“ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಮತ್ತೆ ದೊಡ್ಡ ಮಟ್ಟದಲ್ಲಿ ಗೆಲುವು ಕಾಣುವಂತಾಗಲಿ..’ – ಧನಂಜಯ್ ಹೀಗೆ ಹೇಳಿ ಒಂದು ಕ್ಷಣ ಸುಮ್ಮನಾದರು. ಅವರ ಮಾತಿಗೆ ಕಾರಣವಾಗಿದ್ದು “ಕೋಟಿ’.
ಇದು ಧನಂಜಯ್ ನಟನೆಯ ಹೊಸ ಸಿನಿಮಾ. ಚಿತ್ರ ಜೂ.14ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಈ ವೇಳೆ ಧನಂಜಯ್ ಮಾತನಾಡಿದರು.
“ಕೋಟಿ ಒಂದು ವಿಭಿನ್ನ ಕಂಟೆಂಟ್‌ನ ಸಿನಿಮಾ. ಒಂದೊಳ್ಳೆಯ ಕಥೆಗಾಗಿ ನಾವು ಹುಡುಕುತ್ತಲೇ ಇರುತ್ತೇವೆ. ಅಂತಹ ಹುಡುಕಾಟದಲ್ಲಿ ಸಿಕ್ಕ ಕಥೆ ಕೋಟಿ. “ಒಂದೇ ಒಂದು ಕೋಟಿ ಸಿಕ್ಕಿಬಿಟ್ಟರೆ ಸೆಟ್ಲ ಆಗಿಬಿಡಬಹುದು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ನಮ್ ಕೋಟಿನೂ ಅಷ್ಟೇ. ಎಲ್ಲಾ ಮನೆಗಳಲ್ಲೂ ಈ ಕೋಟಿಯಂಥ ಅಣ್ಣ, ತಮ್ಮ, ಮಗ ನಿಮಗೆ ಸಿಕ್ತಾರೆ. ಕಷ್ಟಪಟ್ಟು ದುಡಿದು ಎಲ್ಲಾ ಸರಿ ಮಾಡಬಹುದು ಎಂದುಕೊಳ್ಳುತ್ತಿರುತ್ತಾರೆ. ಮಜಾ ಅಂದ್ರೆ ಎಲ್ಲರೊಳಗೆ ಕೋಟಿಯಂಥ ಒಬ್ಬ ವ್ಯಕ್ತಿ ಇರುತ್ತಾನೆ. ಈ ಪಾತ್ರ, ನನ್ನೊಳಗಿನ ಕೋಟಿಯನ್ನು ನನಗೆ ಪರಿಚಯಿಸಿದೆ. ಹಾಗೆಯೇ ನಿಮ್ಮೊಳಗಿನ ಕೋಟಿಯನ್ನು ಪತ್ತೆ ಮಾಡಲು ನೀವು ಈ ಸಿನಿಮಾ ನೋಡಬೇಕು’ ಎನ್ನುವುದು ಧನಂಜಯ್ ಮಾತು. ಚಿತ್ರದಲ್ಲಿ ಮೋಕ್ಷಾ ಕುಶಾಲ್ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ಟ್ರೇಲರ್‌ನಲ್ಲಿ ಮಧ್ಯಮ ವರ್ಗದ ಹುಡುಗನೊಬ್ಬನ ಜರ್ನಿಯನ್ನು ಹೇಳಲಾಗಿದೆ. ಆತನ ಜೀವನದ ಏರಿಳಿತ, ಬದಲಾಗುವ ಬದುಕು, ಅಂಡರ್‌ವರ್ಲ್ಡ್, ಆ್ಯಕ್ಷನ್, ಲವ್… ಹೀಗೆ ಒಂದು ಪ್ಯಾಕೇಜ್ ಸಿನಿಮಾವಾಗಿ “ಕೋಟಿ’ ಮೂಡಿಬಂದಿರುವುದನ್ನು ಟ್ರೇಲರ್ ಹೇಳುತ್ತಿದೆ.
ಈ ಚಿತ್ರವನ್ನು ಪರಮ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, “ಇದು ಕೋಟಿಯ ಕಥೆ. ಕೋಟಿ ಹಣದ ಕಥೆ, ಕೋಟಿ ಎಂಬ ನಾಯಕನ ಕಥೆ, ಕೋಟಿ ಕನಸು ಕಾಣುತ್ತಿರುವ ನಮ್ಮ-ನಿಮ್ಮೆಲ್ಲರ ಕಥೆ. ನಾನು ಬರೆದುಕೊಂಡ ಕಥೆ ಹಾಗೂ ಮೂಡಿಬಂದಿರುವ ಸಿನಿಮಾವನ್ನು ನೋಡಿದಾಗ ಅಂದುಕೊಂಡಿದ್ದನ್ನು ದೃಶ್ಯರೂಪದಲ್ಲಿ ಸಾಧಿಸಿದ ಖುಷಿ ಇದೆ. ನನಗೊಂದು ಒಳ್ಳೆಯ ತಂಡ ಸಿಕ್ಕಿದೆ. ಧನಂಜಯ್‌ನಂತರ ಅದ್ಭುತ ನಟ ನನ್ನ ಸಿನಿಮಾವನ್ನು ಟ್ರಾವೆಲ್ ಮಾಡಿದ್ದಾರೆ. ಇಲ್ಲಿ ಶ್ರಮವಿದೆ. ಜೊತೆಗೆ ಅಪಾರವಾದ ಪ್ರತಿಭೆಗಳ ಸಂಗಮವಿದೆ. ಶ್ರಮ ಮತ್ತು ಪ್ರತಿಭೆ ಜೊತೆಯಾದಾಗ ಅಲ್ಲೊಂದು ಮ್ಯಾಜಿಕ್ ನಡೆಯುತ್ತೆ, ಆ ಮ್ಯಾಜಿಕ್ ಈ ಸಿನಿಮಾದಲ್ಲಿ ಆಗಿದೆ’ ಎನ್ನುತ್ತಾರೆ.
ವಾಸುಕಿ ವೈಭವ್ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಸಿನಿಮಾದಲ್ಲಿ ಐದು ಹಾಡುಗಳಿವೆ. ಮೂರು ಹಾಡು ಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಇದೆ. ಒಂದು ಹಾಡನ್ನು ಸ್ವತಃ ವಾಸುಕಿ ಬರೆದಿದ್ದಾರೆ. ಹಿನ್ನೆಲೆ ಸಂಗೀತ “ಕೋಟಿ’ ಸಿನಿಮಾದ ಮುಖ್ಯ ಭಾಗವಾಗಿದ್ದು, ನೊಬಿನ್ ಪೌಲ್ ಹೊತ್ತಿದ್ದಾರೆ. ಚಿತ್ರದ ಸಂಕಲನದ ಜವಾಬ್ದಾರಿಯನ್ನು ಹೊತ್ತಿರುವುದು ಕನ್ನಡದ ಪ್ರತಿಭಾವಂತ ಯುವ ಸಂಕಲನಕಾರ ಪ್ರತೀಕ್ ಶೆಟ್ಟಿ. ಚಿತ್ರದಲ್ಲಿ ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರದಾರ ಸತ್ಯಾ ಮತ್ತು ತನುಜಾ ವೇಂಕಟೇಶ್ ಬೇರೆ ಬೇರೆ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.