ಓದಿ ಮೂಲೆಗೆ ಎಸೆದ ವರ್ತಮಾನ ಪತ್ರಿಕೆಗಳನ್ನು ಮಾತ್ರ ಬಳಸಿ ಸೃಷ್ಟಿಸಿರುವ ವನ್ಯಜೀವಿಗಳ ಅದ್ಭುತ ಕಲಾಜಗತ್ತು ಇಲ್ಲಿದೆ. ಸೊಂಡಿಲು ಮಡಚಿ ಮಲಗಿರುವ ಆನೆ, ಗಂಭೀರವಾಗಿ ತಲೆಯೆತ್ತಿ ನಡೆಯುವ ಘೇಂಡಾಮೃಗ, ಗಗನದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿರುವ ಗರುಡ, ಕೆಂಪು ಮೂತಿಯ ಜಿಂಪಾಂಜಿಯ ಸಂಸಾರ… ಹೀಗೆ ಮೂವತ್ತಕ್ಕಿಂತ ಹೆಚ್ಚು ಜೀವಿಗಳು ಕೇವಲ ವೃತ್ತ ಪತ್ರಿಕೆಗಳಿಂದಲೇ ಹುಟ್ಟು ಪಡೆದಿವೆ.
ಉಪಾಯ ಹುಟ್ಟಿದ್ದು ಹೇಗೆ?: ಈ ವಿಶಿಷ್ಟ ಕಲೆಯನ್ನು ರೂಪಿಸಿದ ಯುವ ಕಲಾವಿದೆ ಚೀ ಹಿಟೋಟ್ಸುಯಾಮಾ. 1982ರಲ್ಲಿ ಟೋಕಿಯೋದ ಶಿಜೋಕಾ ಎಂಬಲ್ಲಿ ಜನಿಸಿದ ಅವರು ಡಿಸೈನಿಂಗ್ ಕಲೆಯಲ್ಲಿ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಪದವಿ ಪಡೆದಿದ್ದಾರೆ. ತಾತನ ಕಾಲದ ಕಾಗದದ ಸ್ಟ್ರಿಪ್ ತಯಾರಿಕೆಯ ಕಾರ್ಖಾನೆಯನ್ನು ಫುಜಿ ನಗರದಲ್ಲಿ ಆಕೆ ನಡೆಸಿಕೊಂಡಿದ್ದಳು.
2007ರಲ್ಲಿ ಸ್ವಯಂಸೇವಾ ಸಂಸ್ಥೆಯೊಂದರ ಆಹ್ವಾನದ ಮೇರೆಗೆ ಚೀ, ಝಾಂಬಿಯಾದ ರಾಷ್ಟ್ರೀಯ ಉದ್ಯಾನಕ್ಕೆ ಹೋಗಿದ್ದಳು. ಅಲ್ಲಿ ಗುಂಡೇಟಿನಿಂದ ನರಳುತ್ತಿದ್ದರೂ ರಾಜ ಗಾಂಭೀರ್ಯದಿಂದ ತಲೆಯೆತ್ತಿ ನಡೆಯುತ್ತಿದ್ದ ಒಂದು ಖಡ್ಗಮೃಗವನ್ನು ನೋಡಿದಾಗ ಅವಳಿಗೆ ಕರುಳು ಕಿವುಚಿದಂತಾಯಿತು. ಕಳ್ಳ ಬೇಟೆಗಾರರ ಮನಸ್ಸಿನಲ್ಲಿಯೂ ಪ್ರಾಣಿದಯೆ ಉಕ್ಕಲಿ ಎಂಬ ಉದ್ದೇಶದಿಂದ ನಿರುಪಯುಕ್ತ ಪತ್ರಿಕೆಗಳಿಂದ ವನ್ಯಜೀವಿಗಳ ಜೀವಂತ ಕಲಾಕೃತಿಗಳನ್ನು ಸೃಷ್ಟಿಸುವ ಹೊಸ ಯೋಚನೆ ಹುಟ್ಟಿದ್ದೇ ಅಲ್ಲಿ.
ಪ್ರತಿಭೆಯ ಜೊತೆಗೆ ಶ್ರಮವೂ ಇದೆ: ವೃತ್ತ ಪತ್ರಿಕೆಗಳ ಬಣ್ಣ ಬಣ್ಣದ ಚಿತ್ರಗಳಿರುವ ಪುಟಗಳನ್ನು ನೀರಿನಲ್ಲಿ ಅದ್ದಿ ಹಿಂಡಲಾಗುತ್ತದೆ. ಬಳಿಕ ಬೇಕಾದ ಪ್ರಾಣಿಯ ಚಿತ್ರವನ್ನು ಮುಂದಿಟ್ಟುಕೊಂಡು ಪತ್ರಿಕೆಯನ್ನು ಅದೇ ಆಕೃತಿಯಲ್ಲಿ ಒತ್ತಿ, ಮಡಚಿ, ತದ್ರೂಪವನ್ನು ಮೂಡಿಸುವುದು ಕೇವಲ ಕೈಗಳಿಂದ! ಯಾವುದೇ ಯಂತ್ರದ ಬಳಕೆಯಿಲ್ಲ.
