ಹೂವಿನಹಡಗಲಿ: ಪ್ರಧಾನಿ ನರೇಂದ್ರ ಮೋದಿ ನಿಂದಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರು ಕ್ಷಮೆ ಕೋರಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ರೈತರಿಗೆ ತುಂಬಾ ತೊಂದರೆಯಾಗಿದ್ದು ಅವರ ನೋವು, ಕಣ್ಣೀರು ನನ್ನನ್ನು ಭಾವೋದ್ವೇಗಕ್ಕೆ ಒಳಪಡಿಸಿದ್ದರಿಂದ ಆ ರೀತಿ ಮಾತನಾಡಿದ್ದೇನೆ. ಈ ಕೂಡಲೇ ನಾನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ವೀಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ. ಆದರೆ ಬೆಲೆ ಏರಿಕೆಯನ್ನು ನಾನು ಖಂಡಿಸುತ್ತೇನೆ ಎಂದೂ ತಿಳಿಸಿದ್ದಾರೆ.
ಪರಮೇಶ್ವರ ನಾಯ್ಕ ಹಾಗೂ ಬೆಂಬಲಿಗರು ಹರಪನಹಳ್ಳಿಯಲ್ಲಿ ರಾಜಕೀಯವಾಗಿ ಚರ್ಚೆ ಮಾಡುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಉಲ್ಲೇಖಿಸಿಅವಾಚ್ಯ ಶಬ್ದಗಳಿಂದ ನಿಂದಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದು ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.