ಹೊಸದಿಲ್ಲಿ :ಜನ ಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಗೂಢ ಸಾವಿನ ತನಿಖೆಯನ್ನು ಜವಹಾರ್ ಲಾಲ್ ನೆಹರು ಅವರು ಸರಿಯಾಗಿ ಮಾಡಿರಲಿಲ್ಲ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ.
ಶ್ಯಾಮ್‌ಪ್ರಸಾದ್ ಮುಖರ್ಜಿ ಅವರ ಪುಣ್ಯ ತಿಥಿಯಂದು ಬಿಜೆಪಿ ಕಚೇರಿಯಲ್ಲಿ ಪುಷ್ಪ ನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸಾವಿನ ಕುರಿತಾಗಿ ತನಿಖೆಗಾಗಿ ಇಡೀ ದೇಶವೇ ಎದುರು ನೋಡುತ್ತಿತ್ತು, ಆದರೆ ನೆಹರು ಅವರು ತನಿಖೆಗೆ ಆದೇಶ ನೀಡಲಿಲ್ಲ. ಇತಿಹಾಸ ಇದಕ್ಕೆ ಸಾಕ್ಷಿಯಾಗಿದೆ. ಮುಖರ್ಜಿ ಅವರ ಬಲಿದಾನವನ್ನು ವ್ಯರ್ಥವಾಗಲು ಬಿಜೆಪಿ ಬಿಡುವುದಿಲ್ಲ ಎಂದರು.
ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿದ್ದ ಮುಖರ್ಜಿ ಅವರು ನೆಹರು ಸಂಪುಟದಲ್ಲಿ ಸಚಿವರಾಗಿದ್ದರು. ಕಾಶ್ಮೀರ ವಿಚಾರದಲ್ಲಿ ನೆಹರು ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಅವರು 1953 ರ ಜೂನ್ 23 ರಂದು ಕಾಶ್ಮೀರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು.
ಹಿಂದೂ ಮಹಾ ಸಭಾದಲ್ಲಿ ಸಕ್ರಿಯರಾಗಿದ್ದ ಮುಖರ್ಜಿ ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಿದ್ದರು. ಜನ ಸಂಘವೇ ಬಳಿಕ ಭಾರತೀಯ ಜನತಾ ಪಾರ್ಟಿಯಾಯಿತು.