ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಮುಗಿದ ತಕ್ಷಣವೇ ರಮೇಶ್ ಜಾರಕಿಹೊಳಿ ಬಂಡಾಯ ಹಾಗೂ ಸಮಾನ ಮನಸ್ಕರೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆಂಬ ಹೇಳಿಕೆಯಿಂದ ಕಾಂಗ್ರೆಸ್‌ನ ಹಿರಿಯ ನಾಯಕರ್ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳದಿದ್ದರೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಆತಂಕಕ್ಕೊಳಗಾಗಿದ್ದಾರೆ.
ಶಾಸಕ ರಮೇಶ್ ಜಾರಕಿಹೊಳಿ ಕಳೆದ ಐದು ತಿಂಗಳಿನಿಂದಲೂ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡು ರಾಜೀನಾಮೆ ಬೆದರಿಕೆ ಹಾಕುತ್ತಿರುವುದರಿಂದ ಜಾರಕಿಹೊಳಿ ಕುಟುಂಬಕ್ಕೆ ಗಾಡ್‌ಫಾದರ್ ಎಂದೇ ಬಿಂಬಿತವಾಗಿರುವ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ತಲೆ ಕೆಡೆಸಿಕೊಳ್ಳದೇ ಮೌನವಾಗಿದ್ದಾರೆ. ಆದರೆ, ಉಪ ಮುಖ್ಯಮಂತ್ರಿ ಪರಮೇಶ್ವರ್ ಮಾತ್ರ ರಮೇಶ್ ರಾಜೀನಾಮೆ ನೀಡುತ್ತೇನೆಂದು ಹೇಳಿದ ದಿನದಿಂದ ಅವರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದಾರೆ.
ಜತೆಗೆ, ರಮೇಶ್ ಮುನಿಸಿಗೆ ಕಾರಣವಾಗಿದ್ದಾರೆ ಎನ್ನುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಗೆ ತೆರಳಿ ಅವರೊಂದಿಗೆ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ್ದು, ಪಕ್ಷದ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ. ಉಪ ಮುಖ್ಯಮಂತ್ರಿಯಾಗಿ ಸಚಿವರ ಮನೆಗೆ ತೆರಳಿ ಮಾತುಕತೆ ನಡೆಸಿರುವುದು, ಸರ್ಕಾರ ಉಳಿಸಿಕೊಳ್ಳಲು ಅವರಿಗಿರುವ ಅಗತ್ಯತೆಗೆ ಸಾಕ್ಷಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಎಂಟು ವರ್ಷ ಪಕ್ಷದ ರಾಜ್ಯಾಧ್ಯಕ್ಷರಾಗಿ, ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾದವರು, ತಮಗೆ ಬೇಕಾದವರನ್ನು ತಮ್ಮ ಮನೆಗೆ ಕರೆಸಿಕೊಂಡು ಮಾತನಾಡುವ ಗತ್ತು ಉಳಿಸಿಕೊಳ್ಳದೇ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿ, ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಮಾತುಕತೆಗೂ ಅವರನ್ನೇ ಕರೆದೊಯ್ದಿದ್ದಾರೆ. ಇದು ಉಪ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ನಡೆಸುತ್ತಿರುವ ಕಸರತ್ತು ಎಂದೇ ವಿಶ್ಲೇಷಿಸಲಾಗುತ್ತಿದೆ.
ತಲೆ ಕೆಡೆಸಿಕೊಳ್ಳದ ಸಿದ್ದರಾಮಯ್ಯ: ಈ ಮಧ್ಯೆ, ರಮೇಶ್ ಜಾರಕಿಹೊಳಿ ಅವರಿಂದ ಸರ್ಕಾರಕ್ಕೆ ಕಂಟಕ ಇದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ಸಿದ್ದರಾಮಯ್ಯ ಮಾತ್ರ ಯಾವುದೇ ಬೆಳವಣಿಗೆಗೂ ತಲೆ ಕೆಡೆಸಿಕೊಳ್ಳದೇ ಸಂಪೂರ್ಣ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಶನಿವಾರದವರೆಗೂ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ವಿಶ್ರಾಂತಿಯಲ್ಲಿದ್ದಾರೆ. ಅದೇ ಕಾರಣಕ್ಕೆ ಎರಡು ಉಪ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಭೆಗೂ ಹಾಜರಾಗಿರಲಿಲ್ಲ.
ಸಿದ್ದರಾಮಯ್ಯ ಅವರ ಈ ಮೌನವೂ ಕಾಂಗ್ರೆಸ್‌ನಲ್ಲಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಚುನಾವಣೆ ಫಲಿತಾಂಶದ ನಂತರ ಮೈತ್ರಿ ಸರ್ಕಾರಕ್ಕೆ ಕಂಟಕ ಬಂದರೆ, ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕುವುದು ಅನುಮಾನ. ಜೆಡಿಎಸ್ ಜತೆಗೆ ಗೊಂದಲದಲ್ಲಿ ಅಧಿಕಾರದಲ್ಲಿರುವುದಕ್ಕಿಂತ ಪ್ರತಿಪಕ್ಷದಲ್ಲಿ ಇರುವುದು ಉತ್ತಮ ಎಂಬ ಅಭಿಪ್ರಾಯವನ್ನು ಸಿದ್ದರಾಮಯ್ಯ ಹೈಕಮಾಂಡ್ ಮುಂದೆಯೂ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮೈತ್ರಿ ಕಡಿದುಕೊಳ್ಳಲು ನಾಯಕರ ಒಲವು: ಮೈತ್ರಿ ಸರ್ಕಾರದ ಹತ್ತು ತಿಂಗಳ ಅಧಿಕಾರದ ಅವಧಿ ಪರಾಮರ್ಶಿಸಿರುವ ಕಾಂಗ್ರೆಸ್‌ನ ಬಹುತೇಕ ನಾಯಕರಿಗೆ ಮೈತ್ರಿ ಮುಂದುವರಿಸುವ ಮನಸ್ಥಿತಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿರುವುದರಿಂದ ಪಕ್ಷದ ಭವಿಷ್ಯದ ದೃಷ್ಠಿಯಿಂದ ಮೈತ್ರಿ ಕಡಿದುಕೊಳ್ಳುವುದೇ ಒಳಿತು ಎಂಬ ಅಭಿಪ್ರಾಯವನ್ನು ಬಹುತೇಕ ನಾಯಕರು ಹೊಂದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಚುನಾವಣೆ ಫಲಿತಾಂಶ ನೋಡಿ ಕಾಂಗ್ರೆಸ್ ಮುಂದಿನ ನಡೆ ನಿರ್ಧಾರವಾಗುತ್ತದೆಂಬ ಮಾತುಗಳು ಕೇಳಿ ಬರುತ್ತಿವೆ.
* ಶಂಕರ ಪಾಗೋಜಿ