Advertisement

Paralympics: ಪೋಲಿಯೋಗೆ ಸವಾಲೆಸೆದು ಸ್ಪರ್ಧೆಗೆ ಹೊರಟಿದ್ದಾರೆ ಸಕೀನಾ

12:23 AM Aug 19, 2024 | Team Udayavani |

ಬೆಂಗಳೂರು: ಅಂಗವೈಕಲ್ಯವಿದ್ದರೂ ಬದುಕಿನಲ್ಲಿ ನಾವೇನಾದರೂ ಸಾಧನೆ ಮಾಡಬೇಕೆಂದು ಹೊರಡಬೇಕಾದರೆ ಅದಕ್ಕೊಂದು ಗಟ್ಟಿ ಗುಂಡಿಗೆ ಬೇಕು. ಅಪ್ರತಿಮ ಛಲವಿರಬೇಕು. ಅಂಥವರಲ್ಲೊಬ್ಬರು ಪ್ಯಾರಾ ಪವರ್‌ ಲಿಫ್ಟರ್‌ ಸಕೀನಾ ಖಾತುನ್‌. ಬಾಂಗ್ಲಾದೇಶದ ಗಡಿಭಾಗದಲ್ಲಿರುವ ಪ.ಬಂಗಾಲದ ಬಶೀರ್‌ಹಟ್‌ ಎಂಬ ಊರಿನ ಸಕೀನಾ ಅನಂತರ ಕರ್ನಾಟಕಕ್ಕೆ ಬಂದು ಸತತ 2ನೇ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

Advertisement

ಆ. 28ರಿಂದ ಸೆ.8ರ ವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ಗೆ ರಾಜ್ಯದಿಂದ ಆಯ್ಕೆಯಾದ 3 ಮಂದಿ ಕ್ರೀಡಾಪಟುಗಳಲ್ಲಿ ಸಕೀನಾ ಖಾತುನ್‌ ಕೂಡ ಒಬ್ಬರು. ಇದು ಅವರ 2ನೇ ಪ್ಯಾರಾಲಿಂಪಿಕ್ಸ್‌ ಆಗಿರುವುದರಿಂದ ದೇಶಕ್ಕಾಗಿ ಪದಕ ಗೆಲ್ಲುವ ಕನಸು ಹೊಂದಿದ್ದಾರೆ. ಕಳೆದ ಬಾರಿ 50 ಕೆಜಿ ಪವರ್‌ ಲಿಫ್ಟಿಂಗ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಅವರು 5ನೇ ಸ್ಥಾನ ಪಡೆದಿದ್ದಾರೆ. ಈ ಬಾರಿ 45 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಆರಂಭದಲ್ಲಿ ಲಿಫ್ಟರ್‌ ಅಲ್ಲ, ಸ್ವಿಮ್ಮರ್‌!
ಸಕೀನಾ ಕ್ರೀಡಾ ಬದುಕು ಆರಂಭವಾಗಿದ್ದು ಸ್ವಿಮ್ಮಿಂಗ್‌ ಮೂಲಕ. ನಿಶ್ಶಕ್ತವಾಗಿದ್ದ ದೇಹದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಆರಂಭದಲ್ಲಿ ಈಜಿನ ಮೊರೆ ಹೋದ ಸಕೀನಾ ಬಳಿಕ ಅದನ್ನೇ ಕ್ರೀಡೆಯನ್ನಾಗಿಸಿಕೊಂಡಿದ್ದರು. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ ಕೂಡ ಆಗಿದ್ದರು. 2009ರ ವೇಳೆ ಕಾಮನ್‌ವೆಲ್ತ್‌ ಗೇಮ್ಸ್‌ ಆಯ್ಕೆ ಟ್ರಯಲ್ಸ್‌ಗಾಗಿ ಬೆಂಗಳೂರಿನ ಕಂಠೀರವ ಮೈದಾನಕ್ಕೆ ಬಂದಿದ್ದ ಸಕೀನಾ, ಭಾರತದ ಪ್ಯಾರಾಪವರ್‌ ಲಿಫ್ಟರ್‌, ಪ್ಯಾರಾಲಿಂಪಿಯನ್‌ ಫ‌ರ್ಮಾನ್‌ ಬಾಶಾಗೆ ಪರಿಚಯವಾದರು. ಅಲ್ಲಿಂದ ಸ್ವಿಮ್ಮಿಂಗ್‌ನಿಂದ ಪವರ್‌ ಲಿಫ್ಟಿಂಗ್‌ಗೆ ಸಕೀನಾ ಬದುಕು ಬದಲಾಯಿತು.

ಪತಿ ಫ‌ರ್ಮಾನ್‌ ಅವರೇ ಕೋಚ್‌
ಕ್ರೀಡಾ ಸಾಧನೆಯನ್ನು ಅರಸಿ ಕರ್ನಾಟಕಕ್ಕೆ ಬಂದಿದ್ದ ಸಕೀನಾ ಅವರನ್ನು ಸ್ವಿಮ್ಮರ್‌ ಪ್ರಶಾಂತ್‌ ಕರ್ಮಾಕರ್‌ ಮತ್ತು ಕೋಚ್‌ ಒಬ್ಬರು ಫ‌ರ್ಮಾನ್‌ಗೆ ಪರಿಚಯಿಸಿದರು. ಅವರಿಗೆ ಸ್ವಿಮ್ಮಿಂಗ್‌ಗಿಂತಲೂ ಪವರ್‌ ಲಿಫ್ಟಿಂಗ್‌ನಲ್ಲಿ ಹೆಚ್ಚು ಭವಿಷ್ಯವಿದೆ. ಕೋಚಿಂಗ್‌ ನೀಡಿ ಎಂದು ವಿನಂತಿಸಿಕೊಂಡರು. ಇದಕ್ಕೆ ಒಪ್ಪಿದ ಫ‌ರ್ಮಾನ್‌, ಸಂಕಷ್ಟದಲ್ಲಿದ್ದ ಸಕೀನಾಗೆ ರಾಜ್ಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿ ಪವರ್‌ ಲಿಫ್ಟಿಂಗ್‌ ತರಬೇತಿ ನೀಡಿ ಬೆಳೆಸಿದರು. ಹೀಗಾಗಿ 2010ರಿಂದಲೂ ಸಕೀನಾ ರಾಜ್ಯದಲ್ಲೇ ನೆಲೆಸಿದರು. 2015ರಲ್ಲಿ ಫ‌ರ್ಮಾನ್‌-ಸಕೀನಾ ವಿವಾಹವಾಯಿತು. ಅಲ್ಲಿಂದ ಸಕೀನಾ ಪಾಲಿಗೆ ಕೋಚ್‌ ಆಗಿ, ಪತಿಯಾಗಿ ಫ‌ರ್ಮಾನ್‌ ಅವರೇ ಮುನ್ನಡೆಸುತ್ತಿದ್ದಾರೆ.

ಕಾಮನ್‌ವೆಲ್ತ್‌ನಲ್ಲಿ ಕಂಚು, ಏಷ್ಯಾಡ್‌ನ‌ಲ್ಲಿ ಬೆಳ್ಳಿ
ರಾಜ್ಯಕ್ಕೆ ಬಂದ ಮೇಲೆ ಸಕೀನಾ 2014ರಲ್ಲಿ ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ ಮಹಿಳಾ ಪವರ್‌ಲಿಫ್ಟಿಂಗ್‌ನ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಇದು ಪ್ಯಾರಾಲಿಂಪಿಕ್‌ ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ. ಪವರ್‌ ಲಿಫ್ಟಿಂಗ್‌ನಲ್ಲಿ ಲಭಿಸಿದ ಮೊದಲ ಪದಕವೂ ಆಗಿದೆ. ಬಳಿಕ 2018ರ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಸಕೀನಾ, ಬೆಳ್ಳಿ ಗೆದ್ದಿದ್ದರು. ಬಳಿಕ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 6ನೇ ಸ್ಥಾನ ಪಡೆದಿದ್ದು ಇವರ ಅತ್ಯುತ್ತಮ ಸಾಧನೆಯಾಗಿದೆ.

Advertisement

ಒಂದು ವರ್ಷಕ್ಕೆ ಪೋಲಿಯೋ, ಸ್ವಾಧೀನ ಕಳೆದುಕೊಂಡ ಕಾಲುಗಳು
1989ರಲ್ಲಿ ಪ. ಬಂಗಾಲದ ರೈತರ ಕುಟುಂಬದಲ್ಲಿ ಸಕೀನಾ ಜನಿಸಿದರು. 4 ಹೆಣ್ಣು ಮಕ್ಕಳು, 1 ಗಂಡು ಸೇರಿ 5 ಮಕ್ಕಳನ್ನೊಳಗೊಂಡ ದೊಡ್ಡ ಕುಟುಂಬ. ಜನಿಸಿದ 1 ವರ್ಷದಲ್ಲೇ ಸಕೀನಾಗೆ ಪೋಲಿಯೋ ತಗಲಿತು. ಹೀಗಾಗಿ ಎರಡೂ ಕಾಲಿನ ಸ್ವಾಧೀನವಿರಲಿಲ್ಲ. ಒಂದಿಷ್ಟು ಔಷಧೋಪಚಾರ ಮಾಡಿದ ಹೆತ್ತವರು ಬಳಿಕ ನಿರ್ಲಕ್ಷ್ಯ ತೋರಲಾರಂಭಿಸಿದರು. ಆರಂಭದಲ್ಲಿ ನಡೆದಾಡಲೂ ಆಗದ ಪರಿಸ್ಥಿತಿಯಲ್ಲಿದ್ದ ಸಕೀನಾ, 4 ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಂಡ ಬಳಿಕ ಕಷ್ಟಪಟ್ಟು ನಡೆದಾಡಲಾರಂಭಿಸಿದರು. ಅಲ್ಲಿಂದ ಸಕೀನಾ ಅವರ ಕ್ರೀಡಾ ಪಯಣ ಆರಂಭವಾಯಿತು.

– ಎಸ್‌. ಸದಾಶಿವ

Advertisement

Udayavani is now on Telegram. Click here to join our channel and stay updated with the latest news.

Next