ಕಾನ್ಪುರ್(ಉತ್ತರಪ್ರದೇಶ): ವಿದ್ಯಾರ್ಥಿಯೊಬ್ಬನಿಗೆ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದ್ದಕ್ಕಾಗಿ ಆಕ್ರೋಶಗೊಂಡ ತಂದೆ ತನ್ನ ಬೆಂಬಲಿಗರ ಗುಂಪಿನೊಂದಿಗೆ ಪ್ರಾಂಶುಪಾಲರ ಕೋಣೆಗೆ ನುಗ್ಗಿ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಹೊಡೆದ ಘಟನೆ ಕಾನ್ಪುರ್ ನಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:UV Fusuion: ರಾಜ್ಯದ ಮೊದಲ ಆಸ್ಟ್ರೋ ಫಾರ್ಮ್: ಅತ್ಯುತ್ತಮ ಖಗೋಳ ಪ್ರವಾಸಿ ಕೇಂದ್ರ
ಶಾಲೆಯಲ್ಲಿ ಶಿಕ್ಷಕ ವಿದ್ಯಾರ್ಥಿಗೆ 50ಕ್ಕಿಂತಲೂ ಹೆಚ್ಚು ಬಾರಿ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದ್ದು, ಈ ಬಗ್ಗೆ ವಿದ್ಯಾರ್ಥಿ ಪೋಷಕರ ಬಳಿ ದೂರು ಹೇಳಿದ್ದ. ವರದಿಯ ಪ್ರಕಾರ, 5ನೇ ತರಗತಿ ವಿದ್ಯಾರ್ಥಿಗೆ 50ಕ್ಕಿಂತ ಹೆಚ್ಚು ಬಾರಿ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದ್ದರಿಂದ ಆತನ ತಂದೆ ತನ್ನ ಬೆಂಬಲಿಗರೊಂದಿಗೆ ಪ್ರಾಂಶುಪಾಲರ ಕಚೇರಿಗೆ ನುಗ್ಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಪ್ರಾಂಶುಪಾಲರ ಕೋಣೆಗೆ ಏಕಾಏಕಿ ನುಗ್ಗಿದ ವಿದ್ಯಾರ್ಥಿಯ ತಂದೆ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿ ಹಾಗೂ ಶಾಲಾ ಪ್ರಾಂಶುಪಾಲರು ಕೂಡಾ ಕೋಣೆಯಲ್ಲಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಶಿಕ್ಷಕನಿಗೆ ಹಿಗ್ಗಾಮುಗ್ಗಾ ಹೊಡೆಯುತ್ತಿದ್ದಾಗ ವಿದ್ಯಾರ್ಥಿ ತಂದೆಯ ಜತೆಯಲ್ಲಿ ಬಂದಿದ್ದವರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ನಂತರ ಸೆಕ್ಯುರಿಟಿ ಬಂದಿದ್ದು, ವಿದ್ಯಾರ್ಥಿಯ ತಂದೆಯನ್ನು ಶಾಲಾ ಆವರಣದಿಂದ ಹೊರ ಕಳುಹಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಘಟನೆ ಬಗ್ಗೆ ಶಾಲಾ ಆಡಳಿತ ಮಂಡಳಿ ಹನುಮಂತ್ ವಿಹಾರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅದರಂತೆ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಿದ್ದು, ವಿದ್ಯಾರ್ಥಿಯ ತಂದೆ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.