ಕಾಪು: ಕಳೆದ ರವಿವಾರ ದುಷ್ಮರ್ಮಿಗಳಿಂದ ಹತ್ಯೆಗೊಳಗಾದ ಪಾಂಗಾಳ ಶರತ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳನ್ನೂ ಶೀಘ್ರ ಪೊಲೀಸರ ಕೈಗೆ ಸಿಲುಕಿಸುವಂತೆ ಮೃತ ಶರತ್ ಶೆಟ್ಟಿ ಕುಟುಂಬದವರು ಶುಕ್ರವಾರ ರಾತ್ರಿ ದೈವದ ಮೊರೆ ಹೋಗಿದ್ದಾರೆ.
ಪಾಂಗಾಳ ಪರಿಸರದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲನಾಗಿರುತ್ತಿದ್ದ ಶರತ್ ಶೆಟ್ಟಿ ರವಿವಾರ ಪಾಂಗಾಳ ಪಡ್ಪುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದು, ಆ ವೇಳೆ ಮಾತುಕತೆಗೆಂದು ಕರೆದ ದುಷ್ಕರ್ಮಿಗಳು ಬಳಿಕ ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು.
ಶರತ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಉಡುಪಿ ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಕಾರ್ಕಳ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ, ಕಾಪು ವೃತ್ತ ನಿರೀಕ್ಷಕ ಕೆ. ಸಿ. ಪೂವಯ್ಯ ನೇತೃತ್ವದಲ್ಲಿ ಪೊಲೀಸರು ಬಿರುಸಿನ ತನಿಖೆ ನಡೆಸುತ್ತಿದ್ದು, ಮಹತ್ವದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಹತ್ಯೆಗೀಡಾದ ಶರತ್ ಮತ್ತು ಕೊಲೆ ನಡೆಸಿರುವ ಆರೋಪಿಗಳು ಮತ್ತು ಹತ್ಯೆಗೆ ಕಾರಣವೇನು ಎನ್ನುವುದರ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಪ್ರಮುಖ ಆರೋಪಿಗಳ ಬೆನ್ನತ್ತಿದ್ದಾರೆ.
ಈ ನಡುವೆ ಮೃತ ಶರತ್ ಶೆಟ್ಟಿ ಅವರ ಭಾವ ಚಂದ್ರಹಾಸ ಶೆಟ್ಟಿ ಮಂಡೇಡಿ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮ ನಡೆದಿದ್ದು, ಅಲ್ಲಿ ಅವರು ತನ್ನ ಭಾವನ ಸಾವಿಗೆ ಕಾರಣರಾಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಡೆಸುತ್ತಿರುವ ಪ್ರಯತ್ನಕ್ಕೆ ದೈವ ಬಲವನ್ನು ಒದಗಿಸಿಕೊಟ್ಟು, ಅವರ ಬಂಧನವಾಗಿ ಕಠಿಣ ಶಿಕ್ಷೆ ದೊರಕುವಂತೆ ಅನುಗ್ರಹಿಸುವಂತೆ ಅವರು ದೈವದ ಮೊರೆ ಹೋಗಿದ್ದಾರೆ.
ಪಾಂಗಾಳದಲ್ಲಿ ಕಾರಣಿಕ ಮೆರೆಯುತ್ತಿರುವ ಪಾಂಗಾಳ ಪಡು³ ಬಬ್ಬುಸ್ವಾಮಿಯ ನೇಮದ ದಿನದಂದೇ ಎಲ್ಲರಿಗೆ ಬೇಕಾದ ವ್ಯಕ್ತಿಯನ್ನು ಕೊಲೆಗೈದು, ಊರಿಗೆ ಕಳಂಕ ತಂದಿರುವ ಆರೋಪಿಗಳು ಯಾರೇ ಆಗಿರಲಿ, ಎಲ್ಲೇ ಅಡಗಿರಲಿ, ಅವರನ್ನು ಶೀಘ್ರ ಕಾನೂನಿನ ಬಲೆಗೆ ಸಿಲುಕಿಸುತ್ತೇನೆ. ಅವರು ಮಾಡಿದ ತಪ್ಪಿಗೆ ಸೂಕ್ತ ಶಿಕ್ಷೆ ಅನುಭವಿಸುತ್ತಾರೆ. ಕಾನೂನಿನ ಶಿಕ್ಷೆಯೊಂದಿಗೆ ದೈವಗಳ ಶಿಕ್ಷೆಯೂ ಅವರಿಗೆ ಕಾದಿದೆ. ಹತ್ತು ದಿನದೊಳಗೆ ಎಲ್ಲಾ ಆರೋಪಿಗಳೂ ಪೊಲೀಸರ ವಶದಲ್ಲಿರುವಂತೆ ನೋಡಿಕೊಳ್ಳುತ್ತೇವೆ ಎಂದು ಧೂಮಾವತಿ ದೈವವು ಕುಟುಂಬದವರಿಗೆ ಅಭಯ ನೀಡಿದೆ ಎಂದು ತಿಳಿದು ಬಂದಿದೆ.
ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳ ಚಲನವಲನ ಕಂಡು ಬಂದಿರುವ ಪ್ರದೇಶಗಳಲ್ಲಿನ ಸಿಸಿ ಕ್ಯಾಮರಾ ಫೂಟೇಜ್, ಫೂಟೇಜ್‌ನಲ್ಲಿ ಸಿಕ್ಕಿರುವ ಮಾಹಿತಿಯಂತೆ ಅವರು ಓಡಾಡಿರುವ ಪ್ರದೇಶಗಳಲ್ಲಿ ಶನಿವಾರ ಮತ್ತೊಂದು ಸುತ್ತಿನ ಓಡಾಟ ನಡೆಸಿದ್ದು ಯಾವುದಾರೂ ಸೊತ್ತುಗಳು ಸಿಗುತ್ತವೆಯೇ ಎನ್ನುವುದನ್ನೂ ಪರಿಶೀಲನೆ ನಡೆಸಿದ್ದಾರೆ ಎಂದು ಸ್ಥಳೀಯರು ಉದಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬೈಕ್ ಸ್ಕಿಡ್ ಆಗಿ ಬಿದ್ದ ವೇಳೆ ಅಪರಿಚಿತ ವಾಹನ ಹರಿದು ಸವಾರ ಸಾವು