Advertisement

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

11:27 PM Apr 21, 2024 | Team Udayavani |

ಕೋಲಾರ/ಚಿಕ್ಕಬಳ್ಳಾಪುರ: ಮಾಜಿ ಪ್ರಧಾನಿ ದೇವೇಗೌಡರು ಹೇಳಿದಂತೆ ಖಾಲಿ ಚೊಂಬು ಅಕ್ಷಯ ಪಾತ್ರೆ ಆಗಿದ್ದರೆ ಕೇಂದ್ರ ಸರಕಾರ ರಾಜ್ಯಕ್ಕೆ ಬರ ಪರಿಹಾರವನ್ನು ಯಾಕೆ ಕೊಡಲಿಲ್ಲ? ವರ್ಷಕ್ಕೆ 2 ಕೋಟಿ ಉದ್ಯೋಗ ಯಾಕೆ ಸೃಷ್ಟಿಸಲಿಲ್ಲ? ತೆರಿಗೆ ಸಂಗ್ರಹದಲ್ಲಿ ರಾಜ್ಯದ ಪಾಲನ್ನು ಯಾಕೆ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹಾಗೂ ಕೋಲಾರದ ಬಂಗಾರಪೇಟೆಯಲ್ಲಿ ರವಿವಾರ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಚುನಾವಣ ಪ್ರಚಾರ ಹಾಗೂ ರೋಡ್‌ ಶೋದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸರಕಾರ ಹಾಗೂ ಜೆಡಿಎಸ್‌ ವರಿಷ್ಠ ದೇವೇಗೌಡರ ವಿರುದ್ಧ ವಾಗ್ಧಾಳಿ ನಡೆಸಿದರು.

ಮೋದಿ ಕೊಟ್ಟ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ರೈಲು ಬಿಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಹಾಲಿ ಮತ್ತು ಮಾಜಿ ಪ್ರಧಾನಿ ಒಟ್ಟಾಗಿ ಜಿಲ್ಲೆಯ ಜನತೆಗೆ ಜೋಡಿ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ ಎಂದು ಹರಿಹಾಯ್ದರು.

15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಮಾಡಿದ ಮೋಸವನ್ನು ಮೋದಿಯವರ ಖಾಲಿ ಚೊಂಬು ಸಾಕ್ಷಿಯಾಗಿದೆ. ದೇವೇಗೌಡರೇ ಈ ಚೊಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಾಗಿದ್ದರೆ 15ನೇ ಹಣಕಾಸು ಆಯೋಗದಲ್ಲಿ ಆಗಿರುವ ನಷ್ಟ, ಅನ್ಯಾಯವನ್ನು ಸರಿಪಡಿಸಿ. ಅಕ್ಷಯ ಪಾತ್ರೆಯಿಂದ ಉದುರಿಸಿ ನೋಡೋಣ ಎಂದು ಸವಾಲು ಹಾಕಿದರು.

ಮೋದಿ ಪ್ರಧಾನಿಯಾಗಲು ನಾಲಾಯಕ್‌: ಸಿದ್ದರಾಮಯ್ಯ
ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಉದ್ಯೋಗ ಕೊಡಿ ಎಂದರೆ ಪಕೋಡಾ ಮಾರಿ ಎಂದ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಆಗಲು ನಾಲಾಯಕ್‌ ಎಂದು ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

Advertisement

ಶಿಡ್ಲಘಟ್ಟದಲ್ಲಿ ರವಿವಾರ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ವಿ.ಗೌತಮ್‌ ಪರ ಚುನಾವಣ ಪ್ರಚಾರದಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರದಲ್ಲಿ ಮೋದಿ ಹಾಗೂ ದೇವೇಗೌಡರು ಸುಳ್ಳು ಹೇಳಿದ್ದಾರೆ. ಸುಳ್ಳನ್ನು ಯಾರೂ ನಂಬುವುದಿಲ್ಲ. ಸುಳ್ಳು ಹೇಳುವುದಕ್ಕೆ ಮಿತಿ ಬೇಡವೇ? ನಾವು ನುಡಿದ್ದಂತೆ ನಡೆದಿದ್ದೇವೆ. ಅಧಿಕಾರಕ್ಕೆ ಬಂದ 8 ತಿಂಗಳಿಗೆ 5 ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದರು.

ರೋಡ್‌ ಶೋದಲ್ಲಿ ಖಾಲಿ ಚೊಂಬು ಸದ್ದು
ಕೋಲಾರದ ಬಂಗಾರಪೇಟೆಯಲ್ಲಿ ನಡೆದ ಕಾಂಗ್ರೆಸ್‌ ರೋಡ್‌ ಶೋದಲ್ಲಿ ಖಾಲಿ ಚೊಂಬಿನ ಸದ್ದು ಜೋರಾಗಿತ್ತು. ಸಿಎಂ ತಮ್ಮ ಭಾಷಣದ ನಡುವೆ ಕೇಳುವ ಪ್ರತಿ ಪ್ರಶ್ನೆಗೂ ಜನರಿಂದ “ಚೊಂಬು..ಚೊಂಬು..’ ಎಂಬ ಉತ್ತರ ಸಿಕ್ಕಿತು.

10 ವರ್ಷಗಳಿಂದ ರಾಜ್ಯಕ್ಕೆ ಖಾಲಿ
ಚೊಂಬು ಕೊಡುಗೆ: ಸುರ್ಜೇವಾಲ
ಮಂಡ್ಯ: ಕಳೆದ 10 ವರ್ಷಗಳಿಂದ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಖಾಲಿ ಚೊಂಬು ಕೊಡುಗೆ ನೀಡುತ್ತಲೇ ಬಂದಿದ್ದಾರೆ. ರಾಜ್ಯದ ತಮ್ಮ ಪಾಲಿನ ತೆರಿಗೆ, ಪರಿಹಾರ ಹಣ ನೀಡದೆ ಖಾಲಿ ಚೊಂಬು ನೀಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಹೇಳಿದರು.

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 58 ಸಾವಿರ ಕೋಟಿ ರೂ. ಬರಬೇಕು. ಎನ್‌ಡಿಆರ್‌ಎಫ್‌ ನಿಯಮದಡಿ ಬರ ಪರಿಹಾರವಾಗಿ 18 ಸಾವಿರ ಕೋಟಿ ರೂ. ಬರಬೇಕು. ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ರಾಜ್ಯಕ್ಕೆ ಒಂದು ರೂಪಾಯಿಯೂ ಬಂದಿಲ್ಲ. ಕೇಳಿದರೆ, ಮೋದಿ ಖಾಲಿ ಚೊಂಬು ತೋರಿಸುತ್ತಾರೆ. ದೇಶದಲ್ಲಿ ಖಾಲಿ ಚೊಂಬು ಸಂಸ್ಕೃತಿಯನ್ನು ಬೆಳೆಸಿದ್ದೇ ನರೇಂದ್ರ ಮೋದಿ ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next