Advertisement

Lok Sabha Elections; ಮಂಗಳೂರು, ಮೈಸೂರಿನಲ್ಲಿ ಇಂದು ಪ್ರಧಾನಿ ಮೋದಿ ರೋಡ್‌ ಶೋ

01:08 AM Apr 14, 2024 | Team Udayavani |

ಮಂಗಳೂರು/ ಮೈಸೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ರವಿವಾರ ಮೈಸೂರು ಮತ್ತು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಹಾಲಿ ಪ್ರಧಾನಿ ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೋಕಸಭೆ ಚುನಾವಣೆ ಘೋಷಣೆ ಆದ ಬಳಿಕ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವುದು 3ನೇ ಬಾರಿ.

Advertisement

ಪ್ರಧಾನಿ ಮೋದಿಯವರ ಅಧಿಕೃತ ಚೊಚ್ಚಲ ರೋಡ್‌ ಶೋಗೆ ಮಂಗಳೂರು ನಗರ ಸಿದ್ಧಗೊಂಡಿದ್ದು, ಕೇಸರಿ ಗರ್ಜನೆಗೆ ಕ್ಷಣಗಣನೆ ಆರಂಭವಾಗಿದೆ.

ರೋಡ್‌ ಶೋ ನಡೆಯಲಿರುವ ಲೇಡಿಹಿಲ್‌ನ ಶ್ರೀ ನಾರಾಯಣ ಗುರು ವೃತ್ತದಿಂದ ನವಭಾರತ ವೃತ್ತದ ವರೆಗೆ ಬಿಜೆಪಿ ಬಾವುಟ, ಬಂಟಿಂಗ್‌ಗಳು ರಾರಾಜಿಸುತ್ತಿವೆ. ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸುವ್ಯವಸ್ಥೆ, ಬಿಗಿ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.

ಯಾವುದೇ ಅವಘಡಗಳು ಆಗದಂತೆ ತಡೆಯಲು ಎಸ್‌ಪಿಜಿಯವರ ಸ್ನೆ„ಪರ್‌ ಕಣ್ಗಾವಲು ಕಾಯಲಿದೆ. ರೋಡ್‌ ಶೋ ರಾತ್ರಿ ನಡೆಯಲಿರುವುದರಿಂದ ಅಗತ್ಯ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.

7.45ಕ್ಕೆ ಆರಂಭ: ಪ್ರಧಾನಿ ವಿಮಾನ ನಿಲ್ದಾಣದಿಂದ ನಾರಾಯಣಗುರು ವೃತ್ತಕ್ಕೆ ಆಗಮಿಸಿ ಅನಂತರ ರಾತ್ರಿ 7.45ಕ್ಕೆ ರೋಡ್‌ ಶೋ ಆರಂಭಿಸಲಿದ್ದಾರೆ. ಪಾಲ್ಗೊಳ್ಳು ವವರು 7 ಗಂಟೆಯ ಒಳಗೆ ಆಗಮಿಸಿ ರಸ್ತೆಯ ಇಕ್ಕೆಲಗಳಲ್ಲಿ ಸೇರಬೇಕು ಎಂದು ಬಿಜೆಪಿ ರಾಜ್ಯ ಚುನಾವಣ ಸಮಿತಿ ಪ್ರ. ಸಂಚಾಲಕ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಮೈಸೂರಿನಲ್ಲಿ ಬೃಹತ್‌ ಸಮಾವೇಶ: ಪ್ರಧಾನಿ ಮೋದಿಯವರು ಮೈಸೂರಿನಲ್ಲಿ ರವಿವಾರ ಸಂಜೆ 4 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಬಹಿರಂಗ ಸಮಾವೇಶದಲ್ಲಿ ಕರ್ನಾಟಕ ಮೈತ್ರಿ ಕೂಟದ ಚುನಾವಣ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಮೈಸೂರು-ಕೊಡಗು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಕ್ಷೇತ್ರಗಳನ್ನು ಒಳಗೊಂಡ ಬಹಿರಂಗ ಸಮಾವೇಶ ಇದಾಗಿದೆ. ಅದಕ್ಕಾಗಿ 30/110 ಅಡಿ ವಿಸ್ತೀರ್ಣದ ವೇದಿಕೆ ಸಿದ್ಧ ಮಾಡಲಾಗಿದೆ. 60 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕು ಕ್ಷೇತ್ರಗಳಿಂದ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ಒಂದು ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಹಿತ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಮೈತ್ರಿ ಅಭ್ಯರ್ಥಿಗಳಾದ ಮೈಸೂರು-ಕೊಡಗು ಕ್ಷೇತ್ರದ ಯದುವೀರ್‌ ಒಡೆಯರ್‌, ಹಾಸನದ ಪ್ರಜ್ವಲ್‌ ರೇವಣ್ಣ, ಚಾಮರಾಜನಗರದ ಬಾಲರಾಜ್‌ ಭಾಗವಹಿಸಲಿದ್ದಾರೆ.

5 ಸಾವಿರ ಕೆ.ಜಿ. ಹೂ ಪಕಳೆ
ರೋಡ್‌ ಶೋ ವೇಳೆ ಬಳಕೆ ಮಾಡುವುದಕ್ಕೆ ಈಗಾಗಲೇ ವಿವಿಧ ಬಣ್ಣದ ಸೇವಂತಿಗೆ ಹೂವುಗಳ 5 ಸಾವಿರ ಕೆ.ಜಿ. ಹೂಪಕಳೆ ಸಿದ್ಧಪಡಿಸಲಾಗಿದೆ. ಹಾಸನ, ಚಿಕ್ಕಮಗಳೂರು ಕಡೆಯಿಂದ ಹೂವುಗಳನ್ನು ತರಿಸಲಾಗಿದೆ. ಈ ಹೂಗಳನ್ನು ಪ್ರತ್ಯೇಕಿಸಿ, ಪಕಳೆಯಾಗಿಸಿ ಪ್ರತ್ಯೇಕ ಕಟ್ಟುಗಳನ್ನಾಗಿ ಮಾಡಿ, ಸೆಕ್ಯೂರಿಟಿ ತಪಾಸಣೆ ನಡೆಸಿ ರೋಡ್‌ ಶೋ ಸ್ಥಳಕ್ಕೆ ತಲಪಿಸುವ ವ್ಯವಸ್ಥೆ ಮಾಡಲಾಗಿದೆ.

ರೋಡ್‌ ಶೋ
ಏನು ವಿಶೇಷ?
-ಮಂಗಳೂರಿನಲ್ಲಿ ಮೋದಿಯವರ ಮೊದಲ ಅಧಿಕೃತ ರೋಡ್‌ಶೋ
-ರವಿವಾರ ರಾತ್ರಿ 7.45ಕ್ಕೆ ಆರಂಭ, 8.45ಕ್ಕೆ ಮುಕ್ತಾಯ
-1 ತಾಸು, ಸುಮಾರು 2 ಕಿ.ಮೀ. ದೂರ ರೋಡ್‌ಶೋ
-ಮಂಗಳೂರಿಗೆ ಪ್ರಧಾನಿ ಮೋದಿ ಅವರ 10ನೇ ಭೇಟಿಯಿದು.

Advertisement

Udayavani is now on Telegram. Click here to join our channel and stay updated with the latest news.

Next