Advertisement

ಪ್ರಧಾನಿ ಬಳಿ ಶಶಿಕಲಾ ಪರ “ತಂಬಿ’ಬ್ಯಾಟಿಂಗ್, ಗವರ್ನರ್ ಚಿತ್ತ ಯಾರತ್ತ

05:28 PM Feb 09, 2017 | Sharanya Alva |

ಚೆನ್ನೈ:ರಾಜಕೀಯ ಜಟಾಪಟಿ ನಡೆಯುತ್ತಿದ್ದರೆ ಕಳೆದ ಮೂರು ದಿನಗಳಿಂದ ಮುಂಬೈನಲ್ಲಿದ್ದ  ತಮಿಳುನಾಡಿನ ಹೆಚ್ಚುವರಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಗುರುವಾರ ಸಂಜೆ ಚೆನ್ನೈಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಶಿಷ್ಟಾಚಾರದಂತೆ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರು ರಾಜ್ಯಪಾಲರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ಬರಮಾಡಿಕೊಂಡಿದ್ದಾರೆ.

Advertisement

ಮೊದಲಿಗೆ ಪನ್ನೀರ್ ಸೆಲ್ವಂ ಭೇಟಿಗೆ ರಾಜ್ಯಪಾಲರು ಅವಕಾಶ ನೀಡಿದ್ದರೆ, ಸಂಜೆ 7.30ಕ್ಕೆ ಶಶಿಕಲಾ ನಟರಾಜನ್ ಅವರಿಗೆ ಸಮಯ ನಿಗದಿಪಡಿಸಿದ್ದಾರೆ. ರೆಸಾರ್ಟ್ ರಾಜಕೀಯ ಗರಿಗೆದರಿರುವ ನಡುವೆಯೇ ಎಐಎಡಿಎಂಕೆಯ 19 ಶಾಸಕರು ನಾಪತ್ತೆಯಾಗಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಗುರುವಾರ ಬೆಳಗ್ಗೆ ಜಯ ನಿವಾಸ ಸ್ಮಾರಕ ಮಾಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದರು. ಅಲ್ಲದೆ ಶಶಿಕಲಾಗೆ ಆಪ್ತರಾಗಿದ್ದ ನಗರ ಪೊಲೀಸ್ ಆಯುಕ್ತರಿಗೆ ಗೇಟ್ ಪಾಸ್ ಕೊಟ್ಟಿದ್ದರು. ಅದರ ಬೆನ್ನಲ್ಲೇ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಪನ್ನೀರ್ ಸೆಲ್ವಂ ಆಪ್ತ ಓಂ ಶಕ್ತಿಸಾಗರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಉಚ್ಚಾಟಿಸಿದ್ದಾರೆ.

ರಾಜ್ಯಪಾಲರಿಗೆ ಶಶಿಕಲಾ ವಿರುದ್ಧ ಸೆಲ್ವಂ ದೂರು!
ಶಶಿಕಲಾ ನಟರಾಜನ್ ಅವರು ಎಐಎಡಿಎಂಕೆ ಹಾಗೂ ಸರ್ಕಾರವನ್ನು ಕಬಳಿಸುವ ಸಂಚು ರೂಪಿಸಿದ್ದಾರೆ. ಶಶಿಕಲಾ ಒತ್ತಡಕ್ಕೆ ಮಣಿದು ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಗವರ್ನರ್ ಗೆ ಪನ್ನೀರ್ ಸೆಲ್ವಂ ದೂರು ನೀಡಿದ್ದಾರೆ. ಶಶಿಕಲಾ ನಟರಾಜನ್ ಕುದುರೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸುವ ಮೂಲಕ ರಾಜ್ಯಪಾಲರಿಗೆ ಸೆಲ್ವಂ ಅವರು ಪೂರ್ಣ ವಿವರ ನೀಡಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ.

ಪ್ರಧಾನಿ ಭೇಟಿಯಾದ ಎಐಎಡಿಎಂಕೆ ಸಂಸದರ ನಿಯೋಗ:
ಎಐಎಡಿಎಂಕೆ ಪಕ್ಷದ ಹಿರಿಯ ಮುಖಂಡ, ಸಂಸದ ತಂಬಿದೊರೈ ನೇತೃತ್ವದಲ್ಲಿ ಪಕ್ಷದ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಬೆಳವಣಿಗೆ ಕೂಡಾ ಇಂದು ನಡೆದಿದೆ. ತಮಿಳುನಾಡಿನ ರಾಜಕೀಯ ಹೈಡ್ರಾಮಾದಲ್ಲಿ ಮಧ್ಯಪ್ರವೇಶಿಸಿ ಎಂದು ಪ್ರಧಾನಿ ಮೋದಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಶಶಿಕಲಾ ತಮಿಳುನಾಡಿನ ಮುಖ್ಯಮಂತ್ರಿ ಆಗಬೇಕೆಂದು ತಂಬಿದೊರೈ ಅಭಿಪ್ರಾಯವ್ಯಕ್ತಪಡಿಸಿದ್ದಾರೆಂದು ವರದಿ ವಿವರಿಸಿದೆ!

Advertisement

ಜಯಾ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಯಬೇಕು: ಪಾಂಡಿಯನ್ ಮನವಿ
ದಿ.ಜಯಲಲಿತಾ ಅವರ ನಿಗೂಢ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ರಾಜ್ಯಪಾಲರಿಗೆ ಮಾಜಿ ಸ್ಪೀಕರ್ ಪಿಎಚ್ ಪಾಂಡಿಯನ್ ಮನವಿ ಸಲ್ಲಿಸಿದ್ದಾರೆ.

ರಾಜ್ಯಪಾಲರ ಜೊತೆ ಪನ್ನೀರ್ ಸೆಲ್ವಂ 10ನಿಮಿಷದ ಮಾತುಕತೆ:
ರಾಜ್ಯಪಾಲ ವಿದ್ಯಾಸಾಗರ್ ಜೊತೆ ಪನ್ನೀರ್ ಸೆಲ್ವಂ ಅವರ ಭೇಟಿ ಅಂತ್ಯವಾಗಿತ್ತು. ಸುಮಾರು 10 ನಿಮಿಷಗಳ ಕಾಲ ರಾಜ್ಯಪಾಲರ ಜೊತೆ ಚರ್ಚೆ ನಡೆಸಿದ್ದದರು. ರಾಜ್ಯಪಾಲರ ಭೇಟಿ ಬಳಿಕ ಸೆಲ್ವಂ ಮನೆಯತ್ತ ತೆರಳಿದ್ದಾರೆ. ಚೆನ್ನೈನ ನಿವಾಸದಲ್ಲಿ ಪನ್ನೀರ್ ಸೆಲ್ವಂ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next