Advertisement

ಸ್ಕ್ರೀನಿಂಗ್‌​​​​​​​ ಕಮಿಟಿಯಲ್ಲಿ ಪರಂಗಿಲ್ಲ ಅವಕಾಶ?

01:22 AM Feb 21, 2019 | Team Udayavani |

ಬೆಂಗಳೂರು: ರಾಜ್ಯದ ಮೈತ್ರಿ ಪಕ್ಷಗಳಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರಿದಿರುವ ನಡುವೆಯೇ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಹಂಚಿಕೆ ಕುರಿತು ನಡೆಯುವ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ಗೆ ಅವಕಾಶ ಸಿಗುವುದೋ, ಇಲ್ಲವೋ ಎನ್ನುವ ಚರ್ಚೆ ರಾಜ್ಯ ಕಾಂಗ್ರೆಸ್‌ನಲ್ಲಿ ಆರಂಭವಾಗಿದೆ. ಆ ಸಮಿತಿಯಲ್ಲಿ ಪಕ್ಷದ ನಿಯಮ ಪ್ರಕಾರ ಶಾಸಕಾಂಗ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರಿಗೆ ಅವಕಾಶ ಇರುವುದರಿಂದ ಸಿದ್ದರಾಮಯ್ಯ ಜತೆಗೆ ಪರಮೇಶ್ವರ್‌ ಸದಸ್ಯರಾಗುವುದು ಕಷ್ಟವಾಗಿದೆ. ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ರಾಜ್ಯದ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅಧ್ಯಕ್ಷತೆಯ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಐವರು ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಶಾಸಕಾಂಗ ಪಕ್ಷದ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರು ಸಮಿತಿ ಸದಸ್ಯರಾಗಿದ್ದಾರೆ. 

Advertisement

ಈ ಬಾರಿ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ನಾಯಕರಿಗೆ ಹೆಚ್ಚಿನ ಅಧಿಕಾರ ನೀಡಿದ್ದು, ಅವರು ಶಿಫಾರಸು ಮಾಡುವ ಅಭ್ಯರ್ಥಿಗಳನ್ನೇ ಅಂತಿಮಗೊಳಿಸಲು ರಾಹುಲ್‌ ಒಲವು ತೋರಿದ್ದಾರೆ ಎನ್ನಲಾಗಿದೆ.ಅಲ್ಲದೆ, ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷರಾದ ಮೇಲೆ ದೇಶಾದ್ಯಂತ ಅಭ್ಯರ್ಥಿಗಳ ಆಯ್ಕೆಗೆ ಏಕರೂಪದ ನಿಯಮ ರೂಪಿಸಿದ್ದು, ಎಲ್ಲಾ ರಾಜ್ಯಗಳಲ್ಲಿ ಶಾಸಕಾಂಗ ಪಕ್ಷದ ನಾಯಕ, ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು, ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಹಾಗೂ ಉಸ್ತುವಾರಿ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ. ಕರ್ನಾಟಕದ ಮಟ್ಟಿಗೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ, ಪರಮೇಶ್ವರ್‌ ಅವರು ಸ್ಕ್ರೀನಿಂಗ್‌ ಕಮಿಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಪರಮೇಶ್ವರ್‌ ಉಪಮುಖ್ಯಮಂತ್ರಿಯಾಗಿದ್ದರೂ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಇಲ್ಲದೇ ಇರುವುದರಿಂದ ಅಭ್ಯರ್ಥಿಗಳ ಆಯ್ಕೆ ಸಮಿತಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಹೀಗಾಗಿ ಅಭ್ಯರ್ಥಿಗಳ ಅಂತಿಮ ಆಯ್ಕೆಯಲ್ಲಿ ಸಿದ್ದರಾಮಯ್ಯ ಹಿಡಿತ ಹೆಚ್ಚಾಗಬಹುದೆಂಬ ಮಾತುಗಳು ಕೇಳಿ ಬರುತ್ತಿವೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆಯ 36 ಸದಸ್ಯರನ್ನೊಳಗೊಂಡ ರಾಜ್ಯ ಚುನಾವಣಾ ಸಮಿತಿ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ, ವೇಣುಗೋಪಾಲ್‌ ಅಧ್ಯಕ್ಷತೆಯ ರಾಜ್ಯದ ಸ್ಕ್ರೀನಿಂಗ್‌ ಕಮಿಟಿಗೆ ಕಳುಹಿಸಿ ಕೊಡಬೇಕು. ಆ ಸಮಿತಿಯೇ ರಾಜ್ಯದ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸುತ್ತದೆ. ಈ ಸಮಿತಿಯಲ್ಲಿ ರಾಜ್ಯದ ಪರ ದಿನೇಶ್‌ ಗುಂಡೂರಾವ್‌ ಹಾಗೂ ಸಿದ್ದರಾಮಯ್ಯ ಇಬ್ಬರೇ ಇರುತ್ತಾರೆ ಎನ್ನಲಾಗಿದೆ.

ದಿನೇಶ್‌ ಗುಂಡೂರಾವ್‌ ಕೂಡ ಸಿದ್ದರಾಮಯ್ಯ ಅವರ ಮಾತಿನಂತೆ ನಡೆದುಕೊಳ್ಳುವುದರಿಂದ ಸಿದ್ದರಾಮಯ್ಯ ಬೆಂಬಲಿಗರಿಗೆ ಹೆಚ್ಚಿನ ದೊರೆಯಬಹುದೆಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ. ಇದು ಪರಮೇಶ್ವರ್‌ ಅವರೊಂದಿಗೆ ಗುರುತಿಸಿಕೊಂಡು ಟಿಕೆಟ್‌ ಆಕಾಂಕ್ಷಿಗಳಾಗಿರುವವರ ಕುತೂಲಹಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ರಾಹುಲ್‌ ನೇತೃತ್ವದ ಕೋರ್‌ ಕಮಿಟಿ
ರಾಜ್ಯದ ಸ್ಕ್ರೀನಿಂಗ್‌ ಕಮಿಟಿ ಸಿದ್ಧಪಡಿಸುವ ಸಂಭಾವ್ಯರ ಪಟ್ಟಿಯನ್ನು ಅಂತಿಮವಾಗಿ ರಾಹುಲ್‌
ಗಾಂಧಿ ಅಧ್ಯಕ್ಷತೆಯ ಕೇಂದ್ರ ಚುನಾವಣಾ ಸಮಿತಿಗೆ (ಕೋರ್‌ ಕಮಿಟಿ) ಕಳುಹಿಸಿ ಕೊಡಲಾಗುತ್ತದೆ. ಆ ಸಮಿತಿಯಲ್ಲಿ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಸೇರಿ ರಾಷ್ಟ್ರೀಯ ನಾಯಕರು ಸದಸ್ಯರಾಗಿರುತ್ತಾರೆ. ಕರ್ನಾಟಕದಿಂದ ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇರಲಿದ್ದಾರೆ. ಅವರ ಹೊರತಾಗಿ ಶಾಸಕಾಂಗ ಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷರು ಆಹ್ವಾನಿತ ಸದಸ್ಯರಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ರಾಜ್ಯದ ರಾಜಕೀಯ ಪರಿಸ್ಥಿತಿಯ ಲೆಕ್ಕಾಚಾರದಲ್ಲಿ ಸರ್ಕಾರದ ಪ್ರತಿನಿಧಿಯಾಗಿರುವ ಉಪ ಮುಖ್ಯಮಂತ್ರಿಯನ್ನೂ ರಾಹುಲ್‌ ಗಾಂಧಿ ಆಹ್ವಾನಿಸುವ ಸಾಧ್ಯತೆ ಇದೆ ಎನ್ನುವುದು ಪರಮೇಶ್ವರ್‌ ಪರವಾಗಿರುವವರ ಆಶಾಭಾವನೆ.

Advertisement

ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಅವಕಾಶ
ಇತ್ತೀಚೆಗೆ ನಡೆದ ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ ಆಯ್ಕೆ ಸಮಿತಿಯಲ್ಲಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಪಿಸಿಸಿ ಅಧ್ಯಕ್ಷರು ಮಾತ್ರ ಸದಸ್ಯರಾಗಿದ್ದರಿಂದ ಹಿರಿಯ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ ಎನ್ನುವ ಕಾರಣಕ್ಕೆ ದಿಗ್ವಿಜಯ್‌ ಸಿಂಗ್‌, ಕಮಲನಾಥ್‌, ಅಶೋಕ್‌ ಗೆಹೊÉàಟ್‌ ಅವರಿಗೂ ರಾಹುಲ್‌ ಗಾಂಧಿ ಅವಕಾಶ ಕಲ್ಪಿಸಿಕೊಟ್ಟಿದ್ದರು. ಅದೇ ರೀತಿ ಪರಮೇಶ್ವರ್‌ ಅವರಿಗೂ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಅವಕಾಶ ನೀಡುತ್ತಾರೆ ಎನ್ನುವುದು ಅವರ ಬೆಂಬಲಿಗರ ನಂಬಿಕೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಆ ರೀತಿಯ ಸೇರ್ಪಡೆಗೆ ಅವಕಾಶ ಇರುವುದಿಲ್ಲ ಎನ್ನುವುದು ಸಿದ್ದರಾಮಯ್ಯ ಪರವಾಗಿರುವವರ ವಾದ.

ಬೇರೆ ರಾಜ್ಯಗಳ ಪರಿಸ್ಥಿತಿಗೂ, ಕರ್ನಾಟಕದ ಸದ್ಯದ ಪರಿಸ್ಥಿತಿಗೂ ವ್ಯತ್ಯಾಸವಿದೆ. ಇಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಕಾಂಗ್ರೆಸ್‌ನ ಪರವಾಗಿ ಮುಖ್ಯಸ್ಥರಾಗಿ ಉಪ ಮುಖ್ಯಮಂತ್ರಿ ಇದ್ದಾರೆ. ಸ್ಕ್ರೀನಿಂಗ್‌ ಕಮಿಟಿಯಲ್ಲಿ ಶಾಸಕಾಂಗ ಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಇದ್ದರೆ ಒಳ್ಳೆಯದು. ಪರಮೇಶ್ವರ್‌ ಸಮಿತಿಯಲ್ಲಿ ಇರುತ್ತಾರೆ ಎನ್ನುವ ವಿಶ್ವಾಸ ಇದೆ.
● ಪ್ರೊ.ಬಿ.ಕೆ. ಚಂದ್ರಶೇಖರ್‌, ಕೆಪಿಸಿಸಿ ಉಪಾಧ್ಯಕ್ಷ. 

ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ
ಬೆಂಗಳೂರು:
ಲೋಕಸಭೆ ಚುನಾವಣೆಗೆ ಜೆಡಿಎಸ್‌ ಜತೆಗೆ ಸೀಟು ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲವೂ ಸುಗಮವಾಗಿ ನಡೆಯಲಿದ್ದು, ಇಂದು ಜೆಡಿಎಸ್‌ ವರಿಷ್ಠ ದೇವೇಗೌಡರ ಜೊತೆ ಮಾತುಕತೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಭಟ್ಕಳ ಮಾಜಿ ಶಾಸಕ ಜೆ.ಡಿ.ನಾಯಕ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ನಂತರ ಮಾತನಾಡಿದ ಅವರು, ಟಿಕೆಟ್‌ ಬೇಡಿಕೆ ವಿಚಾರದಲ್ಲಿ ಯಾರೂ ಭಿಕ್ಷುಕರಲ್ಲ. ಎರಡೂ ಪಕ್ಷಗಳಲ್ಲಿ ಹಾಲಿ ಸಂಸದರು ಇರುವ ಕ್ಷೇತ್ರಗಳಲ್ಲಿ ಆಯಾ ಪಕ್ಷದ ಶಕ್ತಿ ಇದೆ. 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆಯ ವಿರುದ್ಧ  ಕಾಂಗ್ರೆಸ್‌ ಸಂಸದರು ಗೆದ್ದು ಬಂದಿದ್ದಾರೆ. ಹೀಗಾಗಿ ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟು ಕೊಡುವುದು ಬೇಡ ಎನ್ನುವುದು ಪಕ್ಷದ ನಾಯಕರ ಅಭಿಪ್ರಾಯವಾಗಿದೆ. ಅವರ ಜತೆ ಮಾತುಕತೆ ನಡೆಸಿದ ಮೇಲೆ ಎಲ್ಲವೂ ಬಗೆಹರಿಯಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next