Advertisement

Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ

01:14 AM Apr 23, 2024 | Team Udayavani |

ಮಂಗಳೂರು/ಉಡುಪಿ: ರಾಜ್ಯಕ್ಕೆ ಬರಬೇಕಾಗಿದ್ದ 18,172 ಕೋಟಿ ರೂ. ಬರ ಪರಿಹಾರ ಮೊತ್ತವನ್ನು ತಡೆಯಲು ಷಡ್ಯಂತ್ರ ನಡೆಸಿದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ತೀವ್ರ ಮುಖಭಂಗವಾಗಿದೆ.

Advertisement

ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಬರ ಪರಿಹಾರವನ್ನು ಬಿಡುಗಡೆ ಮಾಡದೆ ಮತ ಕೇಳಲು ರಾಜ್ಯಕ್ಕೆ ಕಾಲಿರಿಸಬಾರದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಆಗ್ರಹಿಸಿದ್ದಾರೆ.

ಮಂಗಳೂರು ಮತ್ತು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಹಾರ ಸಂಬಂಧ ವಿಧಿಯಿಲ್ಲದೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ರಾಜ್ಯ ಸರಕಾರಕ್ಕೆ ಜಯ ಸಿಕ್ಕಿದೆ. ಇನ್ನು ಪ್ರಧಾನಿ ಹಾಗೂ ಗೃಹ ಸಚಿವರು ಹೇಗೆ ರಾಜ್ಯದ ಜನತೆಗೆ ಮುಖ ತೋರಿಸುತ್ತಾರೆ ಎಂದು ಪ್ರಶ್ನಿಸಿದರು.

ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕೆ ಮೋದಿ ಹಾಗೂ ಬಿಜೆಪಿಯವರು ರಾಜ್ಯದ ವಿರುದ್ಧ ಸೇಡಿನ ಮನೋಭಾವದಿಂದ, ಬರ ಪರಿಹಾರದ ಮೊತ್ತವನ್ನು ತಡೆ ಹಿಡಿದರು. ಇದು ರೈತರಿಗೆ, ಕನ್ನಡ ನಾಡಿನ ಆರೂವರೆ ಕೋಟಿ ಜನತೆಗೆ ಮೋದಿ ಮಾಡಿರುವ ದೊಡ್ಡ ಅನ್ಯಾಯ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಬರ ಘೋಷಣೆಯಾದ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯದ ಹಲವು ಸಚಿವರು ಪ್ರಧಾನಿಯನ್ನು ಭೇಟಿ ಮಾಡಿ ಬರಪರಿಹಾರ ಬಿಡುಗಡೆಗೆ ವಿನಂತಿಸಿದ್ದರು. ಮೂವತ್ತು ದಿನಗಳಲ್ಲಿ ನೀಡಬೇಕಾದದ್ದನ್ನು ಐದು ತಿಂಗಳಾದರೂ ಬಿಡುಗಡೆ ಮಾಡಲಿಲ್ಲ ಎಂದು ಟೀಕಿಸಿದರು.

ಅಟಲ್‌ ಮಾದರಿಯಲ್ಲೇ ಸೋಲು
2004 ರ ಸಂಸತ್‌ ಚುನಾವಣೆ ಸಂದರ್ಭ ಅಟಲ್‌ ಬಿಹಾರಿ ವಾಜಪೇಯಿ ಅವರು ಭಾರತ ಪ್ರಕಾಶಿಸುತ್ತಿದೆ ಎನ್ನುವ ಪ್ರಚಾರ ನಡೆಸಿಯೂ ಜನರ ಸಮಸ್ಯೆಯನ್ನು ಅರಿಯದ ಕಾರಣ ಹೀನಾಯ ಸೋಲನುಭವಿಸಿದ್ದರು. ಈಗ ಮೋದಿಯವರೂ ಅದೇ ರೀತಿ ಪ್ರಚಾರ ನಡೆಸುತ್ತಿದ್ದು, ಪರಾಜಯ ಖಚಿತ. ಅಬ್‌ ಕೀ ಬಾರ್‌ ಚಾರ್‌ ಸೌ ಬಾರ್‌ ಎನ್ನುತ್ತಿರುವ ಬಿಜೆಪಿ 150 ಸೀಟುಗಳನ್ನೂ ದಾಟದು ಎಂದು ಹೇಳಿದರು.

Advertisement

ದೇಶಕ್ಕೆ ಮಾದರಿ: ರಾಜ್ಯದ ಕಾಂಗ್ರೆಸ್‌ ಸರಕಾರ ಅನುಷ್ಠಾನ ಮಾಡಿರುವ ಗ್ಯಾರಂಟಿಗಳು ದೇಶಕ್ಕೆ ಜನರ ಕಲ್ಯಾಣದ ಮಾದರಿಯಾದರೆ, ಕೇಂದ್ರದ ನರೇಂದ್ರ ಮೋದಿ ಸರಕಾರ “ಚೊಂಬು’ ಮಾದರಿ ಎಂದು ಲೇವಡಿ ಮಾಡಿದ ಸುರ್ಜೇವಾಲ, ಉಚಿತ ಅಕ್ಕಿ ನೀಡಲು ಬೇಕಾದಷ್ಟು ಅಕ್ಕಿ ಪೂರೈಸಲು ಮೋದಿ ಸರಕಾರ ನಿರಾಕರಿಸಿದಾಗ 10 ಕೆ.ಜಿ. ಅಕ್ಕಿಗೆ ಸಮನಾದ ಮೊತ್ತವನ್ನು ನೇರವಾಗಿ ಫ‌ಲಾನುಭವಿಗಳ ಖಾತೆಗೆ ಹಾಕಲಾಗುತ್ತಿದೆ. 1.50 ಲಕ್ಷ ಮಂದಿ ಈಗಾಗಲೇ ಯುವನಿಧಿ ಪಡೆಯುತ್ತಿದ್ದು, ನಿತ್ಯವೂ ಈ ಸಂಖ್ಯೆ ಏರುತ್ತಿದೆ. ಈ ಗ್ಯಾರಂಟಿಗಳಿಂದ ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಿಸುತ್ತಿದೆ. ಸಮಾನ ನ್ಯಾಯದ ಪರಿಕಲ್ಪನೆಯನ್ನು ಸಾಕಾರ ಮಾಡುತ್ತಿದೆ ಎಂದು ವಿವರಿಸಿದರು.

ಚೊಂಬು ಮಾದರಿ: ಪ್ರಧಾನಿ ನರೇಂದ್ರ ಮೋದಿ ಸರಕಾರವು ಕರ್ನಾಟಕ ಹಾಗೂ ದೇಶದ ಜನತೆಗೆ ಚೊಂಬು ಬಿಟ್ಟು ಬೇರೇನೂ ನೀಡಿಲ್ಲ. 15ನೇ ಹಣಕಾಸು ಆಯೋಗದಡಿ 58 ಸಾವಿರ ಕೋಟಿ ರೂ. ಕೊಟ್ಟಿಲ್ಲ, ರೈತರ ಆದಾಯ ದ್ವಿಗುಣವಾಗಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ವಾಗ್ಧಾಳಿ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ| ಮಂಜುನಾಥ ಭಂಡಾರಿ, ಮಾಜಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಮತ್ತಿತರರು ಉಪಸ್ಥಿತರಿದ್ದರು.

ನೇಹಾ ಹತ್ಯೆ: ಆರೋಪಿಗೆ ಗಲ್ಲು ಶಿಕ್ಷೆ: ಸುರ್ಜೇವಾಲ
ಮಂಗಳೂರು: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸುತ್ತೇನೆ. ಪ್ರಕರಣದ ತನಿಖೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸುವುದಾಗಿ ಎಐಸಿಸಿ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲ ಭರವಸೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಪ್ರಕರಣದ ತನಿಖೆ 90 ದಿನಗಳಲ್ಲಿ ಪೂರ್ಣಗೊಳಿಸಿ ಆರೋಪಿಗೆ ಗಲ್ಲು ಶಿಕ್ಷೆ ನೀಡುವ ಮೂಲಕ ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು. ಆದರೆ ಈ ಪ್ರಕರಣವನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎಂದರು.

ಈ ಹಿಂದೆ ಪರೇಶ್‌ ಮೇಸ್ತ ಸಾವಿನ ಪ್ರಕರಣವನ್ನೂ ಬಿಜೆಪಿಯವರು ರಾಜಕೀಯಗೊಳಿಸಿದ್ದರು. ಕೊನೆಗೆ ಅದು ಆಕಸ್ಮಿಕ ಮರಣ ಎಂದು ಸಿಬಿಐ ತನಿಖೆ ತಿಳಿಸಿತ್ತು. ನೇಹ ನಮ್ಮೆಲ್ಲರ ಪುತ್ರಿ, ಆರೋಪಿಯ ಬಂಧನವಾಗಿದೆ. ಪೂರ್ಣ ಶಕ್ತಿಯಿಂದ ತನಿಖೆ ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next