ಹೊಸದಿಲ್ಲಿ: ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಜತೆಗೆ ಎಲ್ಲ ರಾಷ್ಟ್ರಗಳಿಗೂ ತಂಡಗಳ ಆಯ್ಕೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಕಾಲವೂ ಸನ್ನಿಹಿತವಾಗಿದೆ.
ನೆಚ್ಚಿನ ತಂಡಗಳಲ್ಲಿ ಒಂದಾದ ಭಾರತದ ಮುಂದೆ ಆಯ್ಕೆಯ ವಿಪುಲ ಅವಕಾಶಗಳಿರುವುದರಿಂದ ಇದು ಜಟಿಲಗೊಳ್ಳುವ ಸಾಧ್ಯತೆ ಇದ್ದೇ ಇದೆ. ಮೊದಲು ಸಂಭಾವ್ಯ ಆಟಗಾರರ ಯಾದಿ ಪ್ರಕಟಗೊಳ್ಳಬೇಕಿದೆ. ಇದಕ್ಕೂ ಮೊದಲೇ ರಿಷಬ್ ಪಂತ್, ಅಜಿಂಕ್ಯ ರಹಾನೆ ಮತ್ತು ವಿಜಯ್ ಶಂಕರ್ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮುನ್ಸೂಚನೆಯೊಂದು ದೊರೆತಿದೆ. ಇದನ್ನು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅವರೇ ತಿಳಿಸಿದ್ದಾರೆ.
“ರಿಷಬ್ ಪಂತ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಇದರಲ್ಲಿ ಅನುಮಾನವೇ ಇಲ್ಲ. ಕಿವೀಸ್ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್ ಮತ್ತು ಆಸೀಸ್ ವಿರುದ್ಧವೂ ಗುಡುಗಿದ್ದಾರೆ. ತಂಡದ ಆಯ್ಕೆ ವೇಳೆ ಇವರ ಪ್ರದರ್ಶನವನ್ನೂ ಗಮನಿಸಲಿದ್ದೇವೆ. ಇವರೂ ಆಯ್ಕೆ ರೇಸ್‌ನಲ್ಲಿದ್ದಾರೆ. ಅಜಿಂಕ್ಯ ರಹಾನೆ ಕೂಡ ಸ್ಪರ್ಧೆಯಲ್ಲಿದ್ದಾರೆ. ಕೆ.ಎಲ್. ರಾಹುಲ್ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನಲೆಯಲ್ಲಿ ರಹಾನೆ ಹೆಸರು ಚಾಲ್ತಿಗೆ ಬಂದಿದೆ. ರಹಾನೆ ಇತ್ತೀಚೆಗೆ ದೇಶಿ ಕ್ರಿಕೆಟ್ ಕೂಟದಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ’ ಎಂದು ಪ್ರಸಾದ್ ಹೇಳಿದರು.
ಶಂಕರ್ ಪ್ರತಿಭಾನ್ವಿತ ಆಟಗಾರ
“ವಿಜಯ್ ಶಂಕರ್ ಭರವಸೆಯ ಆಟಗಾರ. ಸಿಕ್ಕಿದ ಅವಕಾಶದಲ್ಲಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರು ಯಾವ ಕ್ರಮಾಂಕದಲ್ಲಿ ಉಪಯೋಗವಾಗಲಿದ್ದಾರೆ ಎನ್ನುವುದನ್ನು ಯೋಚಿಸುತ್ತಿದ್ದೇವೆ’ ಎಂದು ಪ್ರಸಾದ್ ಹೇಳಿದ್ದಾರೆ.