡಳಿ ಆಯ್ಕೆಯಾದ ಮಕ್ಕಳ ದಾಖಲೆಯನ್ನು ಮರು ಪರಿಶೀಲಿಸುವ ಅಗತ್ಯ ಇಲ್ಲ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ನೇರವಾಗಿ ಮಕ್ಕಳನ್ನು ದಾಖಲೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

ಪ್ರವೇಶ ಸಂದರ್ಭದಲ್ಲಿ ಪಾಲಕರು ನೀಡುವ ಆಧಾರ್‌ ಸಂಖ್ಯೆಯನ್ನು ಮಗು ಹಾಗೂ ಪಾಲಕರನ್ನು ಗುರುತಿಸಲು ಮಾತ್ರ ಬಳಸಿಕೊಳ್ಳಬೇಕು. ಈ ವಿಚಾರವನ್ನು ಸಂಬಂಧಪಟ್ಟ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಖಾಸಗಿ ಶಾಲೆಯ ಆಡಳಿತ ಮಂಡಳಿ ಗಮನಕ್ಕೆ ತರುವಂತೆ ಇಲಾಖೆ ನಿರ್ದೇಶನ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next