ಜೈಪುರ: ಭಾರತ ತಂಡದ ಪರ ಎರಡು ಟೆಸ್ಟ್ ಮತ್ತು ಏಕೈಕ ಏಕದಿನ ಪಂದ್ಯವಾಡಿದ್ದ ವೇಗಿ ಪಂಕಜ್ ಸಿಂಗ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
36 ವರ್ಷದ ರಾಜಸ್ಥಾನದ ವೇಗಿ ಪಂಕಜ್ ಸಿಂಗ್ ರಾಜಸ್ಥಾನ ಕ್ರಿಕೆಟ್ ಮಂಡಳಿಗೆ ಪತ್ರ ಬರೆದು ತನ್ನ ವಿದಾಯದ ಬಗ್ಗೆ ಮಾಹಿತಿ ನೀಡಿದ್ದಾರೆ.
2010ರಲ್ಲಿ ಸುರೇಶ್ ರೈನಾ ನಾಯಕತ್ವದಲ್ಲಿ ಪಂಕಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಶ್ರೀಲಂಕಾ ವಿರುದ್ಧ ಹರಾರೆಯಲ್ಲಿ ಏಕೈಕ ಏಕದಿನ ಪಂದ್ಯವಾಡಿದ್ದರು. 2014ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿಯಲ್ಲಿ ಈ ಬಲಗೈ ವೇಗಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
ಇದನ್ನೂ ಓದಿ:ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್!
ಇಂಗ್ಲೆಂಡ್ ನ ಸೌತಂಪ್ಟನ್ ಮತ್ತು ಮ್ಯಾಂಚೆಸ್ಟರ್ ನಲ್ಲಿ ಟೆಸ್ಟ್ ಪಂದ್ಯವಾಡಿದ್ದ ಪಂಕಜ್ ಸಿಂಗ್ ಎರಡು ವಿಕೆಟ್ ಮಾತ್ರ ಪಡೆದಿದ್ದರು. ನಂತರ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗಲಿಲ್ಲ.
ಪ್ರಥಮದರ್ಜೆ ಕ್ರಿಕೆಟ್ ನಲ್ಲಿ 117 ಪಂದ್ಯವಾಡಿರುವ ಪಂಕಜ್ ಸಿಂಗ್ 472 ವಿಕೆಟ್ ಪಡೆದಿದ್ದಾರೆ. 79 ಲಿಸ್ಟ್ ಎ ಕ್ರಿಕೆಟ್ ಪಂದ್ಯದಲ್ಲಿ 118 ವಿಕೆಟ್ ಪಡೆದಿದ್ದಾರೆ.