ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕಾರಾಗೃಹ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ಉದ್ಯಮಿಗಳ ತಾಣವಾಗಿದೆ.
ಪ್ರಸ್ತುತ ಇಲ್ಲಿ ಮಾದಕ ವಸ್ತು ಮಾರಾಟ ಜಾಲ, ಐಎಂಎ ವಂಚನೆ ಪ್ರಕರಣ, ಜೀವ ಬೆದರಿಕೆ, ಅಕ್ರಮ ಶಸ್ತ್ರಾಸ್ತ್ರ ಬಳಕೆ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಜೈಲು ಪಾಲಾದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸಾಲಿನವರೇ ಇದ್ದಾರೆ.
ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ಕೇರಳದ ರೂಪದರ್ಶಿ ನಯಾಜ್ ಮೊಹಮ್ಮದ್, ಉದ್ಯಮಿಗಳಾದ ವೀರೇನ್ ಖನ್ನಾ, ವೈಭವ್ ಜೈನ್, ಕೇರಳದ ಮಾಜಿ ಸಚಿವ ಕೊಡಿಯೇರಿ ಪುತ್ರ ಬಿನೀಶ್ ಕೊಡಿಯೇರಿ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್, ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ರಾಜಕಾರಣಿ ಶಶಿಕಲಾ ನಟರಾಜನ್, ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್‌ರಾಜ್, ಮಾಜಿ ಕಾರ್ಪೊರೇಟರ್ ಎ.ಆರ್.ಜಾಕೀರ್ ಹಾಗೂ ಭೂಗತ ಪಾತಕಿ ರವಿ ಪೂಜಾರಿ ಮುಂತಾದವರು ಈಗ ಈ ಜೈಲಿನಲ್ಲಿದ್ದಾರೆ.
ಜೈಲಿನಲ್ಲಿರುವ ಸಿನೆಮಾ ತಾರೆಯರು, ರಾಜಕಾರಣಿಗಳು ಹಾಗೂ ಉದ್ಯಮಿಗಳ ದಿನಚರಿಯಲ್ಲಿ ಸಾಕಷ್ಟು ಬದಲಾವಣೆ ಯಾಗಿದೆ. ಇವರೆಲ್ಲ ತಮ್ಮ ಕೆಲಸ ಕಾರ್ಯಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ರೀಡಿಂಗ್ ಕೊಣೆಗೆ ಹೋಗಿ ದಿನಪತ್ರಿಕೆ ಓದುತ್ತಾರೆ. ಬಳಿಕ ಟಿವಿ ವೀಕ್ಷಣೆ, ಪುಸ್ತಕ ಓದು ಮುಂತಾದವನ್ನು ಮಾಡುತ್ತಿದ್ದಾರೆ.
ಇವರೆಲ್ಲರನ್ನೂ ಸಾಮಾನ್ಯ ಕೈದಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಯಾವುದೇ ಐಷಾರಾಮಿ ಜೀವನಕ್ಕೆ ಆಸ್ಪದವಿಲ್ಲ. ಜೈಲಿನ ವಾತಾವರಣದಲ್ಲಿ ದಿನದೂಡಬೇಕು. ದಿನಕ್ಕೆ ಒಂದು ಬಾರಿ ಮನೆಗೆ ಕರೆಮಾಡುವ ಅವಕಾಶ ನೀಡಲಾಗುತ್ತದೆ. ಅದನ್ನು ಹೊರತುಪಡಿಸಿದಂತೆ ಯಾವುದೇ ಹೆಚ್ಚಿನ ಸೌಲಭ್ಯಗಳಿಲ್ಲ. ಆದರೂ ಇವರ ದಿನಚರಿ ಬಗ್ಗೆ ಜನರಲ್ಲಿ ತೀವ್ರ ಕುತೂಹಲವಿದೆ.