Advertisement

ಹಾಸ್ಟೆಲ್‌ನಲ್ಲಿ ಪಾಪ ಪಾಂಡು!

06:00 AM Nov 27, 2018 | |

ನಮ್ಮ ರೂಂಮೇಟ್‌ ಆಗಿದ್ದ ಪಾಂಡು, ಅದೆಷ್ಟು ಅಮಾಯಕನೆಂದರೆ “ಲೋ, ಮುಂದಿನ ತಿಂಗಳಿನಿಂದ, ತಿಂಗಳಿಗೆ 32 ದಿನ ಅಂತೆ. ಸರ್ಕಾರಿ ಆದೇಶ ಆಗಿದೆ’ ಎಂದರೆ ಹೌದಾ? ಎಂದು ನಂಬಿಬಿಡುತ್ತಿದ್ದ. ಅವನನ್ನು ಇಡೀ ಹಾಸ್ಟಲಿನವರು ಸಾಕಷ್ಟು ಗೋಳು ಹುಯ್ದುಕೊಳ್ಳುತ್ತಿದ್ದೆವು. 

Advertisement

1970ನೇ ಇಸವಿ. ನಾನಾಗ ಬೆಂಗಳೂರಿನ ಎಂ.ಇ.ಎಸ್‌. ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದೆ. ಸಮೀಪದ ಶೇಷಾದ್ರಿಪುರಂನ “ಬಡಗನಾಡು ಹಾಸ್ಟಲ್‌’ನಲ್ಲಿ ವಾಸ್ತವ್ಯ. ವಿಶಾಲಕೋಣೆಗಳು, ಹೆಚ್ಚಿನ ಸಂಖ್ಯೆಯ ಬಾತ್‌ರೂಮುಗಳು, ರುಚಿಯಾದ ಊಟ-ತಿಂಡಿ, ಒಳ್ಳೆಯ ವಾರ್ಡನ್‌..ಒಟ್ಟು 130 ಜನರಿದ್ದ ಹಾಸ್ಟೆಲ್‌ನಲ್ಲಿ ಯಾವುದೇ ಕಾರಣಕ್ಕೂ ಜಗಳ, ಗಲಾಟೆ ನಡೆಯುತ್ತಿರಲಿಲ್ಲ. 

ನಮ್ಮ ಕೋಣೆಯಲ್ಲಿ ನನ್ನನ್ನೂ ಸೇರಿಸಿ 4 ಜನ. ಇಬ್ಬರು ಸೀನಿಯರ್. ಒಬ್ಬ ಆನೇಕಲ್‌ನವ, ಅವನು ಮೌನಿ ಮಹಾರಾಜ. ತಾನಾಯಿತು, ತನ್ನ ಓದಾಯಿತು. ಇನ್ನೊಬ್ಬ ತಮಿಳಿನವ-ಹೆಸರು ಮುರುಗನ್‌. ಓದಿಗಿಂತ ಎನ್‌.ಸಿ.ಸಿ. ಹಾಗೂ ಬಾಡಿ ಬಿಲ್ಡಿಂಗ್‌ ಕಡೆಗೇ ಗಮನ. ದಪ್ಪ ಮೀಸೆ ಬಿಟ್ಟು ಎರಡೂ ತುದಿ ವೀರ ಪಾಂಡ್ಯ ಕಟ್ಟಬೊಮ್ಮನ್‌ ರೀತಿ ಮೇಲೇರಿಸಿದ್ದ. ನಿತ್ಯ ಶೂಗೆ ಪಾಲಿಷ್‌. ಮೀಸೆಗೆ ಎಣ್ಣೆ ಮಸಾಜ್‌. ಊಟ ತಪ್ಪಿಸಿದರೂ ಅದನ್ನು ತಪ್ಪಿಸುತ್ತಿರಲಿಲ್ಲ.

ಈ ಮುರುಗನ್‌, ಪಕ್ಕಾ ಎಂ.ಜಿ.ಆರ್‌ ಭಕ್ತ. ಅವನ ಟ್ರಂಕ್‌ ಇಟ್ಟಿದ್ದ ಗೋಡೆಯ ಮೇಲ್ಭಾಗದಲ್ಲಿ ಎಂ.ಜಿ.ಆರ್‌.ರ ಒಂದು ಫೋಟೋ. ಅದಕ್ಕೆ ನಿತ್ಯ ಮುತ್ತು ಕೊಟ್ಟೇ ಹೊರ ಹೋಗುತ್ತಿದ್ದ. ಅವನ ಸಹವಾಸದಿಂದ ನಾನು ಬೆಂಗಳೂರಿನಲ್ಲಿ ನೋಡಿದ ಮೊದಲ ಚಿತ್ರ, ಮೆಜೆಸ್ಟಿಕ್‌ ಟಾಕೀಸ್‌ನಲ್ಲಿ “ಅಡಿಮೈ ಪೆಣ್‌’. ನಂತರ ಸಾಲು ಸಾಲು ಎಂ.ಜಿ.ಆರ್‌ ಚಿತ್ರಗಳೇ! ಅನ್ಬೇವಾ, ಕುಡಿಯಿರಂದ ಕೋಯಿಲ್‌, ನಂನಾಡು, ರಿಕ್ಷಾಕಾರನ್‌… 

ಅಷ್ಟರಲ್ಲಿ ವಾಟಾಳ್‌ ನಾಗರಾಜ್‌ರ ಕನ್ನಡ ಚಿತ್ರ ಉಳಿಸಿ ಚಳವಳಿಯಿಂದ ಪ್ರಭಾವಿತನಾಗಿ, ಡಾ. ರಾಜ್‌ಕುಮಾರ್‌ರ ಪ್ರಭಾವಳಿಗೆ ಸಿಲುಕಿದೆ. ನಂತರ ನೋಡಿದ್ದೆಲ್ಲಾ ಬರೀ ಕನ್ನಡ ಚಿತ್ರಗಳೇ! ಭಲೇ ಜೋಡಿ, ಶರಪಂಜರ, ಬಿಡುಗಡೆ, ನಾಗರಹಾವು… ನನ್ನ ಮತ್ತೂಬ್ಬ ರೂಂ ಒಡನಾಡಿಯೇ ಈ ಪಾಂಡು. ಪಾ.ಪ.ಪಾಂಡು ಧಾರಾವಾಹಿಯ ಪಾಂಡುವಿನ ಥರಾನೇ ಇದ್ದ ಈ ಕಂಪ್ಲಿ ಪಾಂಡು. ಆ ಪಾಂಡುಗೆ ಬಾಲ್ಕನಿಯಿಂದ ಎತ್ತಿ ಎಸೆಯಲು ಶ್ರೀಮತಿ ಪಾಚೋ ಇದ್ದರೆ, ಇವನನ್ನು ಹಾಸಿಗೆಯಿಂದ ಎತ್ತಿ ಹೊರ ಹಾಕಲು ನಾವು ರೂಂನಲ್ಲಿ ಮೂವರಿದ್ದೆವು! ಅದೆಷ್ಟು ಅಮಾಯಕನೆಂದರೆ “ಲೋ, ಮುಂದಿನ ತಿಂಗಳಿನಿಂದ, ತಿಂಗಳಿಗೆ 32 ದಿನ ಅಂತೆ. ಸರ್ಕಾರಿ ಆದೇಶ ಆಗಿದೆ’ ಎಂದರೆ ಹೌದಾ? ಎಂದು ನಂಬಿಬಿಡುತ್ತಿದ್ದ. ಅವನನ್ನು ಇಡೀ ಹಾಸ್ಟಲಿನವರು ಸಾಕಷ್ಟು ಗೋಳು ಹುಯ್ದುಕೊಳ್ಳುತ್ತಿದ್ದೆವು. 

Advertisement

ಸೆಖೆಯೆಂದು ಅವನು ಮೇಲೆ ಮಲಗಲು ಹೋದಾಗ, ಅವನ ತಲೆದಿಂಬಿನ ಕೆಳಗೆ ಮೊದಲೇ ರೆಡಿ ಮಾಡಿಟ್ಟುಕೊಂಡಿದ್ದ ತಿಗಣೆಯ ಪೊಟ್ಟಣ ಇಟ್ಟುಬಿಡುತ್ತಿದ್ದೆವು. ಇವನು ಮಲಗಿದ ಕೊಂಚ ಹೊತ್ತಿನಲ್ಲಿಯೇ ಗಿಲಿಗಿಲಿ ಗಿಲಕ್ಕು – ಕಾಲಗೆಜ್ಜೆ ಝಣಕ್ಕು ಎಂದು ಮೈ ಕೈ ಕೆರೆದುಕೊಳ್ಳುತ್ತಾ ನರ್ತಿಸುವುದನ್ನು ಕೇಕೆ ಹಾಕಿ ಆಸ್ವಾದಿಸುತ್ತಿದ್ದೆವು. ಸ್ನಾನಕ್ಕೆ ಹೋದಾಗ ಹೊರಗಿನಿಂದ ಚಿಲಕ ಹಾಕುವುದು, ತೆರೆದ ವೆಂಟಿಲೇಷನ್‌ನಲ್ಲಿ ಕೋಲು ತೂರಿಸಿ ಬಿಚ್ಚಿಟ್ಟ ಬಟ್ಟೆಗಳೆನ್ನಲ್ಲ ಹೊರಗೆಳೆದುಕೊಂಡು ಅವನು ಹುಟ್ಟುಡುಗೆಯಲ್ಲಿಯೇ ಹೊರ ಬರುವಂತೆ ಮಾಡುವುದು, ಅವನ ಕಾಫಿ ಲೋಟಕ್ಕೆ ಗೊತ್ತಾಗದಂತೆ ಉಪ್ಪು ಹಾಕುವುದು, ಸುಳ್ಳೇ ಫೋನ್‌ ಬಂದಿದೆ ಎಂದು ಕೆಳ ಅಂತಸ್ತಿನ ಆಫೀಸ್‌ ರೂಮ್‌ಗೆ ಓಡಿಸುವುದು ಮಾಮೂಲಿಯಾಗಿತ್ತು.
 
ಇಂಥ ಪಾಂಡು ಒಂದು ವಿಷಯದಲ್ಲಿ ಮಾತ್ರ ನಮ್ಮನ್ನೆಲ್ಲ ಸುಸ್ತು ಮಾಡುತ್ತಿದ್ದ. ಅವನಿಗೆ ಹುರಿಕಡಲೆ ಅಂದರೆ ಪ್ರಾಣ. ಸಂಜೆ ಸರಿಯಾಗಿ ತಿಂದು ಬರುತ್ತಿದ್ದ. ರಾತ್ರಿ ಮಲಗಿದ ಕೊಂಚ ಹೊತ್ತಿಗೆ ಇವನ ಅಪಾನವಾಯು ಸಂಗೀತ ಕಛೇರಿ ಆರಂಭ. ನಾನಾ ನಾದಗಳಲ್ಲಿ ಸುಶ್ರಾವ್ಯವಾಗಿ ಹೂಸು ಬಿಡುತ್ತಿದ್ದ. ಗಬ್ಬು ವಾಸನೆ, ನಿದ್ರೆಹಾಳು.. ಅವನನ್ನು ನಾವು ಮೂವರೂ ಸೇರಿ ಹಾಸಿಗೆ ಸಮೇತ ಕಾರಿಡಾರ್‌ಗೆ ಎಸೆಯುತ್ತಿದ್ದೆವು.

ಹಾಸ್ಟೆಲ್‌ ಜೀವನ ಮೊದ ಮೊದಲು ಅನಾಥ, ಅಬ್ಬೇಪಾರಿ ಭಾವ ಮೂಡಿಸಿ, ಭಿನ್ನ ವ್ಯಕ್ತಿತ್ವದ ಸಹಪಾಠಿಗಳ ಸಾಂಗತ್ಯ, ಸಿಟ್ಟು, ಸೆಡವು, ರಂಜನೆ, ಕಲಹಗಳು ಇನ್ನಿತರೆ ಹಲವು ಹಳವಂಡಗಳ ನಡುವೆಯೂ ಅವಿಸ್ಮರಣೀಯವೆನಿಸುವುದಂತೂ ನಿಜ. ಅದಕ್ಕೇ, ನಾಲ್ಕು ದಶಕಗಳ ಹಿಂದಿನ ದಿನಗಳು, ಆ ನನ್ನ ಗೆಳೆಯರು ಇಂದಿಗೂ ನೆನಪಿನಪುಟಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. 

-ಕೆ.ಶ್ರೀನಿವಾಸರಾವ್‌, ಹರಪನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next