ಕಾಪು: ಕಳೆದ ವರ್ಷ ಫೆ. 5ರಂದು ಪಾಂಗಾಳದಲ್ಲಿ ಡ್ರ್ಯಾಗನ್ ಇರಿತಕ್ಕೊಳಗಾಗಿ ಹತ್ಯೆಗೀಡಾಗಿದ್ದ ಪಾಂಗಾಳ ಮಂಡೇಡಿಯ ಶರತ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಇದೊಂದಿಗೆ ವರ್ಷದ ಹಿಂದೆ ದೈವದ ಕಾರ್ಣಿಕ ನುಡಿ ನಿಜವಾಗಿದೆ.
ಶರತ್ ಶೆಟ್ಟಿ ಕೊಲೆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿರುವಂತೆಯೇ ಮನೆಯವರು ಕುಟುಂಬದ ದೈವದ ಮೊರೆ ಹೋಗಿದ್ದರು. “ಆರೋಪಿ ಎಲ್ಲೇ ಇದ್ದರೂ ಪೊಲೀಸರ ಮುಂದೆ ತಂದು ನಿಲ್ಲಿಸುತ್ತೇನೆ” ಎಂದು ದೈವ ಮನೆಯವರಿಗೆ ಅಭಯ ನೀಡಿತ್ತು. ಅದರಂತೆ ಆತ ಮೇ 23ರಂದು ತಾನಾಗಿಯೇ ನ್ಯಾಯಾಲಯದ ಮುಂದೆ ಹಾಜರಾಗಿರುವುದು ವಿಶೇಷವಾಗಿದೆ.
ಕೊಲೆ ನಡೆದು 15 ತಿಂಗಳು ಕಳೆದಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಲು ಪೊಲೀಸರಿಗೂ ಸಾಧ್ಯವಾಗಲಿಲ್ಲ. ಆದರೆ ತಡವಾದರೂ ದೈವದ ಮಾತು ನಿಜವಾಗಿದೆ. ತುಳುನಾಡಿನ ಸತ್ಯಗಳು ಇನ್ನೂ ಪವಾಡ ತೋರಿಸುತ್ತಿವೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಪೊಲೀಸ್ ಕಸ್ಟಡಿಗೆ: ಶರತ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯನನ್ನು ಮೇ 30ರ ವರೆಗೆ ಕಾಪು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಒಂದು ವರ್ಷ ಮೂರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಯೋಗೀಶ್ ಆಚಾರ್ಯ ಮೇ 23ರಂದು ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿ ಶರಣಾಗಿದ್ದನು. ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಪ್ರಕರಣದ ಪ್ರಸ್ತುತ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.