ನವದೆಹಲಿ: “ಮಿ ಟೂ’ ಅಭಿಯಾನದಡಿ ವ್ಯಕ್ತವಾಗುತ್ತಿರುವ ಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳನ್ನು ವಿಚಾರಣೆ ನಡೆಸಿ ಪ್ರತಿಯೊಂದು ಪ್ರಕರಣದಲ್ಲೂ ಸೂಕ್ತ ಮಾರ್ಗದರ್ಶನ, ಸಲಹೆಗಳನ್ನು ನೀಡಲು ನ್ಯಾಯಾಧೀಶರು ಹಾಗೂ ಕಾನೂನು ತಜ್ಞರುಳ್ಳ ಪ್ರತ್ಯೇಕ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ತಿಳಿಸಿದ್ದಾರೆ. ಅಲ್ಲದೆ, ಹೊಸದಾಗಿ ರಚನೆಯಾಗಲಿರುವ ಸಮಿತಿ ಸ್ವತಂತ್ರವಾಗಿ ವಿಚಾರಣೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಪ್ರತಿಯೊಬ್ಬ ದೂರುದಾರರ ನೋವು ನನಗೆ ಅರ್ಥವಾಗುತ್ತದೆ. ನಾವು ಅವರೆಲ್ಲರನ್ನೂ ನಂಬುತ್ತೇವೆಂದೂ ಹೇಳಿದ್ದಾರೆ.
ಇದೇ ವೇಳೆ ಹತ್ತಾರು ವರ್ಷಗಳ ಹಿಂದಿನ ಘಟನೆಗಳನ್ನು ಈಗ ಬಹಿರಂಗವಾಗಿ ಹೇಳಿಕೊಳ್ಳುತ್ತಿರುವವರ ಬಗ್ಗೆ ಎದ್ದಿರುವ ಆಕ್ಷೇಪಗಳಿಗೆ ಉತ್ತರಿಸಿದ ಮೇನಕಾ, “”ಕಿರುಕುಳ ನಡೆದ 10-15 ವರ್ಷಗಳ ನಂತರವೂ ಆ ಬಗ್ಗೆ ದೂರು ದಾಖಲಿಸಬಹುದಾಗಿದೆ” ಎಂದು ಪುನರುಚ್ಚರಿಸಿದ್ದಾರೆ. ಇದೇ ವೇಳೆ, ಮಹಿಳೆಯರು ಶೀ ಬಾಕ್ಸ್ (www.shebox.nic.in) ಮೂಲಕವೂ ದೂರು ಸಲ್ಲಿಸಬಹುದು ಎಂದಿದ್ದಾರೆ ಮನೇಕಾ. ಏತನ್ಮಧ್ಯೆ, ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಎಂ.ಜೆ. ಅಕºರ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ, ದೊಡ್ಡ ಹುದ್ದೆಯಲ್ಲಿರುವ ಕೆಲ ಪುರುಷರು ಹೀಗೆ ನಡೆದುಕೊಳ್ಳುವುದುಂಟು. ಅಕ್ಬರ್ ಪ್ರಕರಣದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ನಿರ್ದೇಶಕ ಸ್ಥಾನ ಬಿಟ್ಟುಕೊಟ್ಟ ಸಾಜಿದ್ ಇಬ್ಬರು ಮಹಿಳೆಯರಿಂದ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ನಿರ್ದೇಶಕ ಸಾಜಿದ್ ಖಾನ್, ತಾವು ನಿರ್ದೇಶಿಸಲು ಹೊರಟಿದ್ದ “ಹೌಸ್‌ಫುಲ್ 4′ ಚಿತ್ರದ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇನ್ನು, ಈ ಚಿತ್ರದ ನಾಯಕ ಅಕ್ಷಯ್ ಕುಮಾರ್ ಅವರು, ಸಾಜಿದ್ ವಿರುದ್ಧದ ತನಿಖೆ ಮುಗಿಯುವವರೆಗೂ ಚಿತ್ರದ ಚಿತ್ರೀಕರಣ ಸ್ಥಗಿತಗೊಳಿಸುವಂತೆ ನಿರ್ಮಾಪಕರಲ್ಲಿ ಮನವಿ ಮಾಡಿದ್ದಾರೆ. ಜತೆಗೆ, ಆರೋಪ ಸಾಬೀತಾದವರ ಜತೆಗೆ ಕೆಲಸ ಮಾಡುವುದಿಲ್ಲ ಎಂದೂ ಹೇಳಿದ್ದಾರೆ. ತಮ್ಮ ಸಹೋದರ, ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಬಂದಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ನೃತ್ಯ ನಿರ್ದೇಶಕಿ ಫರಾಹ್ ಖಾನ್, “”ಹೆಂಗಳೆಯರ ಬಳಿ ನನ್ನ ಸಹೋದರ ತೋರುವ ನಡೆ ನುಡಿ ಬಗ್ಗೆ ನನಗೂ ಆಕ್ಷೇಪಗಳಿವೆ” ಎಂದಿದ್ದಾರೆ. ಸಂಬಂಧಿ ಫರ್ಹಾನ್ ಅಕ್ತರ್, ಸಾಜೀದ್ ವಿರುದ್ಧದ ಆರೋಪ ಕೇಳಿ ಶಾಕ್ ಆಯಿತು ಎಂದಿದ್ದಾರೆ. ನಟಿ ಬಿಪಾಶ ಬಸು ಕೂಡ ಇದನ್ನೇ ಅನುಮೋದಿಸಿದ್ದಾರೆ. ಇದೇ ವೇಳೆ, ನಟರಾದ ಅಜಯ್ ದೇವಗನ್, ಆಮೀರ್ ಖಾನ್, ರಣಬೀರ್ ಕಪೂರ್ ಮತ್ತಿತರರು ನೊಂದ ಮಹಿಳೆಯರಿಗೆ ಬೆಂಬಲ ಸೂಚಿಸಿದ್ದಾರೆ.
ನ್ಯಾಯಾಂಗವೂ ಹೊರತಾಗಿಲ್ಲ: ನ್ಯಾ. ಗೌತಮ್‌ಪಟೇಲ್ ಮಿ ಟೂ ಅಭಿಯಾನಕ್ಕೆ ಸ್ಪಂದಿಸಿರುವ ಮುಂಬೈ ಹೈಕೋರ್ಟ್ ನ್ಯಾ. ಗೌತಮ್ ಪಟೇಲ್, ಮಹಿಳೆಯರ ದೂರುಗಳು ದೇಶದ ಸ್ಥಿತಿಗತಿಗಳನ್ನೇ ಬದಲಾಯಿಸುತ್ತಿವೆ. ನ್ಯಾಯಾಂಗ ಕ್ಷೇತ್ರವೂ ಇಂಥ ಕಿರುಕುಳಗಳಿಂದ ಮುಕ್ತವಾಗಿಲ್ಲ ಎಂದಿದ್ದಾರೆ. ಮಹಿಳೆಯರಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ಆ ಬಗ್ಗೆ ಸ್ಪಷ್ಟನೆ ನೀಡಬೇಕು. ಇತ್ತ ದೂರು ನೀಡುವ ಮಹಿಳೆಯರೂ
ಸೌಜನ್ಯಯುತವಾದ ಹಾದಿಯಲ್ಲಿ ದೂರು ನೀಡಬೇಕು.
● ಕಮಲ ಹಾಸನ್, ನಟ-ರಾಜಕಾರಣಿ