Advertisement

ವಿದುಷಿ ಅಶ್ವಿನಿ ಭಿಡೆ ಅವರಿಗೆ ಪಂಡಿತ್ ರಾಜಗುರು ರಾಷ್ಟ್ರೀಯ ಪ್ರಶಸ್ತಿ

07:32 PM Aug 18, 2023 | Team Udayavani |

ಧಾರವಾಡ : ಸ್ವರಸಾಮ್ರಾಟ ಪಂಡಿತ್ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಪಂ. ಬಸವರಾಜ ರಾಜಗುರು ಅವರ 103ನೇ ಜನ್ಮದಿನಾಚರಣೆ ಅಂಗವಾಗಿ ಕೊಡ ಮಾಡುವ 2023-24 ನೇ ಸಾಲಿನ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿಗೆ ಮುಂಬೈನ ಸಂಗೀತ ಕಲಾವಿದೆ ವಿದುಷಿ ಅಶ್ವಿನಿ ಭಿಡೆ-ದೇಶಪಾಂಡೆ ಭಾಜನರಾಗಿದ್ದಾರೆ.

Advertisement

ಈ ಪ್ರಶಸ್ತಿಯು 1 ಲಕ್ಷ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದ್ದು, ತಲಾ 25 ಸಾವಿರ ರೂ. ನಗದು ಒಳಗೊಂಡ ರಾಷ್ಟ್ರೀಯ ಯುವ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದ್ದು, ಧಾರವಾಡದ ತಬಲಾ ವಾದಕರಾದ ಉದಯ ಕುಲಕರ್ಣಿ ಹಾಗೂ ಬೆಂಗಳೂರಿನ ಗಾಯಕರಾದ ಇಮಾನ ದಾಸ್ ಅವರಿಗೆ ಯುವ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಆ.24 ರಂದು ಸಂಜೆ 5:30ಕ್ಕೆ ಆಲೂರು ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಪ್ರಶಸ್ತಿ ಪುರಸ್ಕೃತರಾದ ವಿದುಷಿ ಅಶ್ವಿನಿ ಭಿಡೆ, ದೇಶಪಾಂಡೆ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ. ಹಾಗೂ ಯುವ ಪ್ರಶಸ್ತಿ ಪಡೆದ ಕಲಾವಿದರಾದ ಉದಯ ಕುಲಕರ್ಣಿ, ಧಾರವಾಡ ಅವರಿಂದ ತಬಲಾ ಸೋಲೋ ವಾದನ ಮತ್ತು ಇಮಾನ ದಾಸ್ ಅವರ ಗಾಯನ ಕಾರ್ಯಕ್ರಮ ನೀಡಲಿದ್ದಾರೆ.

ವಿದುಷಿ ಅಶ್ವಿನಿ ಭಿಡೆ
ಪಿಟೀಲು ವಾದಕ ಡಿ.ಕೆ. ದಾತಾರ್ ಅವರ ಹಿರಿಯ ಸಹೋದರ ನಾರಾಯಣರಾವ್ ದಾತಾರ್ ಅವರಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದು, ತಾಯಿ ಮಾಣಿಕ್ ಭಿಡೆ ಅವರಿಂದ ಜೈಪುರ-ಅತ್ರೌಲಿ ಶೈಲಿಯಲ್ಲಿ ಸಂಗೀತವನ್ನು ಕಲಿತಿದ್ದಾರೆ. ಅಶ್ವಿನಿ ಭಿಡೆ ಅವರು ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮುಂಬನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದಿಂದ ಸಂಗೀತ ವಿಶಾರದ ಮತ್ತು ಬಾಬಾ ಅಟಾಮಿಕ್ ರಿಸರ್ಚ ಸೆಂಟರ್‌ನಿಂದ ಬಯೋಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದು, ಗೌರವ ಡಿ.ಲಿಟ್‌ಗೂ ಸಹ ಭಾಜನರಾಗಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಲಭಿಸಿದೆ.

Advertisement

ಡಾ.ಉದಯ ಕುಲಕರ್ಣಿ
ಆಕಾಶವಾಣಿ ಹಾಗೂ ದೂರದರ್ಶನದ ‘ಎ’ ಶ್ರೇಣಿಯ ಕಲಾವಿದರಾಗಿದ್ದು, ಪಂ.ಎಚ್.ಸೋಮಶೇಖರ, ಡಾ.ರಾಚಯ್ಯ ಹಿರೇಮಠ, ಪಂ.ರವೀಂದ್ರ ಯಾವಗಲ್ಲ, ಪಂ.ಸೂರಜ ಪುರಂದರೆ ಇವರಂತಹ ದಿಗ್ಗಜ ಕಲಾವಿದರಿಂದ ಗುರು-ಶಿಷ್ಯ ಪರಂಪರೆಯ ಮೂಲಕ ತಬಲಾ ಕಲೆಯಲ್ಲಿ ಉನ್ನತ ಅಭ್ಯಾಸ ಮಾಡಿದ್ದಾರೆ. ಪ್ರಸ್ತುತ ವಿಶ್ವವಿಖ್ಯಾತ ತಬಲಾ ವಾದಕರಾದ ಪಂ.ಅನೀಂದೂ ಚಟರ್ಜಿ ಅವರಲ್ಲಿ ಉನ್ನತ ತರಬೇತಿಯನ್ನು ಪಡೆಯುತ್ತಿದ್ದಾರೆ. ತಮ್ಮ ಉತ್ಕೃಷ್ಟ ಮಟ್ಟದ ಕಲಾ ಪ್ರದರ್ಶನದಿಂದಾಗಿ ಅವರು ತಬಲಾ ಸ್ವತಂತ್ರ ವಾದನ ಹಾಗೂ ಸಾಥ್ ಸಂಗತ್ ಎರಡರಲ್ಲಿಯೂ ದೇಶಾದ್ಯಂತ ಬಹುಬೇಡಿಕೆಯ ಕಲಾವಿದರಾಗಿದ್ದಾರೆ. ಪದ್ಮಭೂಷಣ ಡಾ.ಎನ್. ರಾಜಮ್, ಪದ್ಮಶ್ರೀ ಎಂ. ವೆಂಕಟೇಶಕುಮಾರ. ಪಂ. ಕೇದಾರ ಬೋಡಸ್, ಪಂ. ರೋಣು ಮುಜುಮದಾರ್ ಮುಂತಾದ ದಿಗ್ಗಜ ಕಲಾವಿದರ ಜತೆಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ.

ಇಮಾನ ದಾಸ್
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಟಿಯಾಲಾ ಘರಾನಾದ ಶಾಸ್ತ್ರೀಯ ಗಾಯಕರಾಗಿದ್ದು, ದೂರದರ್ಶನದ ಶ್ರೇಣಿಕೃತ ಕಲಾವಿದರು. ದೆಹಲಿಯ ಶುಭಿ ಪಬ್ಲಿಕೇಶನ್ಸ್ ಅವರಿಂದ ಒಂದು ಸಂಗೀತ ಪುಸ್ತಕ ಪ್ರಪಂಚದಾದ್ಯಂತ ಬಿಡುಗಡೆಯಾಗಿದೆ. ಅಮೇಜಾನ್‌ನಲ್ಲಿ ಬೆಸ್ಟ ಸೆಲ್ಲರ ಆಗಿದೆ. ಸಂಗೀತದಲ್ಲಿನ ಅತ್ಯುತ್ತಮ ಕೊಡುಗೆಗಳಿಗಾಗಿ ೨೦೨೦ರ ಬ್ಯುಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿ ವಿಜೇತರಿವರು. ವಿದ್ವಾನ ಇಮಾನ ದಾಸ್ ಅವರು ಕಳೆದ ೨೦ ವರ್ಷಗಳಿಂದ ಪ್ರಪಂಚದಾದ್ಯಂತ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ಜರ್ಮನಿ, ಆಸ್ಟ್ರೇಲಿಯಾ, ಬೆಲ್ಜಿಯಂ, ಇಟಲಿ ಹಾಗೂ ಪ್ರಾನ್ಸ್‌ನಲ್ಲಿ ಪ್ರಮುಖ ರಾಯಭಾರ ಕಚೇರಿಗಳಲ್ಲಿ ಕಾರ್ಯಕ್ರಮ ನೀಡಿರುತ್ತಾರೆ. ಅಮೀತ್ ಕುಮಾರ, ಸಿತಾರ್ ದಂತಕಥೆ ಪಂ. ಸುಬ್ರೋಟೊರಾವ್ ಚೌಧರಿ ಅವರೊಂದಿಗೆ ಜುಗಲಬಂದಿಗಳನ್ನು ಸಹ ಮಾಡಿದ್ದಾರೆ. ಬೆಂಗಳೂರು ಹಾಗೂ ಕೊಲ್ಕತಾದಲ್ಲಿ ಅವರು ಓಂಕಾರ ಮ್ಯೂಸಿಕ್ ಅಕಾಡೆಮಿ ತೆರೆದಿದ್ದಾರೆ, ಅಕಾಡೆಮಿಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next