Advertisement

ಪಾಂಗಾಳ: ಅವಳಿ ಸೇತುವೆ ಅಡಿ ತ್ಯಾಜ್ಯದ ಕೊಂಪೆ

08:31 PM May 03, 2019 | Sriram |

ಕಟಪಾಡಿ: ರಾ.ಹೆ. 66ರ ಪಾಂಗಾಳ ಸೇತುವೆಯಡಿ ತ್ಯಾಜ್ಯ ರಾಶಿ ಬಿದ್ದಿದ್ದು, ಸಾಂಕ್ರಾಮಿಕ ರೋಗದ ಭೀತಿ ವ್ಯಕ್ತವಾಗಿದೆ. ಇದರೊಂದಿಗೆ ಹೊಳೆಯ ನೀರಿನ ಹರಿವಿಗೆ ಇದು ತಡೆಯೊಡ್ಡಿದ್ದು, ಈ ಮಳೆಗಾಲದಲ್ಲಿ ಕೃತಕ ನೆರೆಹಾವಳಿ ಭೀತಿಗೆ ಕಾರಣವಾಗಿದೆ.

Advertisement

ಈ ಅವಳಿ ಸೇತುವೆಗಳ ಮೇಲಿನಿಂದ ತ್ಯಾಜ್ಯಗಳನ್ನು ಬಿಸಾಡುವ ಮೂಲಕ ದಾರಿಹೋಕರು, ವ್ಯಾಪಾರಿಗಳು, ಪ್ರಯಾಣಿಕರು, ವಾಹನ ಚಾಲಕರು, ನಿರ್ವಾಹಕರು ತಮ್ಮ ತ್ಯಾಜ್ಯಗಳನ್ನು ವಿಲೇವಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಸೇತುವೆಯ ಅಕ್ಕಪಕ್ಕದಲ್ಲಿ ಮನೆಗಳಿವೆ ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲವಾಗಿದೆ.

ಮಾರಕವಾದ ಮಾಂಸದ ತ್ಯಾಜ್ಯ
ಇಲ್ಲಿ ಎಸೆಯಲ್ಪಟ್ಟ ಮನೆಗಳ, ಕೋಳಿ ಅಂಗ ಮಾಂಸದ ಅಂಗಡಿ, ವ್ಯಾಪಾರ ಮಳಿಗೆಗಳ ತ್ಯಾಜ್ಯವು ಹೊಳೆಯ ನೀರಿನ ಹರಿವು ಇಲ್ಲದ ಕಾರಣ ಅಲ್ಲಿಯೇ ಕೊಳೆತು ಪರಿಸರಕ್ಕೆ ಮಾರಕವಾಗುತ್ತಿದೆ. ಅದರೊಂದಿಗೆ ಹೊಳೆಯ ನೀರು ಕೂಡಾ ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರು ಸಮಸ್ಯೆಯನ್ನು ತೋಡಿಕೊಳ್ಳುತ್ತಾರೆ.

ಹೊಳೆ ನೀರು ಹರಿವಿಗೆ ತಡೆ
ಸೇತುವೆಯ ಕಾಮಗಾರಿಯ ಸಂದರ್ಭ ಇಲ್ಲಿ ಸುರಿದಿರುವ ಮಣ್ಣನ್ನು ಇದುವರೆಗೂ ತೆರವುಗೊಳಿಸಿಲ್ಲ. ಹಾಗಾಗಿ ಹೊಳೆಯ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಜತೆಗೆ ಈಗ ತ್ಯಾಜ್ಯದಿಂದಾಗಿ ಮಳೆಗಾಲದಲ್ಲಿ ನೀರ ಹರಿವಿಗೆ ತಡೆಯಾಗುವ ಭೀತಿ ಕಾಡಿದೆ. ಆದ್ದರಿಂದ ಮಳೆ ಆರಂಭವಾಗುವುದಕ್ಕೂ ಮುನ್ನವೇ ಸಂಬಂಧಪಟ್ಟ ಇಲಾಖೆಯು ಎಚ್ಚೆತ್ತು ಈ ಬಗ್ಗೆ ಕ್ರಮ ಕೈಗೊಳ್ಳ ಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಪಾಂಗಾಳ ಹೊಳೆಯ ನೀರು ನೂರಾರು ಎಕರೆ ಕೃಷಿ ಭೂಮಿಗೂ ಪ್ರಯೋಜನಕಾರಿಯಾಗಿದೆ. ಒಂದು ವೇಳೆ ಈ ಹೊಳೆಯ ನೀರು ಮಲೀನ ಗೊಂಡಲ್ಲಿ ಕೃಷಿಗೂ ಮಾರಕವಾಗಿ ಪರಿಣಮಿಸುತ್ತದೆ. ಅಕ್ಕಪಕ್ಕದ ನೀರಿನಾಶ್ರಯಗಳಿಗೆ ಮೂಲವಾಗಿರುವ ಈ ಹೊಳೆಯು ಮತ್ತಷ್ಟು ತ್ಯಾಜ್ಯದ ಕೊಂಪೆಯಾದಲ್ಲಿ ಮತ್ತು ಉಬ್ಬರ ಇಳಿತಕ್ಕೊಳಗಾಗದಿದ್ದಲ್ಲಿ ಜಲಾಶ್ರಯ ಗಳ ನೀರಿನ ಮೂಲಕ್ಕೂ ಕೊಡಲಿಯೇಟು ಬೀಳಲಿದೆ.

Advertisement

ತ್ಯಾಜ್ಯ ಎಸೆಯದಿರಿ
ಸೇತುವೆಯ ಕೆಳಗೆ ತ್ಯಾಜ್ಯವನ್ನು ಮನಸೋ ಇಚ್ಛೆಯಂತೆ ಎಸೆಯುತ್ತಿದ್ದಾರೆ. ನಮ್ಮ ವಾಸ್ತವ್ಯದ ಮನೆ ಇದ್ದು, ಮಾಂಸ-ಹಸಿ ತ್ಯಾಜ್ಯಗಳು ಕೊಳೆತು ಪರಿಸರಕ್ಕೆ ಮಾರಕವಾಗಿದ್ದು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಸಂಬಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು
– ಸುಂದರ, ಪಾಂಗಾಳ

ಕ್ರಮಕೈಗೊಳ್ಳಬೇಕು
ಹೊಳೆಯ ನೀರಿನ ಉಬ್ಬರ-ಇಳಿತದ ಮೇಲೆ ದುಷ್ಪರಿಣಾಮ ಬೀರುತ್ತಿರುವ ತ್ಯಾಜ್ಯ ಮತ್ತು ಸೇತುವೆ ನಿರ್ಮಾಣದ ಕಾಮಗಾರಿಯ ಸಂದರ್ಭ ಹೇರಿದ್ದ ಮಣ್ಣನ್ನು ಕೂಡಲೇ ತೆರವುಗೊಳಿಸಬೇಕಿದೆ. ಹೊಳೆಯ ಉಬ್ಬರ-ಇಳಿತವಿಲ್ಲದೆ ಈ ಭಾಗದ ಬಾವಿಗಳಲ್ಲಿ ನೀರಿನ ಒಸರು ಬರುವ ಸೆಲೆಗಳು ಬತ್ತಿವೆ. ಮಳೆಗಾಲಕ್ಕೂ ಮುನ್ನವೇ ಇಲಾಖೆಯು ಜಾಗ್ರತೆ ವಹಿಸಿ ಕೃತಕ ನೆರೆಹಾವಳಿಯಿಂದ ಪರಸರದ ಜನತೆ, ಮನೆಗಳನ್ನೂ ರಕ್ಷಿಸಬೇಕಿದೆ.
-ನಾಗೇಶ್‌ ಭಂಡಾರಿ,
ಸದಸ್ಯ, ಇನ್ನಂಜೆ ಗ್ರಾ.ಪಂ.

-ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next