ಹೊಸದುರ್ಗ: ನರಕ ಸೃಷ್ಟಿ ಮಾಡುವ ಸಾಮಾಜಿಕ ಪಿಡುಗುಗಳಲ್ಲಿ ಮದ್ಯಪಾನವೂ ಒಂದು. ಗುಜರಾತ್,ಬಿಹಾರ, ಆಂಧ್ರ ಮುಂತಾದ ಕಡೆ ಸಂಪೂರ್ಣ ಮದ್ಯ ನಿಷೇಧವಾಗಿರುವಾಗ ಕರ್ನಾಟಕದಲ್ಲಿ ಯಾಕೆ ಸಾಧ್ಯವಾಗದು ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದರು.
ತಾಲೂಕಿನ ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ನಡೆದ “ಸಾಣೇಹಳ್ಳಿ ಮದ್ಯಮುಕ್ತ ಗ್ರಾಮ’ ಕುರಿತು ಅ ಧಿಕಾರಿಗಳ ಮತ್ತು ಮದ್ಯ ಮಾರಾಟ ಗುತ್ತಿಗೆದಾರರ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಭಾರತ ಸಾಧು-ಸಂತರ, ಧರ್ಮದ ನಾಡು, ಸಂಸ್ಕೃತಿಯ ನೆಲೆವೀಡು, ಶರಣರ ನಾಡು, ಗಾಂಧಿ ಬೀಡು. ಈ ನೆಲದಲ್ಲಿ ಸತ್ಯ, ಪ್ರಾಮಾಣಿಕತೆ, ಸಹೋದರತ್ವ ಸದಾ ಆಚರಣೆಯಲ್ಲಿರುತ್ತವೆ ಎನ್ನುವ ಗೌರವವನ್ನು ಪ್ರಾಚೀನ ಕಾಲದಿಂದಲೂ ಪಡೆದುಕೊಂಡು ಬಂದಿತ್ತು. ಆದರೆ ಇಂದು ಆ ಸ್ಥಿತಿ ಇಲ್ಲ. ಕಾರಣ ಜನರು ದುಶ್ಚಟಗಳಿಗೆ ಬಲಿಯಾಗಿ ನೈತಿಕತೆಯನ್ನು ಕಳೆದುಕೊಂಡು ಹೀನಾವಸ್ಥೆಗೆ ಇಳಿದಿದ್ದಾರೆ. “ಒಲೆ ಹತ್ತಿ ನಿಲಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲು ಬಾರದು’ ಎಂದು ಬಸವಣ್ಣನವರು ಹೇಳುವಂತೆ ಇಂದು ಇಡೀ ವಿಶ್ವಕ್ಕೇ ಸಾಮಾಜಿಕ ಪಿಡುಗುಗಳ ಬೆಂಕಿ ಬಿದ್ದಿದೆ ಎಂದು ವಿಷಾದಿಸಿದರು.
ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ರಾಜ್ಯದಲ್ಲಿ ಮದ್ಯ ನಿಷೇಧ ಜಾರಿಯಾಗಬೇಕೆನ್ನುವ ಹೋರಾಟವನ್ನು ಪೂಜ್ಯರು ಜೀವಂತವಾಗಿಟ್ಟಿದ್ದಾರೆ. ಅದಕ್ಕಾಗಿ ಗುರುಗಳನ್ನು ನಾನು ವೈಯಕ್ತಿಕವಾಗಿ ಅಭಿನಂದಿಸುವೆ. ಸರಕಾರ ಮನಸ್ಸು ಮಾಡಿದರೆ ಇದೇನೂ ದೊಡ್ಡದಲ್ಲ. ಆದರೆ ಆದಾಯದ ದೃಷ್ಟಿಯಿಂದ ಯಾವ ಸರಕಾರವೂ ಒಪ್ಪುವುದಿಲ್ಲ. ದಿನದಿಂದ ದಿನಕ್ಕೆ ಮದ್ಯದಿಂದ ಬರುವ ಆದಾಯ ಹೆಚ್ಚುತ್ತಲೇ ಇದೆ. ಕೆಲ ಬಾರ್ ಮಾಲೀಕರು, ಗುತ್ತಿಗೆದಾರರು ಪಕ್ಕದಲ್ಲಿಯೇà ಇರುವ ಶಾಲೆಗಳನ್ನೇ ಮುಚ್ಚಿಸುವಷ್ಟು ಪ್ರಭಾವಶಾಲಿಗಳಿದ್ದಾರೆ. ಅವರೂ ಸಹ ಮಾನವೀಯ ನೆಲೆಯಲ್ಲಿ ಯೋಚಿಸಿ ಅನಧಿಕೃತ ಮಾರಾಟಕ್ಕೆ ಮುಂದಾಗದಿರಲಿ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಅಬಕಾರಿ ಉಪ ಆಯುಕ್ತ ನಾಗಶಯನ ಮಾತನಾಡಿ, ಅನಧಿಕೃತವಾಗಿ ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ತಡೆಯಲು ನಮ್ಮ ಇಲಾಖೆ ಬದ್ಧವಾಗಿದೆ ಎಂದರು. ಹೊಸದುರ್ಗ ಪೋಲಿಸ್ ಉಪನಿರೀಕ್ಷಕ ಶಿವಕುಮಾರ್ ಮಾತನಾಡಿ, ಗುರುಗಳದ್ದು ಯಾವಾಗಲೂ ಒಂದೇ ಒಂದು ಬೇಡಿಕೆ ಸಾಣೇಹಳ್ಳಿಯನ್ನು ಮದ್ಯಮುಕ್ತ ಗ್ರಾಮವನ್ನಾಗಿಸಬೇಕೆನ್ನುವುದು. ಆದರೆ ಸಾಮಾಜಿಕ ಹೊಣೆಗಾರಿಕೆಯ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಬಡತನ, ಕೌಟುಂಬಿಕ ದುಃಸ್ಥಿತಿಯ ಹಿನ್ನೆಲೆ ಇರುವವರು ಅನ ಕೃತವಾಗಿ ಮದ್ಯ ಮಾರಾಟ ಮಾಡಲು ಶುರು ಮಾಡುತ್ತಾರೆ. ಇಂಥವರನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದರು.
ಹೊಸದುರ್ಗ ತಾಲೂಕಿನ ಗುತ್ತಿಗೆದಾರರಾದ ಬೆಲಗೂರು ರವಿಕುಮಾರ್, ಮಂಜುನಾಥ್ ಹೊಸದುರ್ಗ, ಪ್ರವೀಣ್, ಕುಮಾರ್ ಮತ್ತಿತರರು, ಇನ್ನು ಮುಂದೆ ಒಂದೇ ಒಂದು ಬಾಟಲಿಯನ್ನೂ ಹಳ್ಳಿಗೆ ಕೊಡುವುದಿಲ್ಲ. ಸಮಾಜದ ಒಳಿತಿಗಾಗಿ ನಾವು ನಿಮ್ಮ ಮಾತನ್ನು ಪಾಲಿಸುತ್ತೇವೆ ಎಂದು ತಿಳಿಸಿದರು. ಅಬಕಾರಿ ನಿರೀಕ್ಷಕರಾದ ಪ್ರಮೀಳಾ, ಪೋಲಿಸ್ ಉಪನಿರೀಕ್ಷಕ ನಾಗರಾಜು, ಅಬಕಾರಿ ಉಪನಿರೀಕ್ಷಕ ನಾಗರಾಜ್, ದಿನೇಶ್ ಉಪಸ್ಥಿತರಿದ್ದರು. ಸುಪ್ರಭೆ ಮತ್ತು ಮುಕ್ತ ವಚನಗೀತೆಗಳನ್ನು ಹಾಡಿದರು. ಅಧ್ಯಾಪಕ ಎಚ್.ಎಸ್. ದ್ಯಾಮೇಶ್ ನಿರೂಪಿಸಿದರು.