ಹಲವು ತಾಸುಗಳ ಕೆಲಸದಿಂದ ಪ್ರಾಣಿಯ ಪ್ರತಿಕೃತಿ ಸೃಷ್ಟಿಯಾಗುತ್ತದೆ. ಅವುಗಳ ಮೈಯ ಉಬ್ಬು ತಗ್ಗುಗಳು, ಬಾಹ್ಯ ರೇಖೆಗಳು, ವಕ್ರಾಕೃತಿಗಳು ಹಾಗೂ ಕೂದಲುಗಳನ್ನು ನೈಜಗೊಳಿಸಲು ದಾರದಿಂದ ಒತ್ತಲಾಗುತ್ತದೆ. ಈ ಕೆಲಸ ಮಾಡಲು ಚೀಗೆ ಕಲಾವಿದರ ತಂಡವೇ ಜೊತೆಗಿದೆ. ಇವರ ಪ್ರಯತ್ನದ ಹಿಂದಿನ ಉದ್ದೇಶಗಳು ಎರಡು ಪತ್ರಿಕೆಯ ಮರುಬಳಕೆ ಮತ್ತು ವನ್ಯಜೀವಿಗಳ ಸಂರಕ್ಷಣೆ.
ಒಂದು ಸಾವಿರ ಪೌಂಡುಗಳು!: ಅಳಿಯುತ್ತಿರುವ ಜೀವವರ್ಗವನ್ನೇ ಗುರಿಯಾಗಿರಿಸಿಕೊಂಡು ಆಮೆ, ರೈನೋಸಾರ್, ಸಮುದ್ರ ಸಿಂಹ, ನಾಯಿ, ಚಿರತೆ, ನರಿ, ಹಿಮದ ಕಪಿ, ಇಗ್ವಾನ ಸಸ್ಯವಾಸಿ ಉಡ ಇತ್ಯಾದಿ ಮೂವತ್ತಕ್ಕಿಂತ ಅಧಿಕ ಕೃತಿಗಳನ್ನು ಚೀ ಹೀಗೆ ರೂಪಿಸಿದ್ದಾರೆ. ಜೀವಿಗಳ ಮುಖ ಕೆಂಪಾಗಿದ್ದರೆ ಅದೇ ಬಣ್ಣ ಬರುವಂತಹ ಚಿತ್ರಗಳು ಅಲ್ಲಿಗೆ ಹೊಂದುವಂತೆ ಮಾಡುತ್ತಾರೆ.
ಮುಟ್ಸುಕೋಶಿಯಲ್ಲಿ ಕಲಾ ಗ್ಯಾಲರಿ, ಫುನಾಬಾಸಿ ನಗರದಲ್ಲಿ ಮಕ್ಕಳ ಮ್ಯೂಸಿಯಂಗಳನ್ನೂ ಮಾಡಿರುವ ಚೀ ಸೃಜನಶೀಲ ನಿರ್ದೇಶಕ ಟೊಮಿಜಿ ತಮಾಯಿ ಜೊತೆಗೆ ಸ್ವಂತ ಸ್ಟುಡಿಯೋ ಸ್ಥಾಪಿಸಿದ್ದಾರೆ. ಅವರ ಈ ವೃತ್ತ ಪತ್ರಿಕೆಯ ಕಲಾಕೃತಿಗಳು ಜಪಾನಿನ ಹಲವೆಡೆ ಪ್ರದರ್ಶನವಾದ ಬಳಿಕ ಸಾಗರೋತ್ತರ ದೇಶಗಳಂದ ಪ್ರದರ್ಶನಕ್ಕೆ ಆಹ್ವಾನ ಬಂದಿತು. ದಕ್ಷಿಣ ಕ್ಯಾಲಿಫೋರ್ನಿಯಾದ ಲಂಕೆಸ್ಟರ್‌ನಲ್ಲಿ 2017ರಲ್ಲಿ ಪ್ರದರ್ಶನ ನಡೆದಾಗ ಸ್ಥಳೀಯ ವನ್ಯ ಜೀವಿಗಳ ಆಕೃತಿಗಳನ್ನು ಹೀಗೆಯೇ ರಚಿಸಿ ಕೊಡಲು ಬೇಡಿಕೆ ಲಭಿಸಿತು. ಇದಕ್ಕೆ ಲಾಸ್ ಏಂಜಲೀಸ್ ಟೈಮ್ಸ್ ಪತ್ರಿಕೆ ಒಂದು ಸಾವಿರ ಪೌಂಡುಗಳ ಅನುದಾನ ನೀಡಿತು.
* ಪ. ರಾಮಕೃಷ್ಣ ಶಾಸ್ತ್ರಿ