Advertisement
ಪಾಲಿಕೆ ಸದಸ್ಯರನ್ನು ಕತ್ತಲಲ್ಲಿರಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹಲವಾರು ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರಿಗೆ ಸಮರ್ಪಕ ಮಾಹಿತಿ ರವಾನಿಸುವ ಉದ್ದೇಶದಿಂದ ಬಿಬಿಎಂಪಿ ಇ-ಕೌನ್ಸಿಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಪಾಲಿಕೆಯಲ್ಲಿ ತೆಗೆದುಕೊಂಡ ಪ್ರತಿಯೊಂದು ನಿರ್ಣಯದ ಮಾಹಿತಿ ಕಾಲಕಾಲಕ್ಕೆ ಸದಸ್ಯರಿಗೆ ಲಭ್ಯವಾಗಲಿದೆ.
Related Articles
Advertisement
ಕೌನ್ಸಿಲ್, ಸ್ಥಾಯಿ ಸಮಿತಿ ನಿರ್ಣಯಗಳು ಲಭ್ಯ: ಗಲಾಟೆ ನಡೆಯುವಾಗ ವಿಷಯಗಳಿಗೆ ಅನುಮೋದನೆ ನಡೆಯಲಾಗುತ್ತಿದೆ, ಪಾಲಿಕೆಯ 12 ಸ್ಥಾಯಿ ಸಮಿತಿಗಳಲ್ಲಿ ಕೈಗೊಳ್ಳುತ್ತಿರುವ ನಿರ್ಣಯಗಳು ಯಾರಿಗೂ ತಿಳಿಯುತ್ತಲೇ ಇಲ್ಲ ಎಂಬ ವಿಚಾರಗಳು ಹೆಚ್ಚು ಚರ್ಚೆಯಾಗಿವೆ. ಹಾಗಾಗಿ ಪಾಲಿಕೆ ಸಭೆ ಹಾಗೂ ಎಲ್ಲ ಸ್ಥಾಯಿ ಸಮಿತಿಗಳಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯವನ್ನು ಆ್ಯಪ್ ಮೂಲಕ ಪಾಲಿಕೆ ಸದಸ್ಯರಿಗೆ ತಲುಪಿಸಲಾಗುತ್ತದೆ.
ಕಾರ್ಯಸೂಚಿ ಲಭ್ಯ: ಪಾಲಿಕೆಯಿಂದ ಕರೆಯಲಾಗುವ ವಿಷಯಾಧಾರಿತ ಸಭೆಗಳಲ್ಲಿ ಚರ್ಚೆಗೆ ತೆಗೆದುಕೊಂಡಿರುವ ಕಾರ್ಯಸೂಚಿಯ (ಅಜೆಂಡಾ) ಪ್ರತಿಯನ್ನು ಪಿಡಿಎಫ್ ಮೂಲಕ ಎಲ್ಲ ಪಾಲಿಕೆ ಸದಸ್ಯರಿಗೆ ಎರಡು ದಿನಗಳ ಮೊದಲೇ ಕಳುಹಿಸಲಾಗುತ್ತದೆ. ಕೌನ್ಸಿಲ್ ವಿಭಾಗದ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಆ್ಯಪ್‌ನಲ್ಲಿ ಹಂಚಿಕೊಂಡಾಗ ಸದಸ್ಯರಿಗೆ ಅದರ ನೋಟಿಫಿಕೇಷನ್ ಬರುವಂತೆ ಸೆಟ್ಟಿಂಗ್ಸ್ ಮಾಡಲಾಗಿದೆ ಎಂದು ಕೌನ್ಸಿಲ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕೀ ಕಾರ್ಯದರ್ಶಿ ಕೈಯಲ್ಲಿ: ಪಾಲಿಕೆಯ ಮಾಹಿತಿ ತಂತ್ರಜ್ಞಾನ ವಿಭಾಗದಿಂದ ಇ-ಕೌನ್ಸಿಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಆ್ಯಪ್‌ನ ಸಂಪೂರ್ಣ ಮೇಲ್ವಿಚಾರಣೆಯ ಜವಾಬ್ದಾರಿ ಕೌನ್ಸಿಲ್ ಕಾರ್ಯದರ್ಶಿಗೆ ನೀಡಲಾಗಿದೆ. ಯಾವುದೇ ಮಾಹಿತಿ, ತಿಳುವಳಿಕೆ ಪತ್ರ, ಸಭೆಯ ಆಹ್ವಾನ ಸೇರಿದಂತೆ ಯಾವುದೇ ಮಾಹಿತಿ ಹಂಚಿಕೊಳ್ಳಲು ಅವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಪಾಲಿಕೆಯ ಕೌನ್ಸಿಲ್ ಹಾಗೂ ಸ್ಥಾಯಿ ಸಮಿತಿಗಳಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಮಾಹಿತಿಯಿಲ್ಲ ಎಂದು ಪಾಲಿಕೆ ಸದಸ್ಯರು ದೂರುತ್ತಾರೆ. ಆ ಹಿನ್ನೆಲೆಯಲ್ಲಿ ಪಾರದರ್ಶಕ ಹಾಗೂ ಕಾಗದ ರಹಿತ ಆಡಳಿತ ಪ್ರೋತ್ಸಾಹಿಸುವ ಉದ್ದೇಶದಿಂದ ಪಾಲಿಕೆ ಸದಸ್ಯರಿಗೆ ಈಗಾಗಲೇ ಐಪ್ಯಾಡ್ ನೀಡಲಾಗಿದ್ದು, ಪಾಲಿಕೆ ಸದಸ್ಯರಿಗಾಗಿ “ಬಿಬಿಎಂಪಿ ಇ-ಕೌನ್ಸಿಲ್’ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. -ಆರ್.ಸಂಪತ್‌ರಾಜ್, ಮೇಯರ್ * ವೆಂ.ಸುನೀಲ್ ಕುಮಾರ್