Advertisement
ಇನ್ಮುಂದೆ ಕೈದಿಗಳು ಆರೋಗ್ಯದ ನೆಪ ಹೇಳಿ ಜೈಲಿನಿಂದ ಹೊರಗೆ ಚಿಕಿತ್ಸೆ ಪಡೆಯಲು ಹೋಗುವುದಕ್ಕೆ ಬ್ರೇಕ್ ಹಾಕಲು ಜೈಲು ಆವರಣದಲ್ಲೇ ಸುಸಜ್ಜಿತ ಆಸ್ಪತ್ರೆ ವ್ಯವಸ್ಥೆ ಕಲ್ಪಿಸುವುದು, ಜತೆಗೆ ಅಡುಗೆ ಕೋಣೆ, ಗ್ರಂಥಾಲಯ, ವ್ಯಕ್ತಿ ವಿಕಸನ ಕೇಂದ್ರಗಳು, ಆಪ್ತ ಸಮಾಲೋಚನೆ ಕೊಠಡಿಗಳು, ದೇವಾಲಯವನ್ನೂ ಅಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ ಎಂದು ಕಾರಾಗೃಹ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಪ್ರಸ್ತುತ ಕೇಂದ್ರ ಕಾರಾಗೃಹದಲ್ಲಿರುವ ಉಗ್ರರು, ನಕ್ಸಲೀಯರು, ರೌಡಿಶೀಟರ್‌ಗಳು ಮತ್ತು ಪದೇ ಪದೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಪ್ರಮುಖ ಆರೋಪಿಗಳು ಹಾಗೂ ಹೈ ಪ್ರೊಫೈಲ್ ಪ್ರಕರಣಗಳ ಆರೋಪಿಗಳನ್ನು ಈ ಜೈಲಿನಲ್ಲಿ ಇಡಲಾಗುತ್ತದೆ. ಇದರಿಂದ ಕೇಂದ್ರ ಕಾರಾಗೃಹದಲ್ಲಿ ಭದ್ರತೆ, ಒತ್ತಡದ ಸಮಸ್ಯೆ ಬಗೆಹರಿಯಲಿದೆ. ಹೈ ಪ್ರೊಫೈಲ್ ಕೈದಿಗಳು, ದೇಶದ ಭದ್ರತೆಗೆ ಧಕ್ಕೆ ತರುವವರನ್ನು ಹೆಚ್ಚಿನ ಭದ್ರತೆಯಲ್ಲಿ ಇಡಲೂ ಅನುಕೂಲವಾಗಲಿದೆ ಎನ್ನುವುದು ಇದರ ಉದ್ದೇಶ ಎನ್ನಲಾಗಿದೆ. ಯಾಕಾಗಿ ಇನ್ನೊಂದು ಜೈಲು?:
ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹ 3,500 ಕೈದಿಗಳನ್ನಿಡುವ ಸಾಮರ್ಥ್ಯ ಹೊಂದಿದೆಯಾದರೂ ಪ್ರಸ್ತುತ ಇಲ್ಲಿ 4,500ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಪ್ರತಿನಿತ್ಯ ಈ ಸಂಖ್ಯೆಯಲ್ಲಿ ಏರಿಳಿತವಾಗುತ್ತಲೇ ಇರುತ್ತದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರವಾದಿ ಆರೋಪಿತರಲ್ಲದೇ ಕುಖ್ಯಾತ ಕೈದಿಗಳಿದ್ದಾರೆ. ಆದರೆ, ಕೈದಿಗಳ ಸಂಖ್ಯೆಗೆ ತಕ್ಕಂತೆ ಸಿಬ್ಬಂದಿ ಇಲ್ಲದ ಕಾರಣ ಕ್ರಿಮಿನಲ್ ಕೈದಿಗಳ ಮೇಲೆ ಹೆಚ್ಚಿನ ನಿಗಾ ವಹಿಸುವುದು ಕಷ್ಟವಾಗುತ್ತಿದೆ. ಇದರ ಜತೆಗೆ ಕೆಲ ಸಂದರ್ಭದಲ್ಲಿ ವಿಚಾರಣಾಧೀನ ಕೈದಿಗಳು, ಸಜಾ ಕೈದಿಗಳು, ಹೈ ಪ್ರೊಫೈಲ್ ಪ್ರಕರಣಗಳ ಆರೋಪಿಗಳು ಮತ್ತು ಅಪರಾಧಿಗಳು ಪರಸ್ಪರ ಚರ್ಚೆಯಲ್ಲಿ ತೊಡಗಿಕೊಳ್ಳುವ, ತಮ್ಮ ಜಾಲ ವಿಸ್ತರಿಸುವ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕುವುದೂ ಪ್ರತ್ಯೇಕ ಜೈಲು ನಿರ್ಮಾಣಕ್ಕೊಂದು ಕಾರಣವಾಗಿದೆ.
Related Articles
Advertisement
ಜೈಲಿನಲ್ಲಿ ಏನೆಲ್ಲಾ ಇರುತ್ತೆ?ಹೈ ಪ್ರೊಫೈಲ್ ಪ್ರಕರಣದ ಅಪರಾಧಿಗಳು, ಆರೋಪಿಗಳು, ಶಂಕಿತ ಉಗ್ರರು, ನಕ್ಸಲೀಯರು ಸೇರಿದಂತೆ ಪ್ರಮುಖ ಕೈದಿಗಳನ್ನು ಇಡುವ ಈ ಜೈಲಿಗೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲದೆ, ತಾಂತ್ರಿಕವಾಗಿಯೂ ಭದ್ರತೆ ಕಲ್ಪಿಸಲಾಗುತ್ತದೆ. ಮಖ್ಯಅಧೀಕ್ಷಕರು, ಅಧೀಕ್ಷಕರು ಸೇರಿ ಎಲ್ಲ ಹಂತದ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನೇಮಕ ಮಾಡಲಾಗುತ್ತದೆ. ಒಟ್ಟಾರೆ 250 ಮಂದಿ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಸಜಾ ಕೈದಿಗಳು, ಮಹಿಳೆಯರು ಹಾಗೂ ರೌಡಿ ಚಟುವಟಿಕೆಗಳಲ್ಲಿ ತೊಡಗುವವರಿಗಾಗಿ ಮೂರು ಪ್ರತ್ಯೇಕ ಬ್ಯಾರಕ್‌ಗಳನ್ನು ತೆರೆಯಲಾಗುತ್ತದೆ. ಜತೆಗೆ ಜೈಲಿನ ಎಲ್ಲೆಡೆ ಹೈಡ್ರಾಲಿಕ್ ಗೇಟ್‌ಗಳು, ಗ್ರೀಲ್‌ಗಳು, ಪ್ರತಿ ಕಾರಿಡಾರ್‌ಗಳಲ್ಲಿ ಸಿಸಿಟಿವಿ ಕ್ಯಾಮರಾಗಳು, 8 ದಿಕ್ಕುಗಳಲ್ಲಿಯೂ ಮೊಬೈಲ್ ಜಾಮರ್‌ಗಳನ್ನು ಅಳವಡಿಸಲಾಗುವುದು. ಅಲ್ಲದೆ, ಯಾವುದೇ ಬ್ಯಾರಕ್‌ಗಳಲ್ಲಿರುವ ಕೊಠಡಿಗಳಲ್ಲಿ ನೆಲ ಕೊರೆಯಲು ಸಾಧ್ಯವಾಗದಂತೆ ತಾಂತ್ರಿಕವಾಗಿ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ. – ಮೋಹನ್ ಭದ್ರಾವತಿ