ಗಂಗಾವತಿ: ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆ ಗೇಟ್ ಮುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಪಾಲಕ ಅಭಿಯಂತರ ನಾಗಭೂಷಣ ಅವರನ್ನು ಕೂಡಲೇ ಅಮಾನತು ಮಾಡುವಂತೆ ತುಂಗಭದ್ರಾ ಉಳಿಸಿ ಆಂದೋಲನ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಸಮಿತಿ ಸದಸ್ಯರು ಗುರುವಾರ ಮುನಿರಾಬಾದ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಸಮಗ್ರ ವರದಿ ನೀಡಿ ಅಧಿಕಾರಿಗಳ ಕರ್ತವ್ಯನಿರ್ಲಕ್ಷ್ಯದ ಬಗ್ಗೆ ತಿಳಿಸಲಾಗುತ್ತದೆ ಎಂದು ಸಮಿತಿಯ ಜೆ. ಭಾರದ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷ ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರಿಲ್ಲದ್ದಿದಾಗ (ಏಪ್ರೀಲ್-ಮೇ ತಿಂಗಳಲ್ಲಿ) ಗ್ರೀಸಿಂಗ್, ಪೆಂಟಿಂಗ್ ಹಾಗೂ ಇತ್ಯಾದಿ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಐದಾರು ವರ್ಷಗಳಿಂದ ಈ ರೀತಿಯ ನಿರ್ವಹಣೆ ಮಾಡಲಾಗಿಲ್ಲ. ಆದರೆ ಪ್ರತಿ ವರ್ಷ ನಿರ್ವಯಹಣೆಯ ಬಿಲ್ ಎತ್ತಲಾಗಿದೆ. ಈ ಕಾಲುವೆಯ ನಿರ್ವಹಣೆಯ ಹೊಣೆ ತುಂಗಭದ್ರಾ ಜಲಾಶಯದ ನಂಬರ್-1 ವಿಭಾಗದ ಕಾರ್ಯಪಾಲಕ ಅಭಿಯಂತರರದ್ದು, ಕಳೆದ ಐದು ವರ್ಷಗಳಿಂದ ಈ ವಿಭಾಗಕ್ಕೆ ಕಾರ್ಯಪಾಲಕ ಅಭಿಯಂತರ ನಾಗಭೂಷಣ ಅವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಈ ಅನಾಹುತಕ್ಕೆ ಕಾರಣವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎಡದಂಡೆ ಮೇಲ್ಮಟ್ಟದ ಕಾಲುವೆಯ ಹೆಚ್ಚುವರಿ ನೀರು ಹೋಗಲು ಕಾಲುವೆಯ ಒಂದನೇ ಕಿ.ಮೀನಲ್ಲಿ ಎಸ್ಕೇಪ್ ಹಳ್ಳ ತೋಡಲಾಗಿದೆ. ಈ ಹಳ್ಳವು ಹರಿದು ಎಡದಂಡೆ ಮುಖ್ಯಕಾಲುವೆ (ರಾಯಚೂರಿಗೆ ಹರಿಯುವ ಕಾಲುವೆ) ಒಂದನೇ ಕಿ.ಮೀ. ಬಳಿ ಅಂಡರ್‌ಪಾಸ್ (ಮುಖ್ಯ ಕಾಲುವೆ ಕೆಳಭಾಗದಿಂದ) ಹರಿದು ಹೊಳೆ ಮುದ್ಲಪುರ ಸೀಮಾದ ಮೂಲಕ ಜಲಾಶಯದ ಮುಂಭಾಗದ ತುಂಗಭದ್ರಾ ನದಿ ಸೇರುತ್ತದೆ. ಈಗ ಈ ಕಾಲುವೆಯ ನಿರ್ವಹಣೆ ಇಲ್ಲದೇ ಮುಖ್ಯ ಗೇಟ್ ಕಿತ್ತು ಹೋಗಿರುವುದರಿಂದ 36 ಕ್ಯೂಸೆಕ್ ಹರಿಯಬೇಕಾದ ಕಾಲುವೆಯಲ್ಲಿ ಈಗ 250ರಿಂದ 300 ಕ್ಯೂಸೆಕ್ ನೀರು ಹರಿಯುತ್ತಿದೆ. ರಾಜ್ಯದ ಹೆಸರಾಂತ ಜಪಾನ್ ಮಾದರಿಯ ಪಂಪಾವನ ಶೇ. 80ರಷ್ಟು ಮುಳುಗಡೆಯಾಗಿದ್ದು, ಅಲ್ಲಿಯ ನರ್ಸರಿಯ ಲಕ್ಷಾಂತರ ಸಸಿಗಳು, ಹುಲ್ಲು ಹಾಸು, ಪಗೋಡಗಳು, ಔಷಧೀಯ ಸಸ್ಯಗಳು ಹಾಳಾಗಿವೆ. ಅಲ್ಲದೇ ಸಾವಿರಾರು ಪಕ್ಷಿಗಳು ನೆಲೆಯಾಗಿದ್ದ ಪಂಪಾವನ ಜಲಾವೃತ್ತದಿಂದ ನೆಲೆ ಕಳೆದುಕೊಂಡು ಪರಿತಪಿಸುತ್ತಿವೆ. ಕಾಲುವೆಯಲ್ಲಿ 250 ಕ್ಯೂಸೆಕ್‌ಗೂ ಅಧಿಕ ನೀರು ಬಂದಿದ್ದರಿಂದ ರಸ್ತೆಯ ಕೆಳಭಾಗದ ಪೈಪ್ ಔಟ್ಲೆಟ್‌ನಲ್ಲಿ ಅಷ್ಟೂ ಪ್ರಮಾಣದ ನೀರು ಹೊರ ಹೋಗದೇ ಪಂಪಾವನ ಜಲಾವೃತ್ತವಾಗಿದೆ. ಇದರ ವರದಿ ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಡಿ.ಎಚ್. ಪೂಜಾರ, ಶಿವಪ್ರಸಾದ ಚಲಸಾನಿ, ವಿಶ್ವನಾಥ ರಾಜ್, ಆನಂದ್ ಭಂಡಾರಿ, ಚಂದ್ರಪ್ಪ, ವೀರಭದ್ರಯ್ಯ ಭೂಸನೂರಮಠ, ಖಾಜಾವಲಿ, ಜನಾರ್ದನ್, ಸುದರ್ಶನ ವರ್ಮಾ, ಎಚ್.ಎನ್. ಬಡಿಗೇರ ಇದ್ದರು.