Advertisement

ಅಭ್ಯಾಸ ಪಂದ್ಯಗೆದ್ದ ಇಂಗ್ಲೆಂಡ್‌ 

03:45 AM Jan 11, 2017 | Harsha Rao |

ಮುಂಬಯಿ: ಮಂಗಳವಾರ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್‌ ಇಲೆವೆನ್‌ 3 ವಿಕೆಟ್‌ಗಳಿಂದ ಭಾರತ “ಎ’ ತಂಡವನ್ನು ಸೋಲಿಸಿದೆ.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಧೋನಿ ಪಡೆ 5 ವಿಕೆಟಿಗೆ 304 ರನ್‌ ಪೇರಿಸಿದರೆ, ಮಾರ್ಗನ್‌ ಬಳಗ 48.5 ಓವರ್‌ಗಳಲ್ಲಿ 7 ವಿಕೆಟಿಗೆ 307 ರನ್‌ ಬಾರಿಸಿ ಗೆದ್ದು ಬಂದಿತು.

ಆರಂಭಿಕರಾದ ಜಾಸನ್‌ ರಾಯ್‌ (62), ಅಲೆಕ್ಸ್‌ ಹೇಲ್ಸ್‌ (40), ವನ್‌ಡೌನ್‌ ಬ್ಯಾಟ್ಸ್‌ಮನ್‌ ಸ್ಯಾಮ್‌ ಬಿಲ್ಲಿಂಗ್ಸ್‌ (93), ಜಾಸ್‌ ಬಟ್ಲರ್‌ (46), ಲಿಯಮ್‌ ಡಾಸನ್‌ (41) ಇಂಗ್ಲೆಂಡ್‌ ಚೇಸಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಿದರು. ಆತಿಥೇಯರ ಪರ ಕುಲದೀಪ್‌ ಯಾದವ್‌ 5 ವಿಕೆಟ್‌ ಕಿತ್ತರು. ಅಂಬಾಟಿ ರಾಯುಡು ಶತಕ ವ್ಯರ್ಥವಾಯಿತು.

ರಾಯುಡು ಶತಕದಾಟ
ಭಾರತ ತಂಡದ ಆಕರ್ಷಣೆಯೆಂದರೆ ಅಂಬಾಟಿ ರಾಯುಡು ಅವರ ಶತಕದಾಟ. ಇಂಗ್ಲೆಂಡ್‌ ಎದುರಿನ ಯಾವುದೇ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನವನ್ನೇ ಸಂಪಾದಿಸದ ರಾಯುಡು 97 ಎಸೆತಗಳಿಂದ ಭರ್ತಿ 100 ರನ್‌ ಬಾರಿಸಿ ನಿವೃತ್ತರಾದರು. ಇದರಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್‌ ಒಳಗೊಂಡಿತ್ತು.

ಗಾಯಾಳಾಗಿ ಚೇತರಿಸಿದ ಆರಂಭಕಾರ ಶಿಖರ್‌ ಧವನ್‌, ಬಹಳ ಕಾಲದ ಬಳಿಕ ಏಕದಿನ ತಂಡಕ್ಕೆ ಮರಳಿದ ಯುವರಾಜ್‌ ಸಿಂಗ್‌ ಹಾಗೂ ಕೊನೆಯ ಸಲ ಭಾರತ ತಂಡವೊಂದರ ಚುಕ್ಕಾಣಿ ಹಿಡಿದ ಮಹೇಂದ್ರ ಸಿಂಗ್‌ ಧೋನಿ ಅವರೆಲ್ಲ ಅರ್ಧ ಶತಕ ಬಾರಿಸಿ ಉತ್ತಮ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದು ಓಪನರ್‌ ಮನ್‌ದೀಪ್‌ ಸಿಂಗ್‌ (8) ಮತ್ತು ಸಂಜು ಸ್ಯಾಮ್ಸನ್‌ ಮಾತ್ರ (0).

Advertisement

ದ್ವಿತೀಯ ವಿಕೆಟಿಗೆ ಜತೆಗೂಡಿದ ಧವನ್‌-ರಾಯುಡು 111 ರನ್‌ ಪೇರಿಸಿ ಇಂಗ್ಲೆಂಡ್‌ ದಾಳಿಗೆ ಸವಾಲಾದರು. ಧವನ್‌ ಗಳಿಕೆ 84 ಎಸೆತಗಳಿಂದ 63 ರನ್‌ (8 ಬೌಂಡರಿ, 1 ಸಿಕ್ಸರ್‌). ಅಭಿಮಾನಿಗಳಲ್ಲಿ ವಿಪರೀತ ಕಾತರ, ನಿರೀಕ್ಷೆ ಮೂಡಿಸಿದ್ದ ಯುವರಾಜ್‌ ಸಿಂಗ್‌ 48 ಎಸೆತಗಳಿಂದ 56 ರನ್‌ ಸಿಡಿಸಿದರು. ಯುವಿ ಇನ್ನಿಂಗ್ಸಿನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಯಲ್ಪಟ್ಟಿತು.

5ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಧೋನಿ 40 ಎಸೆತ ಗಳಿಂದ 68 ರನ್‌ ಬಾರಿಸಿ ಅಜೇಯರಾಗಿ ಉಳಿದರು. 8 ಬೌಂಡರಿ, 2 ಸಿಕ್ಸರ್‌ ಬಾರಿಸಿ ಅಭಿಮಾನಿಗಳನ್ನು ರಂಜಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ “ಎ’-5 ವಿಕೆಟಿಗೆ 304 (ರಾಯುಡು 100, ಧೋನಿ ಔಟಾಗದೆ 68, ಧವನ್‌ 63, ಯುವರಾಜ್‌ 56, ವಿಲ್ಲಿ 55ಕ್ಕೆ 2, ಬಾಲ್‌ 61ಕ್ಕೆ 2). ಇಂಗ್ಲೆಂಡ್‌ ಇಲೆವೆನ್‌-48.5 ಓವರ್‌ಗಳಲ್ಲಿ 7 ವಿಕೆಟಿಗೆ 307 (ಬಿಲ್ಲಿಂಗ್ಸ್‌ 93, ರಾಯ್‌ 62, ಬಟ್ಲರ್‌ 46, ಡಾಸನ್‌ 41, ಕುಲದೀಪ್‌ 60ಕ್ಕೆ 5).

Advertisement

Udayavani is now on Telegram. Click here to join our channel and stay updated with the latest news.

Next