Advertisement
ಪರಿಸರ ಸಂರಕ್ಷಣೆ, ಪಾರದರ್ಶಕತೆ ಹಾಗೂ ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಿನ್ನೆಲೆಯಲ್ಲಿ ಸರಕಾರಿ ಇಲಾಖೆಗಳನ್ನು ಕಾಗದ ರಹಿತ ಇಲಾಖೆಯನ್ನಾಗಿಸಲು ರಾಜ್ಯ ಸರಕಾರ ವರ್ಷದ ಹಿಂದೆಯೇ ನಿರ್ದೇಶಿಸಿತ್ತು. ಕೆಲವು ಇಲಾಖೆಗಳಲ್ಲಿ ಮಾತ್ರ ಭಾಗಶಃ ಅನುಷ್ಠಾನವಾಗಿದ್ದರೆ, ಕೆಲವು ಕಡೆ ನಿಧಾನವಾಗಿತ್ತು. ಇದೀಗ ಕೊನೆಯದಾಗಿ ಸೂಚನೆ ನೀಡಿರುವ ಸರಕಾರ ಜ. 1ರಿಂದ ಜಿಲ್ಲಾ ಮಟ್ಟದ ಸರಕಾರಿ ಕಚೇರಿಯನ್ನು ಕಾಗದರಹಿತ ಮಾಡಲೇಬೇಕು ಎಂದಿದೆ.
ಬಾಕಿಯಾಗಿರುವ ಎಲ್ಲ ಸರಕಾರಿ ಇಲಾಖೆಗಳಲ್ಲಿ ಇ-ಕಚೇರಿ ವ್ಯವಸ್ಥೆ ಅನುಷ್ಠಾನಿಸಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಇ-ಕಚೇರಿ ಅನುಷ್ಠಾನ ಸಮಿತಿ ನಿರ್ದೇಶನ ನೀಡಿದೆ. ಆದರೆ, ಇಲಾಖೆಯಲ್ಲಿ ಸಿಬಂದಿ ಕೊರತೆ, ಕಾರ್ಯದ ಒತ್ತಡದ ನೆಪದಲ್ಲಿ ಅನುಷ್ಠಾನ ಆಗಿಲ್ಲ. ಈ ಮಧ್ಯೆ ಈಗಾಗಲೇ ಅನುಷ್ಠಾನವಾದ ಜಿಲ್ಲಾಧಿಕಾರಿ ಕಚೇರಿ/ಜಿ.ಪಂ. ಕಚೇರಿಯಲ್ಲಿ ಕಾಗದ ರಹಿತವಾಗಿ ಇಲಾಖಾ ವ್ಯವಹಾರ ನಡೆಯುತ್ತಿದ್ದರೂ ಉನ್ನತಾಧಿಕಾರಿಗಳಿಗೆ ಹಾಗೂ ಇಲಾಖೆಯ ಸಚಿವರಿಗೆ, ಇತರ ಅಧಿಕಾರಿಗಳಿಗೆ ಕಾಗದ ರೂಪದಲ್ಲಿಯೇ ಕಡತ ನೀಡುವ ಪರಿಸ್ಥಿತಿ ಇರುವುದರಿಂದ ಅನುಷ್ಠಾನ ಪೂರ್ಣ ಮಟ್ಟದಲ್ಲಿ ಆಗಲೇ ಇಲ್ಲ. ಇದೀಗ ಪ್ರತೀ ಜಿಲ್ಲೆಯ ತರಬೇತಿ ಕೇಂದ್ರಗಳ ಪ್ರಾಂಶುಪಾಲರ ಸಹಕಾರದೊಂದಿಗೆ ವಾರಕ್ಕೆ ಕನಿಷ್ಠ 1 ದಿನದ ಅವಧಿಯಲ್ಲಿ ಎಲ್ಲ ಅಧಿಕಾರಿ-ಸಿಬಂದಿಗೆ ತರಬೇತಿ ನೀಡಲಾಗುತ್ತಿದೆ.
Related Articles
ಎಲ್ಲ ಇಲಾಖೆಗಳಲ್ಲಿ ಪೂರ್ಣ ಮಟ್ಟದಲ್ಲಿ ಕಾಗದ ರಹಿತ ವ್ಯವಸ್ಥೆ ಜಾರಿಗೆ ಬಂದರೆ ಸಾರ್ವಜನಿಕರು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಕೊಟ್ಟಿರುವ ಅರ್ಜಿ ಯಾವ ಹಂತದಲ್ಲಿದೆ ಎಂದು ಮೊಬೈಲ್/ಆನ್‌ಲೈನ್ ಮೂಲಕವೇ ಪರಿಶೀಲಿಸಬಹುದು. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ 1695 ಹಾಗೂ ಜಿ.ಪಂ.ನಲ್ಲಿ 759 ಅರ್ಜಿಗಳು ಇ-ಕಚೇರಿ ಮೂಲಕ ಸ್ವೀಕೃತಿಯಾಗಿವೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 1,895 ಅರ್ಜಿ ಹಾಗೂ ಜಿ.ಪಂ.ನಲ್ಲಿ 412 ಅರ್ಜಿಗಳು ಸ್ವೀಕೃತಗೊಂಡಿವೆ. ಇದು ಇತ್ತೀಚಿನ 15 ದಿನಗಳ ಲೆಕ್ಕಾಚಾರ.
Advertisement
ಜಿಲ್ಲಾಧಿಕಾರಿ ಕಚೇರಿ, ಜಿ.ಪಂ. ಹಾಗೂ ಇತರ ಇಲಾಖೆಗಳಲ್ಲಿ ಈಗಾಗಲೇ ಪೇಪರ್‌ಲೆಸ್ ಅನುಷ್ಠಾನ ಜಾರಿಯಲ್ಲಿದೆ. ಜನವರಿ 1ರಿಂದ ಎಲ್ಲ ಜಿಲ್ಲಾ ಮಟ್ಟದ ಸರಕಾರಿ ಕಚೇರಿಯಲ್ಲಿ ಪೂರ್ಣಮಟ್ಟದಲ್ಲಿ ಅನುಷ್ಠಾನಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಅಧಿಕಾರಿ- ಸಿಬಂದಿ ತರಬೇತಿ ಕೂಡ ಪಡೆಯುತ್ತಿದ್ದಾರೆ.– ಸಿಂಧೂ ಬಿ. ರೂಪೇಶ್,
ಜಿ. ಜಗದೀಶ್
ದ.ಕ., ಉಡುಪಿ ಜಿಲ್ಲಾಧಿಕಾರಿಗಳು -ದಿನೇಶ್ ಇರಾ