ಚೆನ್ನೈ/ಹೊಸದಿಲ್ಲಿ: ಎಐಎಡಿಎಂಕೆಯ ಎರಡು ಬಣಗಳು ಒಂದಾಗುವ ನಿಟ್ಟಿನಲ್ಲಿ ಎರಡು ದಿನಗಳಿಂದ ಮಾತುಕತೆ ನಡೆಸಿ ಹಾಲಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಮತ್ತು ಉಪಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ.ದಿನಕರನ್ ಅವರನ್ನು ಹೊರಹಾಕುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ.
ಆದರೆ ಎರಡೂ ಬಣಗಳು ವಿಲೀನವಾದ ಬಳಿಕ ಹಾಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಾರೆಯೋ ಎಂಬ ಬಗ್ಗೆ ಸಂದೇಹಗಳು ಮೂಡಿವೆ. ಏಕೆಂದರೆ ಮಾಜಿ ಸಿಎಂ ಪನ್ನೀರ್‌ಸೆಲ್ವಂ ಕೂಡ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಹಂಬಲಿಕೆಧಿಯಲ್ಲಿದ್ದಾರೆ. ಹಾಲಿ ಸಿಎಂಗೆ ಸ್ಥಾನ ಉಳಿಸಿಕೊಳ್ಳುವುದಕ್ಕೆ ಹೋರಾಟ ನಡೆಸುತ್ತಿದ್ದರೆ, ಪನ್ನೀರ್‌ಸೆಲ್ವಂಗೆ ಮತ್ತೆ ಗದ್ದುಗೆ ಪಡೆಯುವ ಪ್ರಯತ್ನದಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.
ಹಿಂದಕ್ಕೆ ಸರಿದ ದಿನಕರನ್: ಈ ಎಲ್ಲ ಬೆಳವಣಿಗೆಗಳ ನಡುವೆ ಟಿ.ಟಿ.ವಿ.ದಿನಕರನ್ ಅವರು ಎಲ್ಲ ರೀತಿಯ ಅಧಿಕಾರ ಸೂತ್ರದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ. ಚೆನ್ನೈನಲ್ಲಿ ಮಾತನಾಡಿದ ಅವರು, “ಬಂಡಾಯ ಬಣವನ್ನು ಪಕ್ಷಕ್ಕೆ ಕರೆತಂದಿರುವ ಬಗ್ಗೆ ನನ್ನದೇನೂ ಆಕ್ಷೇಪವಿಲ್ಲ. ನನ್ನನ್ನು ಪಕ್ಷದಿಂದ ಉಚ್ಚಾಟಿಸುವುದು ನಿರ್ಧಾರ ಎಂದಿದ್ದಾರೆ. ಶಾಸಕರ ಸಭೆ ನಡೆಸಿದ್ದು ಶಕ್ತಿ ಪ್ರದರ್ಶನಕ್ಕೆ ಅಲ್ಲ ಎಂದಿದ್ದಾರೆ.
“ನನ್ನ ಬಗ್ಗೆ ಅವರಿಗೆ ಅತೃಪ್ತಿ ಇರಬಹುದು. ಅದೇ ಕಾರಣದಿಂದಲೇ ನನ್ನನ್ನು ಪಕ್ಷದಿಂದ ಉಚ್ಛಾಟಿಧಿಸುತ್ತಿದ್ದಾರೆ. ಆದರೆ ಇಂಥ ದಿಢೀರ್ ನಿರ್ಧಾರಗಳು ಅವರ ಆತಂಕವನ್ನು ಬಿಂಬಿಸುತ್ತವೆ,’ ಎಂದಿದ್ದಾರೆ. “ಪಕ್ಷದ ಮುಖಂಡರು ತಮ್ಮ ಈ ನಿರ್ಧಾರದ ಬಗ್ಗೆ ಮೊದಲೇ ತಿಳಿಸಿದ್ದರೆ ನಾನಾಗೇ ಪಕ್ಷದಿಂದ ದೂರ ಉಳಿಯುತ್ತಿದ್ದ. ಅದಕ್ಕಾಗಿ ಸಭೆ ನಡೆಸಿ ನಿರ್ಣಯ ಕೈಗೊಳ್ಳುವ ಅಗತ್ಯವಿರಲಿಲ್ಲ,’ ಎಂದಿದ್ದಾರೆ. ಜತೆಗೆ ದೆಹಲಿ ಪೊಲೀಸರು ತಮಗೆ ನೀಡಿದ ಲುಕ್‌ಔಟ್ ನೋಟಿಸ್ ನೀಡಿದ್ದನ್ನು ಪ್ರಶ್ನಿಸಿದ್ದಾರೆ.
ತಮಿಳುನಾಡು ಸರಕಾರದ ಸಚಿವರು ಶಶಿಕಲಾ ವಿರುದ್ಧ ಬಂಡೆದ್ದಿರುವುದು ಧರ್ಮ ಯುದ್ಧದಲ್ಲಿನ ಜಯವೇ ಆಗಿದೆ. ಅಮ್ಮ, ಎಂಜಿಆರ್ ಹಾಕಿದ ದಾರಿಯಲ್ಲಿ ಮುಂದುವರಿಯುವೆವು.
– ಓ.ಪನ್ನೀರ್‌ಸೆಲ್ವಂ, ಮಾಜಿ ಸಿಎಂ