ನವದೆಹಲಿ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಆದೇಶ ನೀಡಬೇಕೆಂದು ಕೋರಿ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಂ ಬೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಬುಧವಾರ(ಮಾರ್ಚ್ 24) ನಿರಾಕರಿಸಿದೆ.
ಇದನ್ನೂ ಓದಿ:ತನ್ನ 1,229 ಟವರ್ ಗಳನ್ನು ಮಾರಾಟ ಮಾಡುತ್ತಿದೆ ಏರ್ ಟೆಲ್..! ಎಲ್ಲಿ..?
ಸುಪ್ರೀಂಕೋರ್ಟ್ ನ ಜಸ್ಟೀಸ್ ಸಂಜಯ್ ಕಿಶನ್ ಕೌಲ್ ಮತ್ತು ಜಸ್ಟೀಸ್ ಆರ್.ಸುಭಾಶ್ ರೆಡ್ಡಿ ನೇತೃತ್ವದ ದ್ವಿಸದಸ್ಯ ಪೀಠ, ದೂರುದಾರರು ಎತ್ತಿರುವ ಪ್ರಕರಣ ಗಂಭೀರವಾದದ್ದು, ಆದರೆ ಈ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಬೇಕೆ ವಿನಃ, ಸುಪ್ರೀಂಕೋರ್ಟ್ ಗೆ ಅಲ್ಲ ಎಂದು ತಿಳಿಸಿದೆ.
ಇದೊಂದು ಗಂಭೀರವಾದ ವಿಷಯ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ನೀವ್ಯಾಕೆ ಈ ಬಗ್ಗೆ ಹೈಕೋರ್ಟ್ ಗೆ ಹೋಗಿಲ್ಲ ಎಂದು ಜಸ್ಟೀಸ್ ಕೌಲ್ ಪರಂಬೀರ್ ಸಿಂಗ್ ಪರ ವಕೀಲರಿಗೆ ಪ್ರಶ್ನಿಸಿರುವುದಾಗಿ ವರದಿ ತಿಳಿಸಿದೆ.
ದೂರುದಾರರು ಇಂತಹ ಗಂಭೀರ ಆರೋಪವನ್ನು ಹೊರಿಸಿದ ನಂತರವೂ ಅನಿಲ್ ದೇಶ್ ಮುಖ್ ಅವರನ್ನು ಯಾಕೆ ಪ್ರಕರಣದಲ್ಲಿ ಪಾರ್ಟಿಯನ್ನಾಗಿ ಯಾಕೆ ಉಲ್ಲೇಖಿಸಿಲ್ಲ ಎಂದು ಪೀಠ ಪ್ರಶ್ನಿಸಿದೆ. ಈ ಪ್ರಕರಣವನ್ನು ಮೊದಲು ಕಲಂ 226ರ ಅಡಿಯಲ್ಲಿ ಹೈಕೋರ್ಟ್ ನಲ್ಲಿ ದಾಖಲಿಸಿ, ಆ ಬಳಿಕ ಕಲಂ 32ರ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ದಾಖಲಿಸಬಹುದಾಗಿದೆ ಎಂದು ವಿವರಿಸಿದೆ.
ಪರಂಬೀರ್ ಸಿಂಗ್ ಪರ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ವಾದಿಸಿದ್ದು, ಈ ಅರ್ಜಿಯನ್ನು ಹಿಂಪಡೆಯಲಿದ್ದು, ಬುಧವಾರವೇ(ಮಾ.24) ಹೈಕೋರ್ಟ್ ನಲ್ಲಿ ದೂರು ದಾಖಲಿಸುವುದಾಗಿ ಸುಪ್ರೀಂಕೋರ್ಟ್ ಗೆ ತಿಳಿಸಿದರು. ಅಲ್ಲದೇ ಈ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಲು ಸುಪ್ರೀಂಕೋರ್ಟ್ ಗೆ ಮನವಿ ಮಾಡಿಕೊಂಡರು. ಅದರಂತೆ ಸುಪ್ರೀಂಕೋರ್ಟ್ ಹೈಕೋರ್ಟ್ ಗೆ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.