Advertisement

ಜ್ಞಾನತೇಜೋ ಬಲಂ ಬಲಂ: ಗುಣಗ್ರಾಹಿ ಪಂಜೆ , ಮುಗ್ಧ ಮುದ್ದಣ, ನಿರ್ಲಿಪ್ತ  ಪಾದೆಕಲ್ಲು

12:07 PM Sep 25, 2021 | Team Udayavani |
1868ರಲ್ಲಿ ಆರಂಭಗೊಂಡ ಮಂಗಳೂರಿನ ಸರಕಾರಿ ಪ್ರಾಂತೀಯ ಶಾಲೆಯಲ್ಲಿ (ಪ್ರಾವಿನ್ಶಿಯಲ್‌ ಸ್ಕೂಲ್‌) 1895ರ ಜುಲೈಯಲ್ಲಿ ಕನ್ನಡ ಪಂಡಿತ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಗುಜರಾಯಿಸಿದವರು ಶಿಶು ಸಾಹಿತಿ ಪಂಜೆ ಮಂಗೇಶರಾವ್‌ (1874 -1937) ಮತ್ತು ಕವಿ ನಂದಳಿಕೆ ಲಕ್ಷ್ಮೀನಾರಾಯಣಪ್ಪ (ಮುದ್ದಣ) (187 0 - 1901) ಮಾತ್ರ. 1889ರಿಂದ ಮೂರು ವರ್ಷ ಉಡುಪಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾಗ ಮುದ್ದಣರಿಗೆ ಸಿಗುತ್ತಿದ್ದುದು ತಿಂಗಳಿಗೆ 10 ರೂ. ಹೊಸ ಹುದ್ದೆಗೆ ಇದ್ದದ್ದು 20 ರೂ. ಆಗ ಬಹುತೇಕ ವಿದ್ಯಾಲಯಗಳ ಮುಖ್ಯಸ್ಥರಾಗಿ ಇಂಗ್ಲೆಂಡಿನಿಂದ ಬರುತ್ತಿದ್ದರು...
Now pay only for what you want!
This is Premium Content
Click to unlock
Pay with

-ಮಟಪಾಡಿ ಕುಮಾರಸ್ವಾಮಿ

Advertisement

ಉದ್ಯೋಗ, ಪ್ರಶಸ್ತಿಗಳಿಗೆ ಪ್ರಯತ್ನಿಸಿ ವಿಫ‌ಲರಾದಾಗ ಖಿನ್ನರಾಗುವುದು ಸಾಮಾನ್ಯ. ಇಂತಹವರು ತಮ್ಮ ಇತಿಮಿತಿಯಲ್ಲಿ  ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರಿಸಿದ್ದೇ ಆದಲ್ಲಿ ಯಾವುದರಲ್ಲಿ ವಿಫ‌ಲರಾಗಿದ್ದರೋ ಅದಕ್ಕಿಂತ ದೊಡ್ಡ ಸಾಫ‌ಲ್ಯವನ್ನೂ ಕಾಣಬಹುದು. ಹೀಗೆ ವಂಚಿತರಾಗುವುದು ಕೇವಲ ಯೋಗ್ಯತೆ ಕೊರತೆಯಿಂದ ಮಾತ್ರವಲ್ಲ. ಅರ್ಹತೆಯನ್ನೂ ಹಿಂದಿಕ್ಕುವ  ಕಾರಣಗಳಿರುತ್ತವೆ. ಉದಾಹರಣೆಯಾಗಿ ಹೊಸಗನ್ನಡದ ಮುಂಗೋಳಿ ಎಂದು ಹೆಸರಾದ ಕವಿ ಮುದ್ದಣರನ್ನು, ಇತ್ತೀಚಿನ ಉದಾಹರಣೆ ಬೇಕಾದರೆ ಹೆಸರಾಂತ ವಿದ್ವಾಂಸ ಡಾ| ಪಾದೆಕಲ್ಲು ವಿಷ್ಣು ಭಟ್‌ರನ್ನು ಶಿಕ್ಷಕರ ದಿನಾಚರಣೆಯ ಈ ಮಾಸದಲ್ಲಿ ಉಲ್ಲೇಖೀಸಬಹುದು.

1868ರಲ್ಲಿ ಆರಂಭಗೊಂಡ ಮಂಗಳೂರಿನ ಸರಕಾರಿ ಪ್ರಾಂತೀಯ ಶಾಲೆಯಲ್ಲಿ (ಪ್ರಾವಿನ್ಶಿಯಲ್‌ ಸ್ಕೂಲ್‌) 1895ರ ಜುಲೈಯಲ್ಲಿ ಕನ್ನಡ ಪಂಡಿತ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಗುಜರಾಯಿಸಿದವರು ಶಿಶು ಸಾಹಿತಿ ಪಂಜೆ ಮಂಗೇಶರಾವ್‌ (1874 -1937) ಮತ್ತು ಕವಿ ನಂದಳಿಕೆ ಲಕ್ಷ್ಮೀನಾರಾಯಣಪ್ಪ (ಮುದ್ದಣ) (187 0 - 1901) ಮಾತ್ರ. 1889ರಿಂದ ಮೂರು ವರ್ಷ ಉಡುಪಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾಗ ಮುದ್ದಣರಿಗೆ ಸಿಗುತ್ತಿದ್ದುದು ತಿಂಗಳಿಗೆ 10 ರೂ. ಹೊಸ ಹುದ್ದೆಗೆ ಇದ್ದದ್ದು 20 ರೂ. ಆಗ ಬಹುತೇಕ ವಿದ್ಯಾಲಯಗಳ ಮುಖ್ಯಸ್ಥರಾಗಿ ಇಂಗ್ಲೆಂಡಿನಿಂದ ಬರುತ್ತಿದ್ದರು. ಈ ಅವಧಿಯ ಮುಖ್ಯೋಪಾಧ್ಯಾಯರು ಜೆ.ಜಿ. ಗೋಡ್ಲೆ. ಇಂಗ್ಲಿಷ್‌ನಲ್ಲಿ ಚೆನ್ನಾಗಿ ಸಂವಹನ ಮಾಡುವವರು ಆಯ್ಕೆಯಾಗುತ್ತಿದ್ದರು. ಈಗಲೂ ಅಷ್ಟೆ…  ಪಂಜೆಯವರ ಇಂಗ್ಲಿಷ್‌ ಜ್ಞಾನ ಹುದ್ದೆಗೆ ಆಯ್ಕೆ ಮಾಡಿಸಿತು.

ಆಯ್ಕೆ ಹಿಂದಿನ ಗುಟ್ಟು ತಿಳಿಯದ ಮುದ್ದಣ “ನಾನೇನೋ ಕನ್ನಡ ವಾಚಸ್ಪತಿಯಾಗಿರಬಹುದೆಂದು ಭಾವಿಸಿ ನನ್ನನ್ನು ಅಭಿನಂದಿಸಿ ಪತ್ರ ಬರೆದರು’ ಎಂದು ಪಂಜೆಯವರೇ ಹೇಳಿಕೊಂಡಿದ್ದಾರೆ. ಅದಕ್ಕೆ ಪಂಜೆಯವರು “ಭತ್ತದ ಸಿಪ್ಪೆಯನ್ನು ಕುಟ್ಟತಕ್ಕ ಒನಕೆಯನ್ನು ಕನ್ನಡ ಬರಹವನ್ನು ಬರೆಸುವುದಕ್ಕೆ ತಂದರು. ಚಿತ್ರ ಬಿಡಿಸುವ ಬಣ್ಣದ ಗರಿಯನ್ನು ಕಿವಿಯ ತುರಿಕೆಗೆ ಕುಗ್ಗೆ ಕಡ್ಡಿಯನ್ನಾಗಿ ಮಾಡಿದರು’ ಎಂದು ಪ್ರತ್ಯುತ್ತರ ಬರೆದರು. ಹೀಗೆ “ನಮ್ಮಿಬ್ಬರ ಅಂತರವನ್ನು ಸ್ಪಷ್ಟಪಡಿಸಿದೆನು’ ಎಂದು ಪಂಜೆ ಹೇಳಿದ್ದಾರೆ. ಪಂಜೆಯವರಿಗೂ ತನ್ನ ಆಯ್ಕೆ ಗುಟ್ಟು ತಿಳಿದದ್ದು ತಡವಾಗಿ.

ಅದುವರೆಗೆ ಸಂಪರ್ಕವಿರದ ಪಂಜೆಯವರು ಮುಂದೆ ಮುದ್ದಣ ಎಷ್ಟು ದೊಡ್ಡವರು? ಅವರ ಕಾವ್ಯಪ್ರತಿಭೆ ಎಂಥದ್ದು ಎಂದು ಸುದೀರ್ಘ‌ ಲೇಖನವನ್ನೇ ಬರೆದರು. ಪಂಜೆಯವರು ಈ ವಿಷಯ ತಿಳಿಸದೆ ಇದ್ದಿದ್ದರೆ ಮುಂದಿನ ತಲೆಮಾರಿಗೆ ವಾಸ್ತವ ತಿಳಿಯುತ್ತಿರಲಿಲ್ಲ. ನಿಧನ ಹೊಂದಿದ ಬಳಿಕವೇ ಲೋಕಕ್ಕೆ ಮುದ್ದಣ ಪ್ರತಿಭೆ ಗೊತ್ತಾದದ್ದು, ಅಷ್ಟೂ ಹಿಂಜರಿಕೆ ಸ್ವಭಾವ ಅವರದು. ಹುದ್ದೆಗಿಂತ ಸಾವಿರ  ಪಟ್ಟು ಮುದ್ದಣ ಬೆಳೆದರು. ಇದನ್ನು ಬೇರೆ ಯಾರೋ ದಾಖಲಿಸುವ ಬದಲು ಪಂಜೆ ಯವರೇ ದಾಖಲಿಸಿದ್ದು ಅಧಿಕೃತತೆ, ಧಾರಾಳಬುದ್ಧಿ, ಹೃದಯ ವೈಶಾಲ್ಯವನ್ನು ತೋರಿಸುತ್ತದೆ. ಹೈದರಾಬಾದ್‌ ಪ್ರಾಂತದ ರಾಯಚೂರಿನಲ್ಲಿ 1934ರ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಮೈಸೂರು ಪ್ರಾಂತ, ಧಾರವಾಡ, ಹೈದರಾಬಾದ್‌ ಪ್ರಾಂತದ ಸಾಹಿತಿಗಳು ಒತ್ತಾಯಿಸಿ ಆಯ್ಕೆಯಾದ ಮದ್ರಾಸ್‌ ಪ್ರಾಂತ್ಯದ ಕರಾ ವಳಿಯ ಪಂಜೆಯವರೂ ಎಷ್ಟು ಎತ್ತರದವರು ಎಂದರಿಯಬಹುದು. ಅಧ್ಯಕ್ಷತೆಗೆ ಲಾಬಿ ಮಾಡುವ ಕಾಲ ಅದಲ್ಲ.

Advertisement

ಹಿರಿಯ ವಿದ್ವಾಂಸರ ಸಾಲಿಗೆ ಸೇರುವ ಸಂಪನ್ಮೂಲ ವ್ಯಕ್ತಿ,  ಪಿಎಚ್‌.ಡಿ.- ಎಂಫಿಲ್‌ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾದ, ಸುದೀರ್ಘ‌ ಕಾಲ ಪ್ರಾಂಶುಪಾಲರಾಗಿ ಆಡಳಿತಾನುಭವವಿದ್ದ ಡಾ| ಪಾದೆಕಲ್ಲು ವಿಷ್ಣು ಭಟ್ಟರು ಮಂಗಳೂರು ವಿ.ವಿ.ಯ ಕನ್ನಡ ಪ್ರಾಧ್ಯಾಪಕ ಹುದ್ದೆಯ ಸಂದರ್ಶನಕ್ಕೆ  ಆಯ್ಕೆಯಾಗದ್ದು 2013-14ರಲ್ಲಾದ ಘಟನೆ. ಆಗ ಭಟ್ಟರಿಗೆ 58 ವರ್ಷ. ಕಾಲೇಜಿನಲ್ಲಿ 60 ವರ್ಷಕ್ಕೆ ನಿವೃತ್ತಿ ಯಾಗುವುದಿದ್ದರೆ ವಿ.ವಿ.ಯಲ್ಲಿ ಅದು 62ಕ್ಕೇರುತ್ತಿತ್ತು. ಅಧಿಕಾರದ ಬಲ ಏನನ್ನೂ ಮಾಡಬಲ್ಲದು ಎಂಬುದನ್ನು ಈ ನಿವೃತ್ತಿ ತಾರತಮ್ಯ ತೋರಿಸುತ್ತಿದೆ.

ಸಂದರ್ಶನ ಮಾಡಿದವರು 1. “ನೀವು ಕಾಲೇಜಿನಲ್ಲಿ ಕೆಲಸ ಮಾಡಿದವರು, ಸ್ನಾತಕೋತ್ತರ ಪದವಿಗೆ ಪಾಠ ಮಾಡಲು ಹೇಗೆ ಸಹಾಯಕ?’, 2. “ನೀವು ಪಾಠ ಮಾಡಿದವರು. ಸಂಶೋಧನೆ ಅನುಭವ ಬೇಕಲ್ಲ?’, 3. “ವಿ.ವಿ.ಯಲ್ಲಿ ಪ್ರಾಜೆಕ್ಟ್ ಕೆಲಸಗಳಿರುತ್ತವೆ. ನಿಮಗೆ ಇರುವುದು ಎರಡೇ ವರ್ಷ (ವಿ.ವಿ.ಯಲ್ಲಿ 2 ವರ್ಷ ವಿಸ್ತರಣೆಯಾಗುವುದಾದರೂ). ಇದಕ್ಕೆ ಐದು ವರ್ಷ ಬೇಕಾಗುತ್ತದೆ’ ಎಂದು ಕೇಳಿದರು. “ನನ್ನದೇ ಅನೇಕ ಸಂಶೋಧನ ಕಾರ್ಯಗಳಿವೆ’, “ನಾನು ಈಗಾಗಲೇ ಕೈಗೊಂಡ ಪ್ರಾಜೆಕ್ಟ್ಗಳಿದ್ದು ಅದನ್ನು ನಿಗದಿತ ಸಮಯದಲ್ಲಿ ಮುಗಿಸಬಹುದು’ ಎಂದು ಭಟ್‌ ಉತ್ತರಿಸಿದರು. ಭಟ್ಟರಿಗಿಂತ ಕಿರಿಯರಾದ, ಕಾಲೇಜಿನಲ್ಲೇ ಕೆಲಸ ಮಾಡಿದ ಪ್ರಾಧ್ಯಾಪಕರೊಬ್ಬರನ್ನು ಆಯ್ಕೆ ಮಾಡಿದರು ಎಂಬುದು ಮೊದಲ ಪ್ರಶ್ನೆಗೆ ಮರುಪ್ರಶ್ನೆ ಆಗಬಹುದು.

ಮುದ್ದಣರು ಆಗ ಸಂದರ್ಶನಕ್ಕೆ ಹೋದ ಸಂಸ್ಥೆ 1948ರಲ್ಲಿ ಪ್ರಥಮ ದರ್ಜೆ ಕಾಲೇಜು, ಈಗ ಮಂಗಳೂರು ವಿ.ವಿ. ಕಾಲೇಜು ಎನಿಸಿದೆ. ಭಟ್‌ ಸಂದರ್ಶನಕ್ಕೆ ಹೋದದ್ದು ಮಂಗಳೂರು ವಿ.ವಿ.ಗೆ ಮತ್ತು ಮುದ್ದಣ ಕುರಿತು ಭಟ್‌ ಒಂದು ಸ್ವತಂತ್ರ ಕೃತಿ, ಒಂದು ಸಂಪಾದಿತ ಕೃತಿ ಸಹಿತ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು ಎಂಬುದರ ಹಿಂದೆ ಕಣ್ಣಿಗೆ ಕಾಣದ ಲಿಂಕ್‌ ಕಾಣುತ್ತದೆ. ಯೂರೋಪಿನ ಜೆ.ಜಿ. ಗೋಡ್ಲೆ 15-01-1895ರಿಂದ 11-11-1895ರ ವರೆಗೆ, ಕನ್ನಡಿಗ

ಯು. ಕೃಷ್ಣಯ್ಯ 12.11.1895ರಿಂದ 10-02-1896ರ ವರೆಗೆ  ಮುಖ್ಯ ಶಿಕ್ಷಕರಾಗಿದ್ದರಿಂದ ಆರೇಳು ತಿಂಗಳ ಬಳಿಕ ಸಂದರ್ಶನ ನಡೆದಿದ್ದರೆ ಮುದ್ದಣ ಆಯ್ಕೆಯಾಗುತ್ತಿದ್ದರೋ ಏನೋ!

ಕಾಲಪ್ರಭಾವ- ಕಾಲಪ್ರವಾಹದಿಂದಲೋ, ಸಮಾಜದಲ್ಲಿ ಕಾಣುವ ವಿದ್ಯಮಾನಗಳ ಅನುಭವದಿಂದಲೋ ಪಂಜೆಯವರಂತಹ ಸಹೃದಯಿ ಗಳು, ಮುದ್ದಣರಂತಹ ಮುಗ್ಧರು ಈಗ ಸಿಗರು. ಆದರೆ ಆ ಗುಣ ಹೊಂದಿದ್ದರೆ, ಎಣಿಸಿದ್ದು ಕೈಗೆ ಸಿಗದಿದ್ದರೂ ಎಣಿಸದೆ ಇದ್ದ ಸ್ಥಾನದಲ್ಲಿ ಹತ್ತು, ನೂರು, ಸಾವಿರ ಪಟ್ಟು ಎತ್ತರಕ್ಕೇರುವುದು ಶತಃಸಿದ್ಧ. ಇವೆಲ್ಲ ಸಾಧ್ಯವಾಗುವುದು ಕೌಶಲ, ಪ್ರತಿಭೆ, ಪರಿಶ್ರಮದ ಆಧಾರದಲ್ಲಿ. ಪದನಿಮಿತ್ತಕ್ಕಿಂತ ಜ್ಞಾನಭಂಡಾರ ದೊಡ್ಡದು, ಪರಿಶ್ರಮ ಪಡುತ್ತ ಹೋದಲ್ಲಿ ವ್ಯಕ್ತಿತ್ವ, ಜ್ಞಾನ ಸಹಜವಾಗಿ ಎತ್ತರಕ್ಕೇರುತ್ತದೆ ಎಂಬ ಸಂದೇಶ ಇಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.