ಸವಣೂರು: ಸವಣೂರು ಗ್ರಾ.ಪಂ. ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಪರಣೆ-ಬಂಬಿಲ ಬೈಲು ರಸ್ತೆಯನ್ನು ಅಧಿಕಾರಿಗಳು ಗುರುವಾರ ಪರಿಶೀಲನೆ ನಡೆಸಿದರು. ಪರಣೆ-ಬಂಬಿಲಬೈಲು ರಸ್ತೆ ಮಳೆಗಾಲದಲ್ಲಿ ತೋಡು -ಬೇಸಗೆಯಲ್ಲಿ ರೋಡು ಎಂಬಂತಹ ಸ್ಥಿತಿಯಲ್ಲಿದ್ದು, ಕಳೆದ ಮಳೆಗಾಲದಲ್ಲಿ ಸುಮಾರು 15 ದಿನಗಳಿಗಿಂತಲೂ ಹೆಚ್ಚು ದಿನ ಮುಳುಗಡೆಯಾಗಿ, ಈ ಭಾಗದ ಮಕ್ಕಳಿಗೆ ಶಾಲೆಗೆ ತೆರಳಲು, ಸಾರ್ವಜನಿಕರಿಗೆ ನಿತ್ಯದ ಚಟುವಟಟಿಕೆ ನಡೆಸದಂತಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿಯೂ ವರದಿ ಪ್ರಕಟವಾಗಿತ್ತು. ಬಳಿಕ ಇಲ್ಲಿನ ಸಾರ್ವಜನಿಕರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾ.ಪಂ., ಗ್ರಾ.ಪಂ.ಗಳಿಗೆ ಮನವಿ ಮಾಡಿದ್ದರು.
ಮನವಿಗೆ ಸ್ಪಂದನೆಯಾಗಿ ಪುತ್ತೂರಿಗೆ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಸಿಇಒ
ಡಾ| ಆರ್. ಸೆಲ್ವಮಣಿ ಅವರ ಸೂಚನೆಯಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಾಬು ಎಸ್.ಎಚ್. ಅವರು ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಾ.ಪಂ.ನ ಗ್ರಾಮೀಣ ಉದ್ಯೋಗ ಯೋಜನಾಧಿಕಾರಿ ನವೀನ್ ಭಂಡಾರಿ, ಜಿ.ಪಂ. ಎಂಜಿನಿಯರ್ ಗೋವರ್ಧನ್, ಸವಣೂರು ಗ್ರಾ.ಪಂ. ಸದಸ್ಯ ಸತೀಶ್ ಅಂಗಡಿಮೂಲೆ, ಸವಣೂರು ಗ್ರಾ.ಪಂ. ಲೆಕ್ಕ ಸಹಾಯಕ ಎ. ಮನ್ಮಥ, ಸಿಬಂದಿ ದಯಾನಂದ ಮಾಲೆತ್ತಾರು, ನವೀನ್ ಕುಮಾರ್ ರೈ ಕುಂಜಾಡಿ, ಪಾದೆಬಂಬಿಲ ಶ್ರೀದುರ್ಗಾ ಭಜನ ಮಂಡಳಿಯ ಕಾರ್ಯದರ್ಶಿ ಪುಟ್ಟಣ್ಣ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.