ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆ ಯಲ್ಲೇ ಚಿನ್ನಾಭರಣ ದೋಚಿದ್ದ ಪ್ರಕರಣ ಭೇದಿಸಿರುವ ವಿವಿ ಪುರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಮೃತಹಳ್ಳಿ ನಿವಾಸಿಗಳಾದ ಕೇಶವ ಪಾಟೀಲ್ ಹಾಗೂ ಆತನ ಸ್ನೇಹಿತ ನಿತಿನ್ ಉತ್ತಮ್ ಕಾಳೆ ಬಂಧಿತರು. ಆರೋಪಿ ಗಳಿಂದ 1.22 ಕೋಟಿ ರೂ.ಮೌಲ್ಯದ 1 ಕೆ.ಜಿ. 570 ಗ್ರಾಂ ಚಿನ್ನಾಭರಣ ಮತ್ತು ವಜ್ರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
ಸೆ.8ರಂದು ವಿ.ವಿ.ಪುರ ಠಾಣಾ ವ್ಯಾಪ್ತಿಯ ಉದ್ಯಮಿಯೊಬ್ಬರು ಕೇರಳದಲ್ಲಿರುವ ಮಗಳ ಮನೆಗೆ ಹೋಗಿದ್ದರು. ಸೆ.10ರಂದು ವಾಪಸ್ ಮನೆಗೆ ಬಂದಾಗ ಕಬೋರ್ಡ್‌ನಲ್ಲಿದ್ದ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಆರೋಪಿಗಳ ವಿಚಾರಣೆ ವೇಳೆ, ದೂರುದಾರರ ಮನೆಯಲ್ಲಿ ಈ ಹಿಂದೆ ಕಾರು ಚಾಲಕನಾಗಿದ್ದ ಕೇಶವ ಪಾಟೀಲ್ 6 ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಮಾಲೀಕರ ಮನೆಯಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಚಿನ್ನಾಭರಣ ಇರುವುದಾಗಿ ಸ್ನೇಹಿತ ನಿತಿನ್ ಕಾಳೆಗೆ ತಿಳಿಸಿದ್ದ. ನಂತರ ಇಬ್ಬರು ಸಂಚು ರೂಪಿಸಿ ಮನೆಯ ಗ್ರೀಲ್ ಒಡೆದು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಚಿನ್ನಾಭರಣಗಳನ್ನು ಆರೋಪಿಗಳು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಮನೆಯಲ್ಲಿ ಇಟ್ಟಿದ್ದರು. ಮತ್ತೂಂದೆಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಈ ವೇಳೆ ಆರೋಪಿಗಳು ತಾವು ಅಡಗಿಸಿಟ್ಟಿದ್ದ ಚಿನ್ನಾಭರಣ ಇಟ್ಟಿದ್ದ ಮನೆಗಳನ್ನು ತೋರಿಸಿದ್ದರು. ಆರೋಪಿ ನಿತಿನ್ ಕದ್ದ ಚಿನ್ನಾಭರಣವನ್ನು ತನ್ನ ಬಾವ ಮೋಹನ್ ಮನೆಯಲ್ಲಿ ಇರಿಸಿದ್ದ ಸುಮಾರು 55 ಲಕ್ಷ ಮೌಲ್ಯದ 652ಗ್ರಾಂ ಚಿನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಮತ್ತೂಬ್ಬ ಆರೋಪಿ ಕೇಶವ ಪಾಟೀಲ್ ತನ್ನ ಅಕ್ಕ ಹಾಗೂ ಸ್ನೇಹಿತನ ಮನೆಯಲ್ಲಿ ಇರಿಸಿದ್ದ 39 ಲಕ್ಷ ರೂ. ಮೌಲ್ಯದ 564 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದರು.