ಚಿತ್ರದುರ್ಗ: ಸಾಣೇಹಳ್ಳಿ ತರಳಬಾಳು ಶಾಖಾ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ ಗುರುಗಳಿಗೆ ಬಹಿರಂಗವಾಗಿ ಮನವಿ ಮಾಡಿದರು.
ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಗುರುವಾರ ರಾತ್ರಿ ಸಮಾರೋಪ ಭಾಷಣದಲ್ಲಿ ಈ ವಿಷಯ ಪ್ರಸ್ತಾಪ ಮಾಡಿದರು.
ನಮಗೆ 69 ವರ್ಷ ವಯಸ್ಸಾಗಿದ್ದು ಮತ್ತೊಬ್ಬರಿಗೆ ಸೂಕ್ತ ತರಬೇತಿ ನೀಡಿ ನಿಯುಕ್ತಿಗೊಳಿಸಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶ್ರೀ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಲ್ಲಿ ಮನವಿ ಮಾಡಿದರು.
ನಮ್ಮ ಆರಾಧ್ಯ ಗುರುಗಳು ಹಿಂದಿನ ಪೀಠಾಧ್ಯಕ್ಷರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ 60 ವರ್ಷಕ್ಕೆ ನಿವೃತ್ತಿಯಾಗಬೇಕು ಎಂದು ತ್ಯಾಗ ಪತ್ರದಲ್ಲಿ ಬರೆದಿದ್ದರು. ಯಾಕೆ ನಿವೃತ್ತಿಯಾಗಬೇಕು ಎನ್ನುವುದಕ್ಕೆ ಪತ್ರದಲ್ಲಿ ಹಲವು ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಜತೆಗೆ ಎಷ್ಟೋ ಮಠಗಳ ಸ್ವಾಮಿಗಳು ಲಿಂಗೈಕ್ಯರಾದ ನಂತರ ಆ ಮಠಗಳಿಗೆ ಸ್ವಾಮಿಗಳು ಇಲ್ಲದೆ, ಎಲ್ಲ ಕೆಲಸಗಳು ಸ್ಥಗಿತವಾಗಿ ಹಾಳು ಹಂಪೆಯಾಗಿವೆ ಎಂದರು.
ನಮಗೆ 60 ವರ್ಷವಾದಾಗಲೇ, 9 ವರ್ಷದ ಹಿಂದೆಯೇ ನಮ್ಮ ಸ್ಥಾನಕ್ಕೆ ಸೂಕ್ತವಾದವರನ್ನು ಹುಡುಕಿ ಸದ್ದರ್ಮ ಸಮಾಜದ ಅಧ್ಯಕ್ಷರಾದ ಜಯದೇವಪ್ಪ ಅವರಲ್ಲಿ ಪ್ರಸ್ತಾಪ ಮಾಡಿದ್ದೆ. ಈಗ 9 ವರ್ಷದ ನಂತರ ಮತ್ತೆ ಸಮಾಜ, ತರಳಬಾಳು ಗುರುಗಳಲ್ಲಿ ಮನವಿ ಮಾಡುತ್ತೇನೆ ಎಂದರು.