ಹುಬ್ಬಳ್ಳಿ: ಕೋವಿಡ್ 19 ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ನಿರ್ಬಂಧಿತ ಪ್ರದೇಶ ಹೊರತುಪಡಿಸಿ ಜಿಲ್ಲೆ ಹಾಗೂ ಮಹಾನಗರ ಪ್ರದೇಶ ವ್ಯಾಪ್ತಿಯಲ್ಲಿ ಹೊಟೇಲ್‌ಗಳಲ್ಲಿ ಪಾರ್ಸಲ್‌ಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಿಳಿಸಿದ್ದಾರೆ.
ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಸಚಿವರು, ಕೇಂದ್ರ ಸರಕಾರದ ನಿರ್ದೇಶನಗಳ ಪ್ರಕಾರ ಹೊಟೇಲ್‌ಗಳ ಪಾರ್ಸಲ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ನಿರ್ಬಂಧಿತ ಪ್ರದೇಶಗಳನ್ನು ಹೊರತುಪಡಿಸಿ ಹೊಟೇಲ್‌ಗಳ ಪಾರ್ಸಲ್‌ಗಳಿಗೆ ಅವಕಾಶ ಕಲ್ಪಿಸಬೇಕು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಳಿಗ್ಗೆ 7:00ರಿಂದ ಸಂಜೆ 7:00ರ ವರೆಗೆ ಪಾರ್ಸಲ್ ನೀಡಲು ಅವಕಾಶ ನೀಡಲಾಗುವುದು. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಗ್ರಾಹಕರು ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ. ಹೊಟೇಲ್‌ಗಳಲ್ಲಿ ಕುಳಿತು ಆಹಾರ ಸೇವೆಗೆ ಅವಕಾಶ ಇರುವುದಿಲ್ಲ. ಯಾವುದೇ ಕಾರಣಕ್ಕೂ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಇನ್ನೂ ಹೊಟೇಲ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಆರಂಭವಾಗಿದ್ದು, ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಗೋಕುಲ ಹಾಗೂ ತಾರಿಹಾಳದ ಕೈಗಾರಿಕೆ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಕಡ್ಡಾಯವಾಗಿ ತಮ್ಮ ಕಂಪನಿಗಳ ಗುರುತಿನ ಚೀಟಿ ಹೊಂದಿರಬೇಕು. ಚೆಕ್‌ಪೋಸ್ಟ್ ಸೇರಿದಂತೆ ಇನ್ನಿತರೆಡೆ ಪೊಲೀಸರ ತಪಾಸಣೆ ವೇಳೆ ಗುರುತಿನ ಚೀಟಿ ತೋರಿಸಬೇಕು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಕೇಶಿಪ್ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಹುಬ್ಬಳ್ಳಿ ಏರ್‌ಪೋರ್ಟ್ ಸುತ್ತಲಿನ ಪ್ರದೇಶಗಳಲ್ಲಿ ಸ್ಮಾರ್ಟ್‌ಸಿಟಿ ಅಡಿಯ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಮದ್ಯದ ಅಂಗಡಿಗಳ ಮುಂದೆ ಜನದಟ್ಟಣೆಯಾಗಿ ತೊಂದರೆಯಾಗದಂತೆ ಕಠಿಣ ಕ್ರಮಕೈಗೊಳ್ಳಲಾಗುವುದು. ಮೇ 17ರವರೆಗೆ ಲಾಕ್ ಡೌನ್ ವಿಸ್ತರಣೆಯಾಗಿದೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಬೇಕು ಎಂದರು.
ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ಆರ್.ದಿಲೀಪ್, ಜಿಪಂ ಸಿಇಒ ಡಾ| ಸತೀಶ್, ಎಸ್ಪಿ ವರ್ತಿಕಾ ಕಟಿಯಾರ್, ಪಾಲಿಕೆ ಆಯುಕ್ತ ಡಾ| ಸುರಶ್ ಇಟ್ನಾಳ ಪಾಲ್ಗೊಂಡಿದ್ದರು.