Advertisement
ಪ್ಯಾರಿಸ್ ನಗರ ಪ್ಯಾರಾಲಿಂಪಿಕ್ಸ್ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು. ಇದು ಫ್ರಾನ್ಸ್ ನಲ್ಲಿ ನಡೆಯಲಿರುವ 2ನೇ ಪ್ಯಾರಾಲಿಂಪಿಕ್ಸ್. 1992ರಲ್ಲಿ ಟಿಗ್ನೆಸ್ ಹಾಗೂ ಆಲ್ಬರ್ಟ್ ವಿಲ್ಲೆ ನಗರಗಳು ಚಳಿಗಾಲದ ಪ್ಯಾರಾಲಿಂಪಿಕ್ಸ್ ಆತಿಥ್ಯ ವಹಿಸಿದ್ದವು.
Related Articles
Advertisement
ಪ್ಯಾರಾಲಿಂಪಿಕ್ಸ್‌ಗೆ ಈ ಬಾರಿ ಭಾರತ 84 ಕ್ರೀಡಾಪಟುಗಳನ್ನು ಕಳುಹಿಸಿದ್ದು, ಇದೊಂದು ದಾಖಲೆಯಾಗಿದೆ. 2020ರ ಟೋಕಿಯೊ ಪ್ಯಾರಾ ಗೇಮ್ಸ್‌ಗೆ ಭಾರತದ 54 ಆ್ಯತ್ಲೀಟ್‌ಗಳು ಭಾಗವಹಿಸಿ 19 ಪದಕಗಳನ್ನು ಜಯಿಸಿದ್ದರು. 1968ರಲ್ಲಿ ಮೊದಲ ಬಾರಿಗೆ ಭಾರತದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರೂ, 1984ರಿಂದ ಪ್ರತೀ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಿದೆ.
3 ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದಿದ್ದ 16ನೇ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.
ಈ ಬಾರಿ ಕ್ರೀಡಾಳುಗಳ ಸಂಖ್ಯೆ ಹೆಚ್ಚಿರುವುದರಿಂದ 25 ಪದಕ ಗೆಲ್ಲಬಹುದೆಂದು ಅಂದಾಜಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಪದಕ ಗೆದ್ದಿದ್ದ ಸುಮಿತ್ ಅಂಟಿಲ್, ಮರಿಯಪ್ಪನ್ ತಂಗವೇಲು, ಎಲ್.ವೈ. ಸುಹಾನ್, ಕೃಷ್ಣ ನಾಗರ್, ಅವನಿ ಲೇಖರಾ, ಮನೀಷ್ ನರ್ವಾಲ್, ಭವಿನಾ ಪಟೇಲ್, ನಿಶಾದ್ ಕುಮಾರ್ ಈ ಬಾರಿಯೂ ಕಣದಲ್ಲಿದ್ದಾರೆ. ಎರಡೂ ಕೈಗಳಿಲ್ಲದಿದ್ದರೂ ವಿಶ್ವ ರ್‍ಯಾಂಕಿಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಬಿಲ್ಗಾರ್ತಿ ಶೀತಲ್ ದೇವಿ ಭಾರತದ ಅತೀ ದೊಡ್ಡ ಪದಕದ ಭರವಸೆಯಾಗಿದ್ದಾರೆ.
ಆ್ಯತ್ಲೆಟಿಕ್ಸ್‌ನಲ್ಲಿ ಹೆಚ್ಚು ಸ್ಪರ್ಧಿಗಳು
ಭಾರತ ಈ ಬಾರಿ 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ಆ್ಯತ್ಲೆಟಿಕ್ಸ್‌ನಲ್ಲೇ ಅತ್ಯಧಿಕ 38 ಸ್ಪರ್ಧಿಗಳಿದ್ದಾರೆ. ಬಿಲ್ಗಾರಿಕೆ, ಬ್ಯಾಡ್ಮಿಂಟನ್, ಸೈಕ್ಲಿಂಗ್, ಜೂಡೊ, ಕನೋಯಿಂಗ್, ಪವರ್‌ಲಿಫ್ಟಿಂಗ್, ರೋವಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್, ಟೇಕ್ವಾಂಡೊ ಕ್ರೀಡೆಗಳಲ್ಲಿ ಭಾರತೀಯರು ಸ್ಪರ್ಧಿಸಲಿದ್ದಾರೆ.
ಉದ್ಘಾಟನೆ: ಭಾರತದ 100 ಮಂದಿಯ ತಂಡ
ಭಾರತೀಯ ಕಾಲಮಾನದಂತೆ ಬುಧವಾರ ರಾತ್ರಿ 11.30ಕ್ಕೆ ಆರಂಭಗೊಳ್ಳುವ ಪ್ಯಾರಾಲಿಂಪಿಕ್ಸ್ ಉದ್ಘಾಟನ ಸಮಾರಂಭದಲ್ಲಿ ಭಾರತದ ನೂರಕ್ಕೂ ಹೆಚ್ಚು ಮಂದಿಯ ತಂಡ ಪಾಲ್ಗೊಳ್ಳಲಿದೆ. ಇದರಲ್ಲಿ 52 ಮಂದಿ ಕ್ರೀಡಾಪಟುಗಳಿರುತ್ತಾರೆ.
ಶೂಟಿಂಗ್ ತಂಡದ ಎಲ್ಲ 10 ಮಂದಿ ಸೇರಿದಂತೆ, ಗುರುವಾರದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಖ್ಯಾರೂ ಈ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ. ಜಾವೆಲಿನ್ ಎಸೆತಗಾರ ಸುಮಿತ್ ಅಂಟಿಲ್ ಮತ್ತು ಶಾಟ್‌ಪುಟರ್ ಭಾಗ್ಯಶ್ರೀ ಜಾಧವ್ ತ್ರಿವರ್ಣ ಧ್ವಜಧಾರಿಗಳಾಗಿದ್ದಾರೆ. ಪ್ಯಾರಿಸ್‌ನ ಪ್ರಸಿದ್ಧ ಪ್ಲೇಸ್ ಡಿ ಲಾ ಕಾನ್‌ಕಾರ್ಡ್ ಚೌಕದ 19 ಎಕರೆ ವಿಸ್ತಾರದ ಬಯಲು ಜಾಗದಲ್ಲಿ ಉದ್ಘಾಟನೆ ನಡೆಯಲಿದೆ.
ಭಾರತದ ಟಾಪ್-10 ಪದಕ ಭರವಸೆಗಳು
1 ಸುಮಿತ್ ಅಂಟಿಲ್
ಜಾವೆಲಿನ್ ಎಸೆತ, ಎಫ್64 ವಿಭಾಗ.
ಟೋಕಿಯೊ ಚಿನ್ನದ ಪದಕ ಸಾಧನೆಯನ್ನು ಪುನರಾವರ್ತಿಸುವ ಬಹು ದೊಡ್ಡ ನಿರೀಕ್ಷೆ ಮೂಡಿಸಿದ್ದಾರೆ.
2 ಅವನಿ ಲೇಖರಾ
ಶೂಟರ್, ಆರ್2 10 ಮೀ. ಏರ್ ರೈಫಲ್, ಆರ್3 10 ಮೀ. ಏರ್ ರೈಫಲ್ ಮಿಕ್ಸೆಡ್, 50 ಮೀ. ರೈಫಲ್ 3 ಪೊಸಿಶನ್.
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದಿತ್ತ ವನಿತಾ ಆ್ಯತ್ಲೀಟ್ (ಟೋಕಿಯೊ).
3 ಮರಿಯಪ್ಪನ್ ತಂಗವೇಲು
ಹೈಜಂಪ್, ಟಿ63 ವಿಭಾಗ.
ಕಳೆದೆರಡು ಗೇಮ್ಸ್‌ಗಳಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದ ಸಾಧಕ.
4 ಶೀತಲ್ ದೇವಿ
ಆರ್ಚರಿ, ಕಂಪೌಂಡ್ ಓಪನ್, ಮಿಕ್ಸೆಡ್ ಟೀಮ್ ಕಂಪೌಂಡ್ ಓಪನ್.
ಎರಡೂ ಕೈಗಳಿಲ್ಲದ ವಿಶ್ವದ ಏಕೈಕ ಪ್ಯಾರಾ ಆರ್ಚರಿ ಚಾಂಪಿಯನ್.
5 ಕೃಷ್ಣ ನಾಗರ್
ಬ್ಯಾಡ್ಮಿಂಟನ್, ಎಸ್‌ಎಚ್6 ವಿಭಾಗ.
ಟೋಕಿಯೊದಲ್ಲಿ ಗೆದ್ದ ಚಿನ್ನವನ್ನು ಉಳಿಸಿಕೊಳ್ಳುವ ಹಾದಿಯಲ್ಲಿದ್ದಾರೆ.
6 ಸುಹಾಸ್ ಯತಿರಾಜ್
ಬ್ಯಾಡ್ಮಿಂಟನ್, ಎಸ್‌ಎಲ್4 ಸಿಂಗಲ್ಸ್ ಹಾಗೂ ಮಿಶ್ರ ಡಬಲ್ಸ್.
ವಿಶ್ವದ ನಂ.1 ಬ್ಯಾಡ್ಮಿಂಟನ್ ಆಟಗಾರ. ಟೋಕಿಯೊ ಬೆಳ್ಳಿಯನ್ನು ಚಿನ್ನವಾಗಿ ಪರಿವರ್ತಿಸುವ ಹಂಬಲ.
7 ಭವಿನಾಬೆನ್ ಪಟೇಲ್
ಟೇಬಲ್ ಟೆನಿಸ್, ಕ್ಲಾಸ್ 4 ವಿಭಾಗ.
ಟೋಕಿಯೊದಲ್ಲಿ ಬೆಳ್ಳಿ ಜಯಿಸಿದ್ದರು. ಸಹಜವಾಗಿಯೇ ಚಿನ್ನ ಗೆಲ್ಲುವ ಉತ್ಸಾಹದಲ್ಲಿದ್ದಾರೆ.
8 ಯೋಗೇಶ್ ಕಥುನಿಯಾ
ಡಿಸ್ಕಸ್ ಎಸೆತಗಾರ, ಎಫ್56 ವಿಭಾಗ.
ಕಳೆದ ಸಲ ದ್ವಿತೀಯ ಸ್ಥಾನಿಯಾಗಿದ್ದರು. ಈ ಬಾರಿ ಬಂಗಾರದ ಗುರಿ ಹಾಕಿಕೊಂಡಿದ್ದಾರೆ.
9 ತುಳಸೀಮತಿ ಮುರುಗೇಶನ್
ವನಿತಾ ಬ್ಯಾಡ್ಮಿಂಟನ್, ಸಿಂಗಲ್ಸ್ ಎಸ್‌ಯು5, ಮಿಶ್ರ ಡಬಲ್ಸ್ ವಿಭಾಗ.
ಮೊದಲ ಸಲ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
10 ನಿಶಾದ್ ಕುಮಾರ್
ಹೈಜಂಪ್, ಟಿ47 ವಿಭಾಗ
ಟೋಕಿಯೊದಲ್ಲಿ ಬೆಳ್ಳಿ ಗೆದ್ದಿದ್ದು, ಈಗ ಸ್ವರ್ಣದ ಕನಸು ಕಾಣುತ್ತಿದ್ದಾರೆ.