ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕಾಗಿ ಗುರುವಾರದಿಂದ ಜಾರಿಗೆ ಮಾಡಲಾದ ನಾಲ್ಕು ದಿನಗಳ ಸಂಪೂರ್ಣ ಲಾಕ್‌ಡೌನ್ ಗೆ ಮೊದಲ ದಿನ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಜನ ಮತ್ತು ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಮಹಾನಗರ ಸೇರಿದಂತೆ ಬಹುತೇಕ ಜಿಲ್ಲೆ ಸ್ತಬ್ಧವಾಗಿತ್ತು.
ಆದರೆ, ಕಲಬರಗಿ ನಗರ ಪ್ರದೇಶದ ಹೋಟೆಲ್‌ನಲ್ಲಿ ಪಾರ್ಸೆಲ್ ಕುರಿತು ಜಿಲ್ಲಾಡಳಿತ ಮತ್ತು ನಗರ ಪೊಲೀಸ್ ಆಯುಕ್ತಾಲಯದ ನಡುವೆ ಗೊಂದಲ ಮೂಡಿದೆ. ಸೆಮಿ ಲಾಕ್‌ಡೌನ್ ಜಾರಿ ಮಾಡಿದ್ದರೂ, ಬೆಳಗ್ಗೆ 6ಗಂಟೆಯಿಂದ 10ರ ವರೆಗೆ ತರಕಾರಿ ಮತ್ತು ದಿನಸಿ ಖರೀದಿಗೆ ಅವಕಾಶ ನೀಡಲಾಗಿತ್ತು. ಇದರಿಂದ ಬೆಳಗ್ಗೆಯೇ ಜನರು ರಸ್ತೆಗಿಳಿಯುತ್ತಿದ್ದರು.
ತರಕಾರಿ ಮತ್ತು ದಿನಸಿಗೆಂದು ಹೊರ ಬಂದವರು 10 ಗಂಟೆ ನಂತರವೂ ರಸ್ತೆಯಲ್ಲೇ ಇರುತ್ತಿದ್ದರು. ಜನ ಸಂಚಾರ ಹಾಗೂ ವಾಹನ ಓಡಾಟ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಕಳೆದ ವಾರದಿಂದ ಜಿಲ್ಲಾಡಳಿತ ಸಂಪೂರ್ಣ ಲಾಕ್‌ಡೌನ್ ಅನುಷ್ಠಾನ ಮಾಡಿದೆ. ಮೊದಲ ವಾರದ ಮೂರು ದಿನಗಳ ಕಾಲ ಬಿಗಿ ಕ್ರಮಗಳನ್ನು ಜಾರಿ ಮಾಡಲಾಗಿತ್ತು. ಈ ವಾರ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದ್ದು, ಬೆಳಗಿನ ಸಡಿಲಿಕೆಯನ್ನು ತೆಗೆದುಹಾಕಲಾಗಿದೆ. ಹೋಟೆಲ್‌ನಲ್ಲಿ ಪಾರ್ಸೆಲ್, ಹಾಲು, ಮೊಟ್ಟೆ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ಕಲ್ಪಿಸಿದೆ. ಆದರೆ, ನಗರ ಪೊಲೀಸ್ ಆಯುಕ್ತರು ಹೋಟೆಲ್‌ನಲ್ಲಿ ಪಾರ್ಸೆಲ್‌ಗೆ ಅವಕಾಶ ಇಲ್ಲ ಎಂದು ಹೇಳುತ್ತಿದ್ದಾರೆ.
ಹೀಗಾಗಿ ಹೋಟೆಲ್ ಮಾಲೀಕರು ಗೊಂದಲಕ್ಕೆ ಒಳಗಾಗುವಂತೆ ಆಗಿದೆ. ಗುರುವಾರ ಹಲವು ಹೋಟೆಲ್ ಗಳು ಬಾಗಿಲು ಹಾಕಿದ್ದವು. ಮತ್ತೆ ಕೆಲವು ಹೋಟೆಲ್ ಗಳು ಯಥಾಪ್ರಕಾರ ಪಾರ್ಸೆಲ್ ಕೊಡುತ್ತಿರುವುದು ಕಂಡು ಬಂತು. ಇನ್ನು ಕೆಲ ಹೋಟೆಲ್‌ನವರು ಶೆಟರ್ ಹಾಕಿಕೊಂಡು ಬೆಳಗ್ಗೆ ಉಪಹಾರ ಪಾರ್ಸೆಲ್ ಕೊಟ್ಟರು. ಶೆಟರ್ ಹಾಕಿದ್ದ ಪರಿಣಾಮ ವ್ಯಾಪಾರವಾಗದೇ ಮಧ್ಯಾಹ್ನದ ವೇಳೆಗೆ ಬಾಗಿಲು ಮುಚ್ಚುವಂತೆ ಆಯಿತು.
ಹಾಲಿನವರಲ್ಲೂ ಗೊಂದಲ: ಹೋಟೆಲ್‌ನವರು ಪಾರ್ಸೆಲ್ ಕುರಿತು ಗೊಂದಲಕ್ಕೆ ಸಿಲುಕಿದ್ದಂತೆ ಹಾಲು ಮಾರಾಟ ಮಳಿಗೆಯವರೂ ಗೊಂದಲದಲ್ಲಿ ಇದ್ದಾರೆ. ಗುರುವಾರ ಕೇಂದ್ರ ಬಸ್ ನಿಲ್ದಾಣದ ಸೇರಿ ಕೆಲವೆಡೆ ನಂದಿನಿ ಹಾಲು ಮಳಿಯವರು ಪೊಲೀಸರ ಭೀತಿಯಿಂದ ಅರ್ಧ ಶೆಟರ್ ಹಾಕಿಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬಂತು. ಈ ಕುರಿತು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಡಾ| ವೈ.ಎಸ್. ರವಿಕುಮಾರ ಹಾಲು ಮಾರಾಟಕ್ಕೆ ಅವಕಾಶ ಇದೆ ಎಂದು ಸ್ಪಪ್ಟಪಡಿಸಿದ್ದಾರೆ. ಕಠಿಣ ಲಾಕ್‌ಡೌನ್: ಮೊದಲ ದಿನವಾದ ಗುರುವಾರ ಪೊಲೀಸರು ಬೆಳಗ್ಗೆಯೇ ರಸ್ತೆಗಿಳಿದು ಕಠಿಣ ಲಾಕ್ ಡೌನ್‌ಗೆ ಕ್ರಮ ಕೈಗೊಂಡಿದ್ದರು. ಆದ್ದರಿಂದ ಎಲ್ಲೆಡೆ ಸಂಪೂರ್ಣ ಲಾಕ್‌ಡೌನ್ ಯಶಸ್ವಿ ಆಯಿತು. ಆಸ್ಪತ್ರೆ ಮತ್ತು ವೈದ್ಯಕೀಯ ಸೇವೆ ಮತ್ತು ತುರ್ತು ಸಂದರ್ಭ ಹೊರತುಪಡಿಸಿ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ತಕ್ಕ ಮಟ್ಟಿಗೆ ಕಡಿವಾಣ ಬಿದ್ದಿತ್ತು.
ಇದರಿಂದಾಗಿ ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳು ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದವು. ವಾಹನಗಳು ಮತ್ತು ಜನರ ಓಡಾಟದಿಂದಾಗಿ ಗಿಜುಗುಡುತ್ತಿದ್ದ ನಗರದ ಕೇಂದ್ರ ಬಸ್ ನಿಲ್ದಾಣ ರಸ್ತೆ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ರಾಷ್ಟ್ರಪತಿ ಚೌಕ್, ಜಗತ್ ವೃತ್ತ, ರೈಲ್ವೆ ನಿಲ್ದಾಣ ರಸ್ತೆ, ಸೂಪರ್ ಮಾರ್ಕೆಟ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಜನರಿಲ್ಲದೆ ಭಣಗುಡುತ್ತಿದ್ದವು. ನಗರದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ಕಾವಲಿಗೆ ಇದ್ದು, ರಸ್ತೆಗಿಳಿದ ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸಿದರು.
ಆಸ್ಪತ್ರೆ ಮತ್ತು ತುರ್ತು ಹಾಗೂ ಅಗತ್ಯ ಸೇವೆಗಾಗಿ ತೆರಳುತ್ತಿರುವವರನ್ನು ವಿಚಾರಣೆ ನಡೆಸಿ ಬಿಟ್ಟುಕೊಟ್ಟರೆ, ಅನಗತ್ಯವಾಗಿ ರಸ್ತೆಗಿಳಿದವರ ವಾಹನಗಳನ್ನು ಜಪ್ತಿ ಮಾಡಿ ಎಚ್ಚರಿಕೆ ನೀಡಿದರು. ಲಾಕ್‌ಡೌನ್ ಬಂದೋಬಸ್ತ್ ಪರಿಶೀಲನೆಗೆಂದು ನಗರ ಪೊಲೀಸ್ ಆಯುಕ್ತ ಡಾ| ವೈ.ಎಸ್. ರವಿಕುಮಾರ, ಉಪ ಪೊಲೀಸ್ ಆಯುಕ್ತ ಡಿ. ಕಿಶೋರಬಾಬು ಖುದ್ದು ರಸ್ತೆಗಿಳಿದು ನಗರ ಪ್ರದಕ್ಷಿಣೆ ನಡೆಸಿದರು. ಎಸಿಪಿಗಳಾದ ಅಂಶುಕುಮಾರ, ಗಿರೀಶ ಎಸ್.ಬಿ, ಜೆ.ಎಸ್. ಇನಾಮಾದಾರ್ ಮತ್ತು ವಿವಿಧ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳೊಂದಿಗೆ ಮುಸ್ಲಿಂ ಚೌಕ್, ಸತ್ರಾಸವಾಡಿ, ಜಗತ್ ವೃತ್ತ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ ಸೇರಿದಂತೆ ಹಲವೆಡೆ ಡಿ.ಕಿಶೋರಬಾಬು ಪರಿಶೀಲನೆ ಮಾಡಿದರು.