Advertisement
ಉಡುಪಿ: ಪಣಿಯಾಡಿ ಹಿರಿಯ ಪ್ರಾಥಮಿಕ ಶಾಲೆ 1891ರಲ್ಲಿ ಪೂರ್ವದಲ್ಲಿ ಐಗಳ ಮಠ (ಗುರುಕುಲ)ವಾಗಿತ್ತು. ಮಠದ ರಥಬೀದಿಯಲ್ಲಿ ಇರುವ ಅನಂತೇಶ್ವರ ದೇಗುಲದ ಪೌಳಿಯಲ್ಲಿ ಮಕ್ಕಳಿಗಾಗಿ ವಿಶೇಷ ಶಿಕ್ಷಣ ನೀಡಲಾಗುತ್ತಿತ್ತು. ಅನಂತರ ದಿನಗಳ ಸರಕಾರದಿಂದ ಮಾನ್ಯತೆ ದೊರೆತು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಯಿತು. ವಿದ್ಯಾರ್ಥಿಗಳಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಶಾಲೆಯನ್ನು ಬೈಲಕರೆಗೆ ಸ್ಥಳಾಂತರಿಸಲಾಯಿತು. ಪ್ರಸ್ತುತ ಶಾಲೆಯು ವಾದಿರಾಜ ಮಾರ್ಗದಲ್ಲಿ ಇದೆ.
ಕೊರಂಗ್ರಪಾಡಿ, ಅಲೆವೂರು, ಕಡಿಯಾಳಿ, ಇಂದ್ರಾಳಿ, ಮಠದ ಬೆಟ್ಟು, ಬೀಡಿನ ಗುಡ್ಡೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಶೇ. 98ರಷ್ಟು ಮಂದಿ ಈ ಶಾಲೆಯ ಹಳೆ ವಿದ್ಯಾರ್ಥಿಗಳಾಗಿದ್ದಾರೆ. 1891ರಲ್ಲಿ ಶಾಲೆಯ ಮೊದಲ ಮುಖ್ಯೋಪಾಧ್ಯಾಯರಾಗಿ ಲಕ್ಷ್ಮಣ ಕಾಮತ್ ಸೇವೆ ಸಲ್ಲಿಸಿದ್ದರು. ಆ ಸಂದರ್ಭ ಸುಮಾರು 400 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. 2000ರಲ್ಲಿ 6ಮತ್ತು 7ನೇ ತರಗತಿ ಪ್ರಾರಂಭಿಸಲಾಯಿತು. ಪೇಜಾವರ ಶ್ರೀಗಳ ಜವಾಬ್ದಾರಿ ಲಕ್ಷ್ಮಣ ಕಾಮತ್ ಸೇವಾವಧಿಯ ಬಳಿಕ ಶಾಲೆ ನಡೆಸಲು ಕಷ್ಟವಾದ ಹಿನ್ನೆಲೆಯಲ್ಲಿ ಶಾಲೆಯ ಜವಾಬ್ದಾರಿಯನ್ನು ಕಾಣಿಯೂರು ಮಠ ವಹಿಸಿಕೊಂಡಿತ್ತು. ಅನಂತರ 1943ರಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಶಾಲೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. 1994ರ ವಿದ್ಯಾರ್ಥಿಗಳ ಸಂಖ್ಯೆ 300ರಿಂದ 14ಕ್ಕೆ ಇಳಿಕೆಯಾಗಿತ್ತು. ಆ ಸಂದರ್ಭ ಸರಕಾರದಿಂದ ನಿಯೋಜಿತ ಶಿಕ್ಷಕಿ ಕಮಲಾ ಕಾರ್ಯ ನಿರ್ವಹಿಸುತ್ತಿದ್ದರು. ಇವರು ನಿವೃತ್ತಿ ಹೊಂದಿದ ಬಳಿಕ ಶಾಲೆಗೆ ಸರಕಾರದಿಂದ ಯಾವುದೇ ಶಿಕ್ಷಕರು ನೇಮಕವಾಗಿಲ್ಲ.
Related Articles
ಪ್ರಸ್ತುತ ಶಾಲೆಯಲ್ಲಿ 325 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆಡಳಿತ ಮಂಡಳಿಯಿಂದ 16 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಂಪ್ಯೂಟರ್ ಶಿಕ್ಷಣ, ನ್ಪೋಕನ್ ಇಂಗ್ಲಿಷ್, ಯಕ್ಷ ಶಿಕ್ಷಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ವಸ್ತುಗಳನ್ನು ಶಾಲಾ ಆಡಳಿತ ಮಂಡಳಿಯಿಂದ ಉಚಿತವಾಗಿ ನೀಡಲಾಗುತ್ತಿದೆ. ಅದಮಾರು ಮಠದ ವಿಬುಧೇಶತೀರ್ಥ ಶ್ರೀಪಾದರ ಗುರುಗಳು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು. ನಾಗಾಲ್ಯಾಂಡ್ ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯರ ತಂದೆ ಬಾಲಕೃಷ್ಣ ಆಚಾರ್ಯರು ಈ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
Advertisement
ಶಾಲೆಯ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಪ್ರಸ್ತುತ ಶಾಲೆಯಲ್ಲಿ ಉಚಿತ ಶಿಕ್ಷಣ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಾಲೆಯ ಆಡಳಿತ ಮಂಡಳಿಯಿಂದ ಉಚಿತ ಪುಸ್ತಕ ನೀಡಲಾಗುತ್ತಿದೆ.-ಶಶಿರೇಖಾ,
ಮುಖ್ಯೋಪಾಧ್ಯಾಯಿನಿ, ಪಣಿಯಾಡಿ ಶಾಲೆ ಜ್ಞಾನದ ಜತೆಗೆ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದು ಹೇಳಿಕೊಟ್ಟಿದೆ. ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವುದು ಹೆಮ್ಮೆ ಇದೆ.
-ನಾಗರಾಜ್ ಬಲ್ಲಾಳ್,
ಹಳೆ ವಿದ್ಯಾರ್ಥಿ. – ತೃಪ್ತಿ ಕುಮ್ರಗೋಡು