ಹೊಸದಿಲ್ಲಿ : ‘ದಿಲ್ಲಿಯ ಖಾಸಗಿ ಶಾಲೆಯೊಂದು ರೇಪ್ ಸಂತ್ರಸ್ತೆಯಾಗಿರುವ ನಮ್ಮ ಮಗಳನ್ನು ತಮ್ಮ ಶಾಲೆಗ ಕಳುಹಿಸಕೂಡದು; ಕಳುಹಿಸಿದಲ್ಲಿ ತಮ್ಮ ಶಾಲೆಯ ಘನತೆ ಗೌರವಗಳಿಗೆ ಚ್ಯುತಿ ಬರುತ್ತದೆ ಎಂದು ನಮಗೆ ತಾಕೀತು ಮಾಡಿದ್ದಾರೆ’ ಎಂಬುದಾಗಿ ರೇಪ್ ಸಂತ್ರಸ್ತ ಬಾಲಕಿಯ ಹೆತ್ತವರು ಆರೋಪಿಸಿದ್ದಾರೆ.
ರೇಪ್ ಸಂತ್ರಸ್ತ ಬಾಲಕಿಯ ಹೆತ್ತವರು ಕೊಟ್ಟಿರುವ ದೂರಿನ ಆಧಾರದಲ್ಲಿ ದಿಲ್ಲಿ ಮಹಿಳಾ ಆಯೋಗವು ಈ ಬಗ್ಗೆ ಶಿಕ್ಷಣ ಇಲಾಖೆಗೆ ನೊಟೀಸ್ ಜಾರಿ ಮಾಡಿದೆ.
‘ರೇಪ್‌ಗೆ ಗುರಿಯಾಗಿರುವ ನಮ್ಮ ಮಗಳು 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಆಕೆಯನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದಲ್ಲಿ ಮಾತ್ರವೇ ಆಕೆಯನ್ನು 11ನೇ ತರಗತಿಗೆ ತೇರ್ಗಡೆಗೊಳಿಸಲಾಗುವುದು ಎಂಬ ಶರತ್ತನ್ನು ಕೂಡ ಶಾಲಾ ಆಡಳಿತ ಮಂಡಳಿ ನಮ್ಮ ಮೇಲೆ ಹೇರಿದೆ ‘ ಎಂಬುದಾಗಿ ಹೆತ್ತವರು ಹೇಳಿದ್ದಾರೆ.
ರೇಪ್ ಸಂತ್ರಸ್ತ ಬಾಲಕಿಯ ಬಗ್ಗೆ ಶಾಲಾ ಆಡಳಿತವು ಅತ್ಯಂತ ನಿಕೃಷ್ಠ ಸಂವೇದನೆ ತೋರಿರುವುದು ಖಂಡನೀಯ ಮತ್ತು ದುರದೃಷ್ಟಕರ ಎಂದು ಹೆತ್ತವರು ದೂರಿದ್ದಾರೆ.
ಈ ವಿಷಯದಲ್ಲಿ ಶಿಕ್ಷಣ ಇಲಾಖೆಗೆ ನೊಟೀಸ್ ಜಾರಿ ಮಾಡಿರುವ ದಿಲ್ಲಿ ಮಹಿಳಾ ಆಯೋಗವು, ಬಾಲಕಿಯ ಗುರುತನ್ನು ಗೌಪ್ಯವಾಗಿರಿಸುವ ಸಲುವಾಗಿ ಶಾಲೆಯ ಹೆಸರನ್ನು ಬಹಿರಂಗಪಡಿಸಿಲ್ಲ. ಹಾಗಾಗಿ ಮಾಧ್ಯಮಕ್ಕೆ ಶಾಲೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುವುದು ಸಾಧ್ಯವಾಗಿಲ್ಲ.
ಶಾಲೆಯ 10ನೇ ತರಗತಿಯ ಬಾಲಕಿಯನ್ನು ಯಾರೋ ಕಾಮಾಂಧ ದುಷ್ಕಮಿಗಳು ಅಪಹರಿಸಿ, ರೇಪ್ ಮಾಡಿ, ಚಲಿಸುತ್ತಿರುವ ಕಾರಿನಿಂದ ರಸ್ತೆಗೆಸೆದು ಪರಾರಿಯಾಗಿದ್ದರು.