Advertisement

ಕುಮಾರಸ್ವಾಮಿ ಬೆಂಬಲಕ್ಕೆ ನಿಂತ ಪರಮೇಶ್ವರ್‌

06:00 AM Jun 18, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಹೊಸ ಬಜೆಟ್‌ ಮಂಡನೆ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಿನ್ನ ಹೇಳಿಕೆ ನೀಡಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದು, ಹೊಸ ಸರ್ಕಾರ ಬಂದಾಗ ಬಜೆಟ್‌ ಮಂಡನೆ ಸಹಜ ಎನ್ನುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

Advertisement

ಜತೆಗೆ ಇನ್ನು ಮುಂದೆ ಸಮ್ಮಿಶ್ರ ಸರ್ಕಾರದ ಆಡಳಿತಾವಧಿ, ಕಾರ್ಯವೈಖರಿ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಸೂಚನೆ ನೀಡುವ ಮೂಲಕ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಬೇಕೆಂಬ ಸಂದೇಶ ರವಾನಿಸಿದ್ದಾರೆ.

ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಸಚಿವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸರ್ಕಾರ ರಚನೆಯಾದಾಗ ಬಜೆಟ್‌ ಮಂಡನೆ ಸಹಜ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸದ ಹೊರತು ಬಜೆಟ್‌ ಮಂಡಿಸಲು ಸಾಧ್ಯವಿಲ್ಲ. 

ಬಜೆಟ್‌ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಬಜೆಟ್‌ ಕುರಿತು ಸಿದ್ಧತೆ ನಡೆಸುತ್ತಿದ್ದರೆ, ಹೊಸ ಬಜೆಟ್‌ ಬೇಡ. ಹಳೆಯ ಬಜೆಟ್‌ ಮುಂದುವರಿಸಬೇಕು. ಹೊಸ ಕಾರ್ಯಕಕ್ರಮಗಳಿದ್ದರೆ ಪೂರಕ ಅಂದಾಜಿನಲ್ಲಿ ಸೇರಿಸಿ ಅನುಮೋದನೆ ಪಡೆಯಬೇಕು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಹೊಸ ಸರ್ಕಾರ ರಚನೆಯಾದಾಗ ಹೊಸ ಕಾರ್ಯಕ್ರಮಗಳನ್ನು ಘೋಷಿಸಬೇಕಾಗುತ್ತದೆ. ಹೊಸ ಬಜೆಟ್‌ ಮಂಡಿಸಬೇಕೆ ಅಥವಾ ಪೂರಕ ಅಂದಾಜು ಮಂಡಿಸಿದರೆ ಸಾಕೆ ಎಂಬ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಜಾರಿ ಬಗ್ಗೆ ಒಂದು ಸಮಿತಿ ರಚಿಸಲಾಗಿದ್ದು, ಹತ್ತು ದಿನದಲ್ಲಿ ಸಮಿತಿ ವರದಿ ನೀಡಲಿದೆ. ಬಳಿಕ ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

Advertisement

ಸರ್ಕಾರದ ಆಡಳಿತಾವಧಿ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಬಗ್ಗೆ ಯಾರೊಬ್ಬರೂ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು. ಸರ್ಕಾರದ ಬಗ್ಗೆ ಮುಖ್ಯಮಂತ್ರಿಗಳು ಇಲ್ಲವೇ ನಾನು ಅಥವಾ ಸಮನ್ವಯ ಸಮಿತಿ ಅಧ್ಯಕ್ಷರಷ್ಟೇ ಮಾತನಾಡಬೇಕು. ಉಳಿದವರು ಮಾತನಾಡಿದರೆ ಗೊಂದಲ ಉಂಟಾಗಲಿದೆ ಎನ್ನುವ ಮೂಲಕ ಬಹಿರಂಗ ಹೇಳಿಕೆ ನಿಲ್ಲಿಸಬೇಕು ಎಂದು ಪಕ್ಷದ ಪ್ರಮುಖರಿಗೆ ಪರೋಕ್ಷವಾಗಿ ಸೂಚಿಸಿದರು.

ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ಪಕ್ಷದ ಹಲವು ವಿಚಾರ ಸೇರಿದಂತೆ ಮಾಧ್ಯಮ ಹೇಳಿಕೆಗಳ ಬಗ್ಗೆಯೂ ಪರಮೇಶ್ವರ್‌ ಅವರೊಂದಿಗೆ ಚರ್ಚಿಸಿದ್ದೇನೆ. ಪಕ್ಷದವರಿಗೆ ತಿಳಿಸದೆ ಯಾರೊಬ್ಬರೂ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಎಂದು ಸೂಚಿಸಲಾಗುವುದು. ಶೀಘ್ರವಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಮುಖ್ಯಮಂತ್ರಿಗಳಿಗೆ ಅನಗತ್ಯವಾಗಿ ಮುಜುಗರ ತರುವ ಕೆಲಸ ಮಾಡಬಾರದು. ಒಗ್ಗಟ್ಟಿನಿಂದ ಮೈತ್ರಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹೇಳಿದರು.

ಯಾರೊಬ್ಬರೂ ವಿವಾದ ಸೃಷ್ಟಿಗೆ ಆಸ್ಪದ ನೀಡಬಾರದು. ಟೀಕೆ ಮಾಡುವ ಪ್ರಶ್ನೆಯೂ ಇಲ್ಲ. ಸಲಹೆ ಕೊಡುವ ಮಾತು ಇಲ್ಲ. ಎಲ್ಲವನ್ನು ಪಕ್ಷದ ಅಧ್ಯಕ್ಷರು ಮತ್ತು ನಮ್ಮ ಬಳಿ ಚರ್ಚಿಸಬೇಕು. ಶಾಸಕಾಂಗ ಪಕ್ಷದ ನಾಯಕರು ಹಾಗೂ ಪಕ್ಷದ ಅಧ್ಯಕ್ಷರೊಂದಿಗೆ ಚರ್ಚಿಸಬೇಕು. ಒಳ್ಳೆಯ ಕಾರ್ಯಕ್ಕೆ ಯಾರೂ ಅಡ್ಡ ಬರಬಾರದು. ಜೆಡಿಎಸ್‌ ನಾಯಕರು ಕೂಡ ಬಹಿರಂಗ ಹೇಳಿಕೆ ನೀಡಬಾರದೆಂದು ಕೋರಲಾಗುವುದು ಎಂದು ಹೇಳಿದರು.

ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಯೋಜನೆಗಳನ್ನು ಜಾರಿಗೊಳಿಸಬೇಕು. ಜನರಿಗೆ ನೀಡಿರುವ ಭರವಸೆಗಳನ್ನು ಐದು ವರ್ಷದೊಳಗೆ ಈಡೇರಿಸದಿದ್ದರೆ ನಗೆಪಾಟಲಿಗೆ ಈಡಾಗುತ್ತೇವೆ. ಸರ್ಕಾರದ ಬಗ್ಗೆ ಜನರ ವಿಶ್ವಾಸ ಮೂಡಿಸುವ ರೀತಿಯಲ್ಲಿ ಕೆಲಸ ಮಾಡಬೇಕು. ಸಮ್ಮಿಶ್ರ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತೇವೆ ಎಂದು ಎಐಸಿಸಿ ಅಧ್ಯಕ್ಷರಾದ ರಾಹುಲ್‌ಗಾಂಧಿಯವರಿಗೆ ಭರವಸೆ ನೀಡಿದ್ದೇವೆ. ಅದರಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next