ಹೊಸದಿಲ್ಲಿ : ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಇಂದು ಗುರುವಾರ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರಿಂದ ಪರಮ ವಿಶಿಷ್ಟ ಸೇವಾ ಪದಕವನ್ನು ಪಡೆಯಲಿದ್ದಾರೆ.
ಪರಮ ವಿಶಿಷ್ಟ ಸೇವಾ ಪದಕವು ಶಾಂತಿ ಕಾಲದ ಸೇವೆಗಳನ್ನು ಪರಿಗಣಿಸಿ ನೀಡುವ ಪದಕವಾಗಿದ್ದು ಇದು ಗ್ಯಾಲಂಟ್ರಿಗೆ ಸಂಬಂಧಿಸಿರುವುದಿಲ್ಲ.
2016ರ ಡಿಸೆಂಬರ್ ನಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದ ಜನರಲ್ ರಾವತ್ ಅವರು ಈ ಮೊದಲು ಅನೇಕ ಸೇವಾ ಪದಕಗಳು ಪ್ರಾಪ್ತವಾಗಿವೆ. ಅವುಗಳಲ್ಲಿ ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ ಮತ್ತು ಸೇನಾ ಪದಕಗಳು ಮುಖ್ಯವಾಗಿವೆ.
ಇದೀಗ ಪರಮ ವಿಶಿಷ್ಟ ಸೇವಾ ಪದಕವನ್ನು ಪಡೆಯುವ ಜನರಲ್ ರಾವತ್, ಈ ಹಿಂದೆ ಈ ಪದಕ ಪಡೆದಿರುವ 19 ಹಿರಿಯ ಸೇನಾ ಅಧಿಕಾರಿಗಳ ಸಾಲಿಗೆ ಸೇರಿದ್ದಾರೆ.
ಕಳೆದ ನಾಲ್ಕು ದಶಕಗಳಲ್ಲಿ ಸೇನಾ ಮುಖ್ಯಸ್ಥರಾದ ಬಹುತೇಕ ಎಲ್ಲ ಕಮಾಂಡರ್‌ಗಳಿಗೆ, ಅವರು ಸೇನೆಯ ಉನ್ನತ ಹುದ್ದೆಯನ್ನು ಅಲಂಕರಿಸುವ ಮುನ್ನ, ಪರಮ ವಿಶಿಷ್ಟ ಸೇವಾ ಪದಕವನ್ನು ಪಡೆದಿರುತ್ತಾರೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.
ಪಿವಿಎಸ್‌ಎಂ ಪದಕಕ್ಕೆ ಈ ವರೆಗೆ 15 ಲೆಫ್ಟಿನೆಂಟ್ ಜನರಲ್ ಗಳು ಮತ್ತು ಮೂವರು ಮೇಜರ ಜನರಲ್‌ಗಳು ಪಾತ್ರರಾಗಿದ್ದಾರೆ